ಮಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ನೀತಿಯನ್ನು ಪರಿಷ್ಕೃತಗೊಳಿಸಿ ಹೊಸ ಪರಿಕಲ್ಪನೆಗಳೊಂದಿಗೆ ನೂತನವಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಕರಾವಳಿಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿಯೂ ಆದ್ಯತೆ ನೀಡುವುದಾಗಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ| ರಾಜೇಂದ್ರ ಕೆ.ವಿ. ಹೇಳಿದರು.
ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ (ಕೆಟಿಎಸ್) ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಲಾದ “ಕನೆಕ್ಟ್ – 2024′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮಲ್ಲಿ ಸ್ಥಳೀಯ ಪ್ರವಾಸಿ ಮಾರುಕಟ್ಟೆ ಬಲವಾಗಿದೆ. ಆದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿ ಸುವಲ್ಲಿ ಹಿಂದುಳಿದಿದ್ದೇವೆ. ಕರಾವಳಿಗೆ ಬರುವ ಪ್ರವಾಸಿಗರನ್ನು ಹೊರ – ರಾಜ್ಯ ಜಿಲ್ಲೆಗಳಿಗೆ ತೆರಳದಂತೆ ತಡೆದು ಇಲ್ಲಿನ ಪ್ರವಾಸಿತಾಣಗಳತ್ತ ಆಕ ರ್ಷಿಸಬೇಕು. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪರಿಷತ್ನಿಂದ ಶ್ರಮಿಸಬೇಕು. ಪ್ರಕೃತಿಗೆ ಹಾನಿಯಾಗದಂತೆ ಎಚ್ಚರ ಅವಶ್ಯ ಎಂದರು. ದ.ಕ.ದಲ್ಲಿ ಉಳ್ಳಾಲದ ಬಟ್ಟಂಪಾಡಿ ಯಿಂದ ಸಸಿಹಿತ್ಲುವರೆಗಿನ ಕಡಲ ತೀರ ವನ್ನು ಮ್ಯಾಪಿಂಗ್ ಮಾಡಿ, ವಿವಿಧ ವಲಯಗಳನ್ನಾಗಿ ಮಾಡಿ ಅವುಗಳಿಗೆ ಪೂರಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಜಿಲ್ಲೆಗೆ ಬಂದಿಳಿಯುವ ಜನರು ಇಲ್ಲಿಂದ ಕೊಡಗು – ಚಿಕ್ಕಮಗಳೂರು ಎಂದು ತೆರಳುತ್ತಾರೆ. ಇದು ಜಿಲ್ಲೆಯ ಮಟ್ಟಿಗೆ ದೊಡ್ಡ ಹೊಡೆತ ವಾಗಿದ್ದು, ಜಿಲ್ಲೆಯನ್ನೇ ಪ್ರವಾಸಿ ಗಮ್ಯತಾಣವಾಗಿ ಗುರುತಿಸಬೇಕಿದೆ. ಈಗಾಗಲೇ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಪರಿಷತ್ ರಚಿಸಲಾಗಿದೆ. ಸಿಆರ್ಝೆಡ್ಗೆ ಸಂಬಂಧಿಸಿಯೂ ಮಾಸ್ಟರ್ಪ್ಲ್ಯಾನ್ ರಚಿಸ ಬೇಕಿದೆ. ಕರಾವಳಿ ಕರ್ನಾ ಟಕಕ್ಕೆ ಪ್ರತ್ಯೇಕ ಹೂಡಿಕೆದಾರರ ಸಮಾವೇಶ ಆಯೋಜಿಸಬೇಕು ಎಂದರು.
ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ಉಡುಪಿಗೆ ವರ್ಷದಲ್ಲಿ ಸುಮಾರು 2-3 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಜಿಲ್ಲೆಯ ಪ್ರವಾಸಿ ಮ್ಯಾಪ್ನಲ್ಲಿ ಇದ್ದ 35 ಸ್ಥಳಗಳ ಸಂಖ್ಯೆಯನ್ನು 85 ಏರಿಸ ಲಾಗಿದೆ. ಜತೆಗೆ ಪ್ರವಾಸಿತಾಣಗಳ ಸಮಗ್ರ ಮಾಹಿತಿಯುಳ್ಳ ಕಾಫಿಟೇಬಲ್ ಪುಸ್ತಕ ಸಿದ್ಧವಾಗುತ್ತಿದೆ.
ಸುಸ್ಥಿರ ಅಭಿವೃ ದ್ಧಿಗೆ ಸಂಬಂಧಿಸಿ ಕೇಂದ್ರ ಸರಕಾರದ ಯೋಜನೆಗೆ ಉಡುಪಿ ಆಯ್ಕೆಯಾಗಿದೆ ಎಂದರು. ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯಕಾರಿ ಸದಸ್ಯ ಅಯ್ಯಪ್ಪ ಸೋಮಯ್ಯ, ಜಿ.ಪಂ. ಸಿಇಒ ಡಾ| ಆನಂದ್ ಕೆ., ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ, ದ.ಕ. ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಡುಪಿ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ, ದಕ್ಷಿಣ ಕನ್ನಡ ಟೂರಿಸಂನ ಗೌರವ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಪಿ.ಸಿ.ರಾವ್ ಸ್ವಾಗತಿಸಿ, ಮಂಜುಳಾ ಶೆಟ್ಟಿ ನಿರೂಪಿಸಿದರು.