ಸಂಗೀತ ರಂಗವನ್ನು ಸಂಸಾರದೊಂದಿಗೆ ಸಮನ್ವಯಗೊಳಿಸಿ ಸಂಗೀತ ಆರಾಧನೆ, ಸಂಗೀತ ಸೇವೆ ಮಾಡುತ್ತಿರುವ ಮಂಗಳೂರಿನ ಹಿಂದೂಸ್ಥಾನಿ ಗಾಯಕಿ ಬಸ್ತಿ ಕವಿತಾ ಶೆಣೈ. ಅವರಿಗೆ ಕೊಚ್ಚಿನ್ ಜಿಎಸ್‌ಬಿ ಮಹಾಜನತೆ ಯಿಂದ “ಸ್ವರ ಪ್ರತಿಭಾ’ ಪ್ರಶಸ್ತಿ ಲಭಿಸಿದೆ. ಈಚೆಗೆ ಶ್ರೀ ಕಾಶೀ ಮಠಾಧೀಶ ಪರಮ ಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಕೊಚ್ಚಿಯಲ್ಲಿ ಈ ಪ್ರಶಸ್ತಿ ನೀಡಿ ಆಶೀರ್ವದಿಸಿದ್ದಾರೆ.
ಕವಿತಾ ಶೆಣೈ, ಕೋಟೇಶ್ವರದ ಶ್ರೀಧರ್ ವಿ. ಕಾಮತ್ ಮತ್ತು ವೇದಾವತಿ ಕಾಮತ್ ಅವರ ಪುತ್ರಿ. ಬಾಲ್ಯದಲ್ಲಿ ಅಂಕುರಾವಸ್ಥೆಯಲ್ಲಿದ್ದ ಸಂಗೀತ ಆಸಕ್ತಿಯನ್ನು ಸ್ವತಃ ಗಾಯಕ -ಸಂಗೀತ ಕಲಾವಿದರಾಗಿರುವ ತಂದೆ ಶ್ರೀಧರ್ ಕಾಮತ್ ಪೋಷಿಸಿ, ಬೆಳೆಸಲಾರಂಭಿಸಿದರು.
ಅನಂತರ ಉಡುಪಿಯ ಪಂ| ಮಾಧವ ಭಟ್, ವಿ| ಗುರುದಾಸ ಶೆಣೈ, ಗೋವಾದ ಪಂ| ರಾಮರಾವ್ ನಾಯಕ್ ಮುಂತಾದ ವರಲ್ಲಿ ಗಾಯನ ಅಭ್ಯಸಿಸಿದರು. ಇವರ ಸಂಗೀತ ಕಲಿಕೆಯ ದಾಹ ಇನ್ನೂ ಇಂಗಿಲ್ಲ. ಈಗ ನಾಶಿಕ್‌ನ ಪಂಡಿತ್ ಪ್ರಸಾದ್ ಕಪಡೇì ಯವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.
ಹಿಂದೂಸ್ಥಾನಿ ಗಾಯನದ ಜತೆಗೆ ಹಾರೊನಿಯಂ, ವೀಣಾ ವಾದನಗಳಲ್ಲೂ ನಿಪುಣರಾಗಿರುವ ಇವರು ಪ್ರಖ್ಯಾತ ಗಾಯಕ ಪಂ| ರಮಾಕಾಂತ್ ಗುಂಡೇಚಾರ ಮಾರ್ಗದರ್ಶನದಲ್ಲಿ ಭೂಪಾಲ್‌ನ ಗುರುಕುಲ ದ್ರುಪದ ಸಂಸ್ಥಾನದಲ್ಲಿ ಸ್ವರ ಅಧ್ಯಯನ ತರಬೇತಿ ಪಡೆದಿದ್ದು, ಅಖೀಲ ಭಾರತೀಯ ಗಂಧರ್ವ ವಿದ್ಯಾಲಯದ ಸಂಗೀತ ಪದವಿಯನ್ನು ಪಡೆದಿದ್ದಾರೆ. ಆಕಾಶವಾಣಿಯ “ಬಿ’ ಗ್ರೇಡ್ ಕಲಾವಿದೆಯಾಗಿದ್ದು, “ಸ್ವರ ಸೇವಾ’ ಹೆಸರಿನ ಸಂಗೀತ ಶಾಲೆ ನಡೆಸುತ್ತಿದ್ದಾರೆ. ನೂರಾರು ಸಂಗೀತಾಸಕ್ತರಿಗೆ ಸಂಗೀತ ಕಲಿಸಿದ್ದು, ಪ್ರಸ್ತುತ ನೂರರಷ್ಟು ಆಸಕ್ತರು ಅವರ ಬಳಿ ಸಂಗೀತ ಅಭ್ಯಸಿಸುತ್ತಿದ್ದಾರೆ. ಕವಿತಾ ಬರವಣಿಗೆಯಲ್ಲೂ ಕೈಯಾಡಿ ಸಿದ್ದು, “ಭಜನಮಾಲಾ” ಮತ್ತು “ಸ್ತ್ರೋತ್ರಮಾಲಾ’ ಪುಸ್ತಿಕೆಗಳ ಜತೆಗೆ ಕೆಲವು ಗೀತೆಗಳನ್ನು ರಚಿಸಿದ್ದಾರೆ. ಹಲವಾರು ಧ್ವನಿ ಮುದ್ರಿಕೆಗಳಲ್ಲಿ ಹಾಡಿದ್ದುಂಟು.
ನಾಡಿನ ಹಲವೆಡೆ ಈತನಕ ನೂರಾರು ಕಾರ್ಯಕ್ರಮ ನೀಡಿರುವ ಇವರಿಗೆ ಶ್ರೀ ಕಾಶೀ ಮಠದ ವೃಂದಾವನಸ್ಥ ಶ್ರೀಮತ್ ಸುಧೀಂದ್ರ ತೀರ್ಥ ಶ್ರೀಪಾದರಿಂದ, ಗೋಕರ್ಣಶ್ರೀ, ಪೇಜಾವರ ಶ್ರೀಗಳಿಂದ ಆಶೀರ್ವಾದ ಲಭಿಸಿವೆ.
ಸಂದೀಪ್ ನಾಯಕ್ ಸುಜೀರ್