ಕಲಬುರಗಿ: ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದು ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಕರೆ ತಂದು ಬೀಗಿದ್ದ ಕಮಲ ಪಡೆಗೆ ಹಿರಿಯ ನಾಯಕ, ಮಾಜಿ ಸಚಿವ ಕೆ.ಬಿ.ಶಾಣಪ್ಪ ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಗುರುಮಿಠಕಲ್ ಕ್ಷೇತ್ರದ ಹಿಂದಿನ ಬಿಜೆಪಿ ಅಭ್ಯರ್ಥಿ ಶಾಮರಾವ್ ಪ್ಯಾಟಿ ಶಾಕ್ ನೀಡಿದ್ದಾರೆ. ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸಾಕಷ್ಟು ಸಮರ್ಥ ಅಭ್ಯರ್ಥಿಗಳು ಬಿಜೆಪಿಯಲ್ಲಿದ್ದರೂ ಶಾಸಕ ಡಾ| ಉಮೇಶ್ ಜಾಧವ್ ಅವರನ್ನು ಕರೆ ತರುವ ಕುರಿತು ತಮ್ಮನ್ನು ಸೇರಿ ಯಾರೊಂದಿಗೂ ಚರ್ಚಿಸಿಲ್ಲ ಎಂದು ಬೇಸರಿಸಿಕೊಂಡು ಉಭಯ ನಾಯಕರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಶಾಣಪ್ಪ, “ನನಗೀಗ 82 ವರ್ಷ. ಚುನಾವಣೆಗೆ ನಿಲ್ಲುವ ಶಕ್ತಿಯಿಲ್ಲ. ಅಲ್ಲದೆ ಅಷ್ಟೊಂದು ಆರ್ಥಿಕ ಶಕ್ತಿಯೂ ನನ್ನಲ್ಲಿಲ್ಲ. ಸೌಜನ್ಯಕ್ಕಾದರೂ ಯಡಿಯೂರಪ್ಪ ಮತ್ತು ಪಕ್ಷದ ಇತರ ನಾಯಕರು ಕಲಬುರಗಿಯಲ್ಲಿ ಯಾರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರೆ ಗೆಲ್ಲಬಹುದು ಎನ್ನುವ ಕುರಿತು ಚರ್ಚಿಸಬಹುದಿತ್ತು. ಸಭೆಗಳಿಗೂ ನಮ್ಮನ್ನು ಕರೆಯಲಿಲ್ಲ. “ಆಪರೇಷನ್ ಕಮಲ ಸಿಡಿ’ ಬಿಡುಗಡೆ ಘಾಸಿಗೊಳಿಸಿದೆ. ಹೀಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಆಪ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಬಿಜೆಪಿ ಮುಖಂಡ ಶಾಮರಾವ್ ಪ್ಯಾಟಿ ಮಾತನಾಡಿ, ನಾನು ಕೂಡಾ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ಮುಂದಿನ ನಡೆ ಕುರಿತು ರವಿವಾರ ಸಮಾಲೋಚನೆ ನಡೆಸುತ್ತೇವೆ ಎಂದು ತಿಳಿಸಿದರು.
ಕೆ.ಬಿ. ಶಾಣಪ್ಪ ಮತ್ತು ನಾನು ಅಣ್ಣ-ತಮ್ಮಂದಿರಂತೆ ಇದ್ದೇವೆ. ಅವರು ಪಕ್ಷ ಬಿಡುತ್ತಿರುವುದು ನೋವು ತಂದಿದೆ. ಈ ಹಿಂದೆ ಶಹಾಬಾದ್ ಕ್ಷೇತ್ರದಲ್ಲಿ ನಮ್ಮ ಸಹೋದರನ ಎದುರು 100 ಮತಗಳಿಂದ ಗೆದ್ದ ವೇಳೆ ಮರು ಎಣಿಕೆ ಮಾಡಬೇಕೆಂಬ ಒತ್ತಡ ಬಂದರೂ ಸಹೋದರರು ಶಾಣಪ್ಪ ಅವರೂ ಒಳ್ಳೆಯವರಿದ್ದಾರೆ ಎಂದಿದ್ದರು. ಶಾಣಪ್ಪ ಅವರೊಂದಿಗೆ ಪಕ್ಷದ ನಾಯಕರು ಮಾತನಾಡಲಿದ್ದಾರೆ.
– ಡಾ| ಉಮೇಶ್ ಜಾಧವ್