Advertisement
ಯಕ್ಷಗಾನದಲ್ಲಿ ಭಾಗವತಿಕೆ ಪ್ರಮುಖ ಭಾಗ. ಇಲ್ಲಿ ಸುಶ್ರಾವ್ಯವಾಗಿ ಹಾಡುವಿಕೆಯ ಮೇಲೆ ಯಕ್ಷಗಾನ, ಪ್ರಸಂಗದ ಯಶಸ್ಸು ನಿಂತಿರುತ್ತದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಅಂದರೆ ಅದರಲ್ಲಿ ಬಹುತೇಕ ಪುರುಷರೇ ಎನ್ನಬಹುದು. ಇಲ್ಲೊಬ್ಬಳು ಹುಡುಗಿ ಇದ್ದಾಳೆ, ಕಾವ್ಯಶ್ರೀ ನಾಯಕ್ ಆಜೇರು. ಈಕೆಯ ಭಾಗವತಿಕೆಯನ್ನು ನೀವೂ ಒಮ್ಮೆ ಕೇಳಬೇಕು…
Related Articles
Advertisement
ಸೌಮ್ಯ ಸ್ವಭಾವದ ಕಾವ್ಯಶ್ರೀ, ರಂಗಸ್ಥಳದ ವೇದಿಕೆ ಏರಿದಳೆಂದರೆ ಕಥಾಹಂದರದಲ್ಲಿ ಲೀನಳಾಗಿಬಿಡುತ್ತಾಳೆ. ರೌದ್ರ, ಭೀಭತ್ಸ, ಶಾಂತ, ಶೃಂಗಾರ, ಹಾಸ್ಯ, ಕರುಣ, ವೀರ, ಭಯಾನಕ, ಅದ್ಭುತ ರಸಗಳನ್ನು ಸಂದರ್ಭಕನುಗುಣವಾಗಿ, ಆಕರ್ಷಕವಾಗಿ ಪ್ರಸ್ತುತಪಡಿಸುತ್ತಾಳೆ. ಹಗಲು ಶಾಲೆಯಲ್ಲಿ ಕಲಿಕೆ, ರಾತ್ರಿ ಯಕ್ಷಗಾನ ಕಲಾ ಸೇವೆಯನ್ನು ಮಾಡಿಕೊಂಡು ಬಂದಿರುವ ಈಕೆ ಸ್ನಾತಕೋತ್ತರ ಪದವಿಯನ್ನು ಪಡೆದಾಕೆ. ಉಪನ್ಯಾಸಕಿಯಾಗಿ ಕೈ ತುಂಬಾ ಸಂಬಳ ಎಣಿಸುವ ಉದ್ಯೋಗದಲ್ಲಿ ತೊಡಗುವ ಬದಲು, ಕಲೆಯನ್ನು ಅಪ್ಪಿಕೊಂಡು ಯಶಸ್ಸು ಕಂಡಿದ್ದಾಳೆ. ತೆಂಕು ತಿಟ್ಟಿನಲ್ಲಿ ಈಕೆ ಪ್ರವೀಣೆ.
ರಾತ್ರಿ ಇಡೀ ನಿದ್ದೆ ಬಿಟ್ಟು ಯಕ್ಷಗಾನದಲ್ಲಿ ತೊಡಗುವುದು, ಹಗಲಲ್ಲಿ ಸ್ವಲ್ಪ ನಿದ್ದೆ, ಮತ್ತೆ ತಾಳಮದ್ದಲೆ, ಮತ್ತೆ ಪುನಃ ರಾತ್ರಿಯ ಪ್ರದರ್ಶನಕ್ಕೆ ತಯಾರಾಗುವ ಈಕೆಯ ಛಾತಿ ಅಭಿನಂದನಾರ್ಹ. ಅಂದಹಾಗೆ, ಈಕೆ ಭಾಷಾ ಶುದ್ಧತೆಯಿಂದಲೂ ಸೆಳೆಯವ ಹುಡುಗಿ. ಮೂಲ್ಕಿಯ ಭವ್ಯಶ್ರೀ ಮಕ್ಕಳ ಮೇಳ, ಸುಳ್ಯದ ಮಕ್ಕಳ ಮೇಳ, ವಿಟ್ಲದ ಮಾಣಿಲ ಮೇಳದಲ್ಲಿ ಪ್ರದರ್ಶನ ಕೊಟ್ಟಿರುವ ಕಾವ್ಯಶ್ರೀ, ಕಟೀಲು, ಸುಂಕದಕಟ್ಟೆ, ಪೆರ್ಡೂರು ಮತ್ತು ಬಾಚುಕೆರೆ ಮೇಳಗಳಲ್ಲೂ ಭಾಗವತಿಕೆಯಲ್ಲಿ ಪಾಲ್ಗೊಂಡಿದ್ದಾಳೆ.ಸಂತೋಷ್ ರಾವ್ ಪೆರ್ಮುಡ