Advertisement

ಈಶಾ ಫೌಂಡೇಷನ್‌ನಿಂದ “ಕಾವೇರಿ ಕೂಗು’ಯೋಜನೆ

01:00 AM Jul 21, 2019 | Lakshmi GovindaRaj |

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಿಸಲು ಇಶಾ ಫೌಂಡೇಷನ್‌ “ಕಾವೇರಿ ಕೂಗು’ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಸದ್ಗುರು (ಜಗ್ಗಿ ವಾಸುದೇವ್‌) ಅವರು ಹೇಳಿದರು. ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯ ವಘಾರಿ ನದಿಯ ಪುನಶ್ಚೇತನದ ನಂತರ ನದಿಗಳನ್ನು ರಕ್ಷಿಸಿ(ರ್ಯಾಲಿ ಫಾರ್‌ ರಿವರ್‌) ಇದರ ಎರಡನೇ ಯೋಜನೆಯಾಗಿ ಕಾವೇರಿ ನದಿಯ ಪುನಶ್ಚೇತನ ಯೋಜನೆ ಹಾಕಿಕೊಂಡಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

ಕರ್ನಾಟಕ ಹಾಗೂ ತಮಿಳುನಾಡು ಜನರ ಜೀವದ ಮೂಲವಾಗಿರುವ ಕಾವೇರಿ ನದಿಯ ಹರಿವು ಈಗ ಶೇ.46ರಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಕಾವೇರಿ ನದಿ ನೋಡಿದರೆ ಶೇ.25 ಅಥವಾ ಶೇ.30ರಷ್ಟು ಮಾತ್ರ ಹರಿವು ಕಾಣ ಸಿಗುತ್ತದೆ. ತಮಿಳುನಾಡಿನಲ್ಲಿ ಪ್ರತಿ ವರ್ಷ 5ರಿಂದ 8 ಕಿ.ಮೀ.ಯಷ್ಟು ಕಾವೇರಿ ನದಿ ಒಣಗಿ ಹೋಗುತ್ತಿದೆ. 6ರಿಂದ 7 ತಿಂಗಳು ನೀರು ಕಡಲಿಗೆ ಹೋಗಿ ಸೇರಿಲ್ಲ. ಚೆನ್ನೈನಲ್ಲಿ ಜಲಕ್ಷಾಮ ಉದ್ಭವಿಸಿದೆ. ಹೀಗಾಗಿ 25 ವರ್ಷದ ಹಿಂದಿನ ಯೋಚನೆಯಾದ ಕಾವೇರಿ ನದಿ ನೀರಿನ ರಕ್ಷಣೆಗೆ ಈಗ ವೈಜ್ಞಾನಿಕ ಸಂಶೋಧನೆಗಳ ಮೂಲಕ ಯೋಜನೆ ಸಿದ್ಧಪಡಿಸಿದ್ದೇವೆ ಎಂದು ವಿವರ ನೀಡಿದರು.

ನೀರಿನ ಸಮಸ್ಯೆ ಏಕಾಏಕಿಯಾಗಿ ಸೃಷ್ಟಿಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಆಗಾಗ ಮಹಿಳೆಯರು ಜಗಳ ಆಡುತ್ತಿದ್ದರು. ಇಷ್ಟಾದರೂ ಯಾರು ಎಚ್ಚೆತ್ತುಕೊಂಡಿರಲಿಲ್ಲ. ಈಗ ಆ ಸಮಸ್ಯೆ ನಗರ ಪ್ರದೇಶಕ್ಕೆ ಬಂದಿದೆ. ಮಹಿಳೆಯರು ಮಾತ್ರವಲ್ಲ, ಪುರಷರೂ ಕೂಡ ನೀರಿಗಾಗಿ ಹೊಡೆದಾಡುವ ಸ್ಥಿತಿಗೆ ಬಂದಿದೆ. ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ಏಕಾಏಕಿ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದು ಎಲ್ಲರೂ ನಂಬಿದ್ದಾರೆ. ಹಾಗೆಯೇ ರೈತರ ಆತ್ಮಹತ್ಯೆಗೆ ಬ್ಯಾಂಕ್‌ ಸಾಲ ಮಾತ್ರ ಕಾಣವಲ್ಲ. ನೀರಿನ ಅಲಭ್ಯತೆ ಹಾಗೂ ಮಣ್ಣಿತ ಫ‌ಲವತ್ತತೆ ಕಡಿಮೆಯಾಗುತ್ತಿರುವುದು ಕೂಡ ಕಾರಣವಾಗಿದೆ ಎಂದರು.

ಏನಿದು ಕಾವೇರಿ ಕೂಗು?: ರ್ಯಾಲಿ ಫಾರ್‌ ರಿವರ್‌ ರೀತಿಯ ಅಭಿಯಾನವೇ ಇದಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಮಾನ್ಯ ಕೃಷಿಯ ಜತೆಗೆ ವಾಣಿಜ್ಯ ಕೃಷಿ(ಹಣ್ಣಿನ ಮರಗಳು) ತಮ್ಮ ಸ್ವಲ್ಪ ಭೂಮಿಯನ್ನು ಪರಿವರ್ತಿಸಿಕೊಳ್ಳಲು ಮನವಿ ಮಾಡುವುದಾಗಿದೆ. ಸುಮಾರು 69 ಸಾವಿರ ರೈತರು ಈಗಾಗಲೇ ಇದಕ್ಕೆ ಸೇರಿಕೊಂಡಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಹಣ್ಣಿನ ಮರದ ಸಸಿಗಳನ್ನು ನೆಡಲಾಗುತ್ತದೆ. ಇದೊಂದು ಅಭಿಯಾನದ ರೀತಿಯಲ್ಲಿ ನಡೆಯಲಿದೆ.

ಇಡೀ ಸಮಾಜವೇ ರೈತರಲ್ಲಿ ಸಹಾಯ ಮಾಡಬಹುದಾಗಿದೆ. ಮಣ್ಣಿನ ಫ‌ಲತ್ತತೆ ಹೆಚ್ಚಿಸುವ ಜತೆಗೆ ಕಾವೇರಿ ನೀರಿನ ಹರಿವು ಹೆಚ್ಚಾಗುತ್ತದೆ. ಜತೆಗೆ ಮುಂದಿನ 10ರಿಂದ 12 ವರ್ಷದಲ್ಲಿ ರೈತರ ಆದಾಯವೂ ಹೆಚ್ಚಾಗಲಿದೆ. ಕಾವೇರಿ ಜಲಾನಯನ ಪ್ರದೇಶದ 83ರಿಂದ 85 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅಭಿಯಾನ ನಡೆಯಲಿದೆ. ಒಟ್ಟಾರೆ 242 ಕೋಟಿ ಗಿಡಗಳನ್ನು ನೆಡಲಾಗುತ್ತದೆ. ಇದಕ್ಕಾಗಿ ಸೆಪ್ಟೆಂಬರ್‌ನಲ್ಲಿ ಬೈಕ್‌ ರ್ಯಾಲಿಕೂಡ ತಲಕಾವೇರಿಯಿಂದ ತಮಿಳುನಾಡಿನವರೆಗೂ ನಡೆಯಲಿದೆ ಎಂದು ಸದ್ಗುರು ಅವರು ಮಾಹಿತಿ ನೀಡಿದರು.

Advertisement

ಲೋಗೊ ಬಿಡುಗಡೆ: ಕಾವೇರಿ ಕೂಗು (ಕಾವೇರಿ ಕಾಲಿಂಗ್‌) ಯೋಜನೆಗೆ ಯಾರು ಬೇಕದರೂ ಗಿಡ ನೀಡಬಹುದಾಗಿದೆ. ವೆಬ್‌ಸೈಟ್‌ cauverycalling.org ಅಥವಾ 8000980009ಗೆ ಕರೆ ಮಾಡುವ ಮೂಲಕ ಗಿಡ ನೀಡಬಹುದಾಗಿದೆ. ಒಂದು ಗಿಡಕ್ಕೆ 42 ರೂ. ನಿಗದಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಕರಪತ್ರವನ್ನು ಶನಿವಾರ ಸದ್ಗುರು ಜಗ್ಗಿ ವಾಸುದೇವ್‌, ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್‌.ಕಿರಣ್‌ ಕುಮಾರ್‌, ಕೆ.ರಾಧಾಕೃಷ್ಣನ್‌, ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಾ.ಅರಿಜಿತ್‌ ಪಸಯತ್‌, ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ, ನಿವೃತ್ತ ಐಎಎಸ್‌ ಅಧಿಕಾರಿ ನರಸಿಂಹ ರಾಜು, ರವಿಸಿಂಗ್‌ ಮೊದಲಾದವರು ಇದ್ದರು.

ಕೆರೆ, ನದಿ, ಬಾವಿ ಇತ್ಯಾದಿ ನೀರಿನ ಮೂಲಗಳಲ್ಲ. ಮಳೆಯೇ ನೀರಿನ ಮೂಲ. ಮರ ಮತ್ತು ಮಣ್ಣಿನ ಫ‌ಲವತ್ತತೆ ಹೆಚ್ಚಿಸುವ ಮೂಲಕ ನದಿಯನ್ನು ಸಂರಕ್ಷಿಸಲು ಸಾಧ್ಯ. ಹೀಗಾಗಿ ಕಾವೇರಿ ಕೂಗು ಯೋಜನೆ ಆರಂಭಿಸುತ್ತಿದ್ದೇವೆ. ಕಾವೇರಿನ ಜಲಾನಯನ ಪ್ರದೇಶದಲ್ಲಿ ನರ್ಸರಿ ಕೂಡ ತೆರೆಯಲಿದ್ದೇವೆ. ಇದಕ್ಕಾಗಿ ಮೂರು ವರ್ಷ ಸೇವೆ ಸಲ್ಲಿಸಬಲ್ಲ ನದಿ ವೀರಸ್‌( ಸ್ವಯಂ ಸೇವಕರು) ಸಿದ್ಧವಾಗುತ್ತಿದ್ದಾರೆ.
-ಸದ್ಗುರು(ಜಗ್ಗಿವಾಸುದೇವ್‌) ಈಶಾ ಫೌಂಡೇಷನ್‌ ಮುಖ್ಯಸ್ಥ

ನೀರಿನ ಸಮಸ್ಯೆ ಎಲ್ಲೆಡೆ ಹೆಚ್ಚಾಗುತ್ತಿದೆ. ಸಮಾಜ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಇನ್ನಷ್ಟು ತೊಂದರ ಎದುರಿಸಬೇಕಾಗುತ್ತದೆ. ಕಾವೇರಿ ಕೂಗಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು.
-ಎ.ಎಸ್‌.ಕಿರಣ್‌ ಕುಮಾರ್‌, ಮಾಜಿ ಅಧ್ಯಕ್ಷ, ಇಸ್ರೋ

ನೀರಿಗಾಗಿ ನಡೆಯುತ್ತಿರುವ ಎರಡು ರಾಜ್ಯಗಳ ನಡುವಿನ ವಾಜ್ಯವು ಕಾವೇರಿ ಕೂಗಿನ ಯೋಜನೆಯ ಮೂಲಕ ಬಗೆಹರಿಸಬಹುದಾಗಿದೆ. ನೀರಿನ ಹರಿವು ಹೆಚ್ಚಾದರೆ ಸಮಸ್ಯೆ ಪರಿಹಾರವಾಗುತ್ತದೆ.
-ಡಾ.ಅರಿಜಿತ್‌ ಪಸಾಯತ್‌, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ನದಿ ನಮಗೆ ಎಲ್ಲವನ್ನು ನೀಡುತ್ತಿದೆ. ಮಣ್ಣಿನ ಸತ್ವ ಹೆಚ್ಚಿಸುವ ಮೂಲಕ ನದಿಯ ರಕ್ಷಣೆಯನ್ನು ಈ ಯೋಜನೆ ಮೂಲಕ ಮಾಡಬಹುದಾಗಿದೆ.
-ಕೆ.ರಾಧಾಕೃಷ್ಣನ್‌, ಮಾಜಿ ಅಧ್ಯಕ್ಷ, ಇಸ್ರೋ

ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಕೂಡ ಮಾಡಿಕೊಂಡಿದ್ದೇವೆ. ಯೋಜನೆಯ ವಿಸ್ತೃತ ವರದಿನ್ನು ಸಲ್ಲಿಸಿದ್ದೇವೆ. ರೈತರ ಆದಾಯ ಹೆಚ್ಚಾಗುವ ಜತೆಗೆ ಮಣ್ಣಿನ ಫ‌ಲವತ್ತತೆಯೂ ಹೆಚ್ಚಾಗಲಿದೆ.
-ನರಸಿಂಹರಾಜ, ನಿವೃತ್ತ ಐಎಎಸ್‌ ಅಧಿಕಾರಿ

ಕಾವೇರಿ ಕಣಿವೆಯ ಶೇ.87ರಷ್ಟು ಮರಗಳು ನಾಶವಾಗಿವೆ. ಪರಿಸರ ಮತ್ತು ಆರ್ಥಿಕತೆಗೆ ಒಂದಕ್ಕೊಂದು ಸಂಬಂಧ ಇದೆ. ಎರಡು ರಾಜ್ಯಗಳ ಸುಮಾರು 10 ಜಿಲ್ಲೆಯ 100 ತಾಲೂಕಿನಲ್ಲಿ ಕಾವೇರಿ ಕೂಗು ಯೋಜನೆ ಕಾರ್ಯರೂಪಕ್ಕೆ ಬರಲಿದೆ.
-ಕಿರಣ್‌ ಮಜುಂದಾರ್‌ ಶಾ, ಅಧ್ಯಕ್ಷೆ ಬಯೋಕಾನ್‌

Advertisement

Udayavani is now on Telegram. Click here to join our channel and stay updated with the latest news.

Next