Advertisement
ಕಳೆದ ವರ್ಷದ ಬಜೆಟ್‌ನಲ್ಲಿ ಕಾಪು ತಾಲೂಕು ಘೋಷಣೆಯಾದ ಬಳಿಕ ತಾಲೂಕು ಅನುಷ್ಠಾನಕ್ಕೆ ವಿವಿಧ ರೀತಿಯ ಸಿದ್ಧತೆಗಳು ನಡೆದಿದ್ದು, ತಾಲೂಕು ರಚನೆ ಸಂಬಂಧಿ ಆಕ್ಷೇಪಣೆ ಸಲ್ಲಿಕೆ ಮತ್ತು ಸಲಹೆ ನೀಡಿಕೆಗೆ ಜ. 7ರ ವರೆಗೆ ಕಾಲಾವಕಾಶ ನೀಡಿ ಸರಕಾರಿ ಗಜೆಟ್ ನೊಟಿ ಫಿಕೇಷನ್ ಹೊರಡಿಸಿತ್ತು. ಆ ಬಳಿಕ ವಿವಿಧ ರೀತಿಯ ಪರಾಮರ್ಶೆಗಳು ನಡೆದಿದ್ದು, ಇದೀಗ 30 ಗ್ರಾಮಗಳನ್ನೊಳಗೊಂಡ ಕಾಪು ತಾಲೂಕು ರಚನೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರಕಾರ ಜ. 18ರಂದು ಹೊರಡಿಸಿದೆ. ಕಾಪು ತಾಲೂಕಿಗೆ ಹೊಸ ತಹಶೀಲ್ದಾರರ ನೇಮಕವಾಗುವವರೆಗೆ ಉಡುಪಿ ತಹಶೀಲ್ದಾರರೇ ಕಾಪು ತಾಲೂಕಿನ ಪ್ರಭಾರವನ್ನು ವಹಿಸಿಕೊಳ್ಳುವಂತೆ ಸೂಚನೆ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
16 ಗ್ರಾ.ಪಂ., 1 ಪುರಸಭೆ ಸೇರಿ ತಾಲೂಕು ರಚನೆ
ಕಾಪು ಹೋಬಳಿಯ 16 ಗ್ರಾಮ ಪಂಚಾಯತ್‌ಗಳು ಮತ್ತು ಕಾಪು ಪುರಸಭೆ ಕಾಪು ತಾಲೂಕಿನ ವ್ಯಾಪ್ತಿಗೆ ಬರಲಿದ್ದು, ಇಲ್ಲಿನ ಒಟ್ಟು ಜನಸಂಖ್ಯೆ 1,41,098. ಇದರಲ್ಲಿ ಪುರುಷರು – 66,696, ಮಹಿಳೆಯರು – 74,402. ಗರಿಷ್ಠ 19 ಕಿ.ಮೀ. ಮತ್ತು ಕನಿಷ್ಠ 2 ಕಿ.ಮೀ. ದೂರದ ವ್ಯಾಪ್ತಿಯ ಗ್ರಾಮಗಳು ಕಾಪು ತಾಲೂಕಿನ ವ್ಯಾಪ್ತಿಯೊಳಗಿವೆ. ಉಡುಪಿ ತಾಲೂಕು, ಮಂಗಳೂರು ತಾಲೂಕು, ಕಾರ್ಕಳ ತಾಲೂಕು ಮತ್ತು ಅರಬ್ಬಿ ಸಮುದ್ರ ನೂತನ ಕಾಪು ತಾಲೂಕಿನ ಗಡಿ ಪ್ರದೇಶಗಳಾಗಿವೆ. ಕಾಪು ಬಂಗ್ಲೆಯಲ್ಲಿ ತಾತ್ಕಾಲಿಕ ತಾಲೂಕು ಕಚೇರಿ
ನೂತನ ಕಾಪು ತಾಲೂಕು ಕಚೇರಿಗೆ ಮಿನಿ ವಿಧಾನಸೌಧ / ಹೊಸ ಕಟ್ಟಡಗಳ ವ್ಯವಸ್ಥೆಯಾಗುವವರೆಗೆ ಕಾಪು ಬಂಗ್ಲೆ ಮೈದಾನದಲ್ಲಿರುವ ಹೋಬಳಿ ಕೇಂದ್ರದ ನಾಡ ಕಚೇರಿ ಬಳಿಯಲ್ಲೇ ತಾತ್ಕಾಲಿಕ ಕಟ್ಟಡ ನಿರ್ಮಿಸಿ ಅಲ್ಲೇ ಹೊಸ ತಾಲೂಕು ಕಚೇರಿಯನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸೂಚನೆ ದೊರಕಿದೆ. ಮಾತ್ರವಲ್ಲದೇ ಈ ಬಗ್ಗೆ ಎಂಜಿನಿಯರ್‌ಗಳು ಬಂದು ಸ್ಥಳ ಪರಿಶೀಲನೆ ಮಾಡಿ, ಕಟ್ಟಡ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅತೀ
ಶೀಘ್ರದಲ್ಲಿ ತಾಲೂಕು ಕಚೇರಿಯ ತಾತ್ಕಾಲಿಕ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆಗಳಿವೆ
ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
Related Articles
ಕಾಪು ಹೋಬಳಿಯ ಏಣಗುಡ್ಡೆ, ಮೂಡಬೆಟ್ಟು, ಕೋಟೆ, ಮಟ್ಟು, ಉಳಿಯಾರಗೋಳಿ, ಪಡು, ಮೂಳೂರು, ಮಲ್ಲಾರು, ಪಾಂಗಾಳ, ಇನ್ನಂಜೆ, ಕಟ್ಟಿಂಗೇರಿ, ಶಿರ್ವ, ಬೆಳ್ಳೆ, ಕುರ್ಕಾಲು, ಹೇರೂರು, ಮಜೂರು, ಪಾದೂರು, ಸಾಂತೂರು, ಪಿಲಾರು, ಕಳತ್ತೂರು, ಕುತ್ಯಾರು, ನಡ್ಪಾಲು, ಪಾದೆಬೆಟ್ಟು, ಹೆಜಮಾಡಿ, ನಂದಿಕೂರು, ಪಲಿಮಾರು, ತೆಂಕ, ಬಡಾ, ಎಲ್ಲೂರು, ಬೆಳಪು ಗ್ರಾಮಗಳು ನೂತನ ಕಾಪು ತಾಲೂಕಿನ ವ್ಯಾಪ್ತಿಯೊಳಗೆ ಬರಲಿವೆ.
Advertisement
ನೂತನ ತಾ|ಗೆ ಮಂಜೂರಾದ ಹುದ್ದೆ ನೂತನ ಕಾಪು ತಾಲೂಕು ಸೇರಿದಂತೆ ರಾಜ್ಯ ಸರಕಾರ ಘೋಷಿಸಿರುವ ನೂತನ ತಾಲೂಕುಗಳ ಪೈಕಿ 40 ತಾಲೂಕಿಗೆ ಹುದ್ದೆಯನ್ನೂ ವಿಂಗಡಿಸಿ ಘೋಷಣೆ ಮಾಡಿದೆ. ಇದರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ತಹಶೀಲ್ದಾರ್ ಹುದ್ದೆ-2 (ಗ್ರೇಡ್-1, ಗ್ರೇಡ್-2), ಶಿರಸ್ತೇದಾರ-2, ಪ್ರಥಮ ದರ್ಜೆ ಸಹಾಯಕ-3, ಆಹಾರ ನಿರೀಕ್ಷಕ-1, ದ್ವಿತೀಯ ದರ್ಜೆ ಸಹಾಯಕ-4 ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಬೆರಚ್ಚುಗಾರ-1, ಗ್ರೂಪ್ ಡಿ ದರ್ಜೆ ನೌಕರ-3, ವಾಹನ ಚಾಲಕ-1 ಹೀಗೆ 17 ಹುದ್ದೆಗಳನ್ನು ಸೃಜಿಸಿ ಸರಕಾರ ಆದೇಶ ಹೊರಡಿಸಿದೆ. ಕಂದಾಯ ಸಚಿವರ ಮೂಲಕವೇ ಕಾಪು ತಾಲೂಕಿಗೆ ಚಾಲನೆ
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಅಧಿಕೃತ ಐಡೆಂಟಿಟಿ ಬೇಕಿದ್ದು, ಅದಕ್ಕೆ ಅನುಗುಣವಾಗಿ ಕಾಪು ತಾಲೂಕು ಘೋಷಣೆಯಾಗಿದೆ. ನೂತನ ಕಾಪು ತಾಲೂಕಿಗೆ 10 ಕೋ.ರೂ. ವೆಚ್ಚದ ಮಿನಿ ವಿಧಾನಸೌಧ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕು ಕೇಂದ್ರ ಅಸ್ತಿತ್ವಕ್ಕೆ ಬಂದ ಕೂಡಲೇ ಬೇಡಿಕೆಗೆ ಅನುಗುಣವಾಗಿ 33 ಸರಕಾರಿ ಇಲಾಖೆಗಳು ಕಾಪುವಿನಲ್ಲೇ ಕಾರ್ಯನಿರ್ವಹಿಸಲಿವೆ. ಇದಕ್ಕೆ ಬೇಕಾದ ಅನುದಾನವೂ ಸರಕಾರ ಮತ್ತದರ ಇಲಾಖೆಗಳಿಂದ ಒದಗಿ ಬರಲಿದೆ. ಪ್ರಸ್ತುತ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು, ಇದರ ನಡುವೆ ಕಂದಾಯ ಸಚಿವರನ್ನು ಬರಮಾಡಿಸಿಕೊಂಡು ಅವರಿಂದಲೇ ಕಾಪು ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ. ತಾಲೂಕು ಹೋರಾಟಕ್ಕೆ ಸಹಕರಿಸಿದರಿಗೆ ಕೃತಜ್ಞತೆ
ಕಾಪು ತಾ| ಘೋಷಣೆಯಲ್ಲಿ ವಿನಯಕುಮಾರ್ ಸೊರಕೆ ಅವರ ಪಾತ್ರ ಮಹತ್ವದ್ದಾಗಿದೆ. ಶಾಸಕರೇ ಮುತುವರ್ಜಿ ವಹಿಸಿ ತಾಲೂಕು ಹೋರಾಟ ಸಂಬಂಧಿಯಾಗಿ ನಮಗೆಲ್ಲರಿಗೂ ಬೆಂಬಲ ನೀಡಿದ್ದಾರೆ. ಶಾಸಕರ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನದಿಂದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅತ್ಯಲ್ಪ ಅವಧಿಯ ಹೋರಾಟವಿದ್ದರೂ ಕಾಪುವನ್ನು ತಾಲೂಕನ್ನಾಗಿ ಘೋಷಿಸಿದ್ದಾರೆ. ಕಾಪು ತಾಲೂಕು ರಚನೆ ಸಂಬಂಧಿಯಾಗಿ ನಾವು ನಡೆಸಿದ ಸಭೆ, ಪಾದಯಾತ್ರೆ ಸಹಿತ ವಿವಿಧ ಮಾದರಿಯ ಕಾರ್ಯಕ್ರಮಗಳಿಗೆ ಪಕ್ಷಾತೀತ ಬೆಂಬಲ ದೊರಕಿದ್ದು, ಕಾಪು ತಾಲೂಕು ರಚನೆಗೆ ಕಾರಣವಾದ ಪ್ರತಿಯೊಬ್ಬರಿಗೂ ಹೋರಾಟ ಸಮಿತಿಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೋರಾಟ ಸಮಿತಿಯ ಸಂಚಾಲಕ ಕೆ. ಲೀಲಾಧರ ಶೆಟ್ಟಿ ತಿಳಿಸಿದ್ದಾರೆ.