ಗದಗ: ಕಲ್ಯಾಣ ಚಾಲುಕ್ಯರಸರ ನಿರ್ಮಿಸಿದ ಶಿಲ್ಪ ಕಲೆಯ ಪ್ರಸಿದ್ಧಿಯ ಕೇಂದ್ರವಾದ ಲಕ್ಕುಂಡಿ ಗ್ರಾಮದ ದುಸ್ಥಿತಿಯಲ್ಲಿರುವ ಸ್ಮಾರಕಗಳ ಸಂರಕ್ಷಣಿಗಾಗಿ ಪ್ರವಾಸೋದ್ಯಮ ಇಲಾಖೆ 5.66 ಕೋಟಿ ರೂ. ವೆಚ್ಚದ ಲ್ಲಿ ಕಾಮಗಾರಿಯ ನೀಲ ನಕ್ಷೆ ಹಾಕಿಕೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
Advertisement
ಜಿಲ್ಲಾ ಕೇಂದ್ರದಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ಲಕ್ಕುಂಡಿ ಗ್ರಾಮ ದಕ್ಷಿಣ ಭಾರತದ ಶಿಲ್ಪ ಕಲೆಯ ಮುಕುಟಮಣಿ ಎಂದೇ ಹೆಸರು ವಾಸಿಯಾಗಿದೆ. ಆದರೆ, ಸುಂದರ ಕೆತ್ತನೆಯಿಂದ ಕೂಡಿದ ಇಲ್ಲಿಯ ಕೆಲವು ದೇವಾಲಯಗಳು ಮತ್ತು ಕಲ್ಯಾಣಿಗಳ ಅಭಿವೃದ್ಧಿಯ ಇಚ್ಛಾಶಕ್ತಿಯ ಕೊರತೆ ಯಿಂದ ಸ್ಮಾರಕಗಳಲ್ಲಿರುವ ಕಲೆ ಮರೆಮಾಚಿವೆ.
ದೇವಾಲಯ, ಬಾವಿಗಳಿವೆ ಎಂಬ ಐತಿಹ್ಯವನ್ನು ಹೊಂದಿದೆ ಈ ಗ್ರಾಮ. ಇಲ್ಲಿಯ ಶಿಲ್ಪ ಕಲೆಯು ಪುರಾತನ ಕಾಲದ ಕಥೆಯನ್ನು ಪ್ರಕಟಿಸುತ್ತವೆ. ದಾನಚಿಂತಾಮಣಿ ಅತ್ತಿಮಬ್ಬೆ, ಅಜ್ಜಗಣ್ಣ ಮುಕ್ತಾಯಕ್ಕರು ಬಾಳಿ ಬೆಳಗಿದ ಗ್ರಾಮ ಎಂದು ಇತಿಹಾಸದ ಪುಸ್ತಕದಲ್ಲಿ ಓದಿಕೊಂಡು ಗ್ರಾಮಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿರಾಸೆ ಕಾದಿರುತ್ತದೆ. ಕಾರಣ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಕೇವಲ 6 ಸ್ಮಾರಕಗಳ ಸಂರಕ್ಷಣೆ, ಪ್ರಾಚ್ಯ ವಸ್ತು ಸಂಗ್ರಹಾಲಯ ಹೊರತು ಪಡಿಸಿ ಉಳಿದ ಹತ್ತಾರು ದೇಗುಲ, ಬಾವಿಗಳು ಸಂರಕ್ಷಣೆ ಇಲ್ಲದೇ ಪಾಳು ಬಿದ್ದಿರುವುದನ್ನು ಕಂಡು ಪ್ರವಾಸಿಗರು ಬೇಸರಗೊಂಡು ಸರಕಾರದ ನಿರ್ಲಕ್ಷ್ಯ ದೂರುವುದು ಸಾಮಾನ್ಯವಾಗಿದೆ. ಅಭಿವೃದ್ಧಿಯ ವೇಗ: ಗದಗ ಜಿಲ್ಲೆಯಲ್ಲೇ ಶಿಲ್ಪಕಲೆಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಲಕ್ಕುಂಡಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಲಕ್ಕುಂಡಿ ಪಾರಂಪರಿಕ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವನ್ನು ಪುನರ್ ರಚಿಸುವ ಮೂಲಕ ನೂತನ ಆಯುಕ್ತರನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಇಲ್ಲಿವರೆಗೂ ಪ್ರತಿ ಲಕ್ಕುಂಡಿ ಉತ್ಸವಗಳಲ್ಲಿ ಅಭಿವೃದ್ಧಿಯ ಕುರಿತು ಕೇವಲ ಭರವಸೆಯ ಭಾಷಣಕ್ಕೆ ಸೀಮಿತವಾಗಿ ಭರವಸೆಯಾಗಿಯೇ ಉಳಿದಿತ್ತು. ಆದರೆ, ಈಗ ಸಚಿವ ಎಚ್.ಕೆ. ಪಾಟೀಲ ಅವರು ಗ್ರಾಮದ ಬಗ್ಗೆ ವಿಶೇಷ ಕಾಳಜಿ ವಹಿಸಿ 5 ಕೋಟಿ ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಆರಂಭವಾಗಲಿವೆ.
Related Articles
Advertisement
ಲಕ್ಕುಂಡಿ ಗ್ರಾಮದಲ್ಲಿನ ಮಜ್ಜನ ಬಾವಿ ಸಂರಕ್ಷಣೆಗೆ 39.38 ಲಕ್ಷ ರೂ., ಈಶ್ವರ ದೇವಾಲಯ ಸಂರಕ್ಷಣೆಗೆ 67.98 ಲಕ್ಷ ರೂ., ಕಲ್ಮಠ ಹಾಗೂ ಬಾವಿ ಸಂರಕ್ಷಣೆಗೆ 74.75 ಲಕ್ಷ ರೂ., ಕಣ್ಣೀರ ಬಾವಿ ಸಂರಕ್ಷಣೆಗೆ 54.40 ಲಕ್ಷ ರೂ., ಕೋಟೆ ವೀರಭದ್ರೇಶ್ವರ ದೇಗುಲ ಸಂರಕ್ಷಣೆಗೆ 17.87 ಲಕ್ಷ ರೂ., ಲಕ್ಷ್ಮೀ ನಾರಾಯಣ ದೇಗುಲ ಸಂರಕ್ಷಣೆಗೆ 17.10 ಲಕ್ಷ ರೂ., ಲೆಕ್ಕದ ವೀರಣ್ಣ ದೇಗುಲ ಸಂರಕ್ಷಣೆಗೆ 15.51 ಲಕ್ಷ ರೂ., ಮಾಳಿಬಬಾವಿ ಸಂರಕ್ಷಣೆಗೆ 19.70 ಲಕ್ಷ ರೂ., ಮಲ್ಲಿಕಾರ್ಜುನ ದೇಗುಲ ಸಂರಕ್ಷಣೆಗೆ 18.58 ಲಕ್ಷ ರೂ., ನೀಲಕಂಠೇಶ್ವರ ದೇಗುಲದ ಸಂರಕ್ಷಣೆಗೆ 91.85 ಲಕ್ಷ ರೂ., ಸಿದ್ದೇಶ್ವರ ದೇಗುಲ ಸಂರಕ್ಷಣೆಗೆ 21.40 ಲಕ್ಷ ರೂ., ಸೋಮೇಶ್ವರ ದೇಗುಲ ಹಾಗೂ ಕಪಲಿ ಬಾವಿ ಸಂರಕ್ಷಣೆಗೆ 36.10 ಲಕ್ಷ ರೂ., ವಿರೂಪಾಕ್ಷೇಶ್ವರ ದೇಗುಲದ ಸಂರಕ್ಷಣೆಗೆ 28.38 ಲಕ್ಷ ರೂ. ಸೇರಿ ಒಟ್ಟು 13 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇನ್ನೂ 2 ಹೈಟೆಕ್ ಶೌಚಾಲಯಗಳಿಗೂ 50 ಲಕ್ಷ ರೂ. ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿಯೇ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ ತಿಳಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಲಕ್ಕುಂಡಿಯನ್ನು ವಿಶ್ವ ಪರಂಪರೆ ಪಟ್ಟಿಯ ಸ್ಥಾನ ಮಾನಕ್ಕೆ ಪ್ರಸ್ತಾವನೆ ಕಳುಹಿಸಲು ಸರಕಾರ ಸಕಲ ಸಿದ್ಧತೆ ಕೈಗೊಂಡಿದೆ. ಈ ನಿಟ್ಟಿನಲ್ಲಿ ಗ್ರಾಮದ ಸ್ಮಾರಕಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಲಕ್ಕುಂಡಿ ಪಾರಂಪರಿಕ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ಹಣ ಮಂಜೂರು ಮಾಡಲು ವಿಶೇಷ ಕಾಳಜಿ ವಹಿಸಿದ್ದಾರೆ.●ಸಿದ್ಧಲಿಂಗೇಶ್ವರ ಪಾಟೀಲ,
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಉನ್ನತ ಸಲಹಾ ಸಮಿತಿ ಸದಸ್ಯ *ಅರುಣಕುಮಾರ ಹಿರೇಮಠ