Advertisement

ಸ್ಥಾಯೀ ಸಮಿತಿ ಚುನಾವಣೆಯ ಗೊಂದಲ: ಸದಸ್ಯರ ನಡುವೆ ಭಾರೀ ಚರ್ಚೆ

01:30 AM Nov 30, 2018 | Team Udayavani |

ಕಾಪು: ಹಿಂದಿನ ಸಾಮಾನ್ಯ ಸಭೆ ಅರ್ಧಕ್ಕೆ ಮೊಟಕುಗೊಳಿಸಲು ಕಾರಣವಾಗಿದ್ದ ಸ್ಥಾಯೀ ಸಮಿತಿ ರಚನೆ ಗೊಂದಲ ಗುರುವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿಯೂ ಮುಂದುವರಿಯಿತು. ಕಾಪು ಪುರಸಭಾಧ್ಯಕ್ಷೆ ಮಾಲಿನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಸ್ಥಾಯೀ ಸಮಿತಿ ರಚನೆ ಮತ್ತು ಅದರ ಚುನಾವಣಾ ಪ್ರಕ್ರಿಯೆಯ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ಉಂಟಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ರಾಯಪ್ಪ ಅವರು ಹಿಂದಿನ ನಿದರ್ಶನಗಳು ಮತ್ತು ನಿಯಮಗಳಲ್ಲಿ ಆಗಿರುವ ತಿದ್ದುಪಡಿಗಳ ಆಧಾರದಲ್ಲಿ ಮತ್ತು ಉನ್ನತಾಧಿಕಾರಿಗಳ ನಿರ್ದೇಶನದ ಮೇರೆಗೆ ಅಧ್ಯಕ್ಷರು ಮತ್ತು ಸದಸ್ಯರಿಗೂ ಮತದಾನದ ಹಕ್ಕು ಇದೆ ಎಂದು ಮಾಹಿತಿ ನೀಡಿದರು. ಡಿ.1ರಂದು ಶನಿವಾರ ಚುನಾವಣೆ ನಡೆಸುವುದಾಗಿ ಘೋಷಿಸಲಾಯಿತು.

Advertisement

ಮೂಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ
ಪುರಸಭಾ ವ್ಯಾಪ್ತಿಯ ಮೂಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಬಗ್ಗೆ ಪುರಸಭೆ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗುತ್ತಿಲ್ಲ. ಜನರು ನಮ್ಮನ್ನು ದೂರುತ್ತಿದ್ದಾರೆ ಎಂದು ಸದಸ್ಯರಾದ ಶಾಂಭವಿ ಕುಲಾಲ್‌, ಅಬ್ದುಲ್‌ ಹಮೀದ್‌, ಸುಲೋಚನಾ ಬಂಗೇರ ಆರೋಪಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ ರಾಯಪ್ಪ ಅವರು ಅನುದಾನ ಬಂದ ಕೂಡಲೇ ಅದನ್ನು ಬಳಸಿಕೊಂಡು, ಪ್ರಥಮ ಹಂತದಲ್ಲಿ ಮೂಳೂರಿನ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದರು.

ಬೀದಿ ದೀಪ ನಿರ್ವಹಣೆ ಸಮಪರ್ಕವಾಗಿಲ್ಲ
ಪುರಸಭಾ ವ್ಯಾಪ್ತಿಯಲ್ಲಿನ ಬೀದಿದೀಪ ನಿರ್ವಹಣೆಯ ಕೊರತೆಯಿದೆ. ಬಹಳಷ್ಟು ಕಡೆಗಳಲ್ಲಿ ಜನರು ಕತ್ತಲಿನಲ್ಲೇ ಸಮಯ ಕಳೆಯುವಂತಾಗಿದೆ. ಇದನ್ನು ಶೀಘ್ರ ಸರಿಪಡಿಸಿ ಎಂದು ಸದಸ್ಯರಾದ ಮಹಮ್ಮದ್‌ ಅಮೀರ್‌, ಸುರೇಶ್‌ ದೇವಾಡಿಗ, ಅರುಣ್‌ ಶೆಟ್ಟಿ, ಅನಿಲ್‌ ಕುಮಾರ್‌, ಕಿರಣ್‌ ಆಳ್ವ ಒತ್ತಾಯಿಸಿದರು. ಒಂದು ವಾರದಲ್ಲಿ ಬೀದಿ ದೀಪದ ಸಮಸ್ಯೆಯನ್ನು ಸರಿಪಡಿಸಿಕೊಡುವುದಾಗಿ ಎಂಜಿನಿಯರ್‌ ಪ್ರತಿಮಾ ಭರವಸೆ ನೀಡಿದರು.

ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಹೊಸ ಮಾದರಿ
ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಹೊಸ ಮಾದರಿಯ ಪ್ಲಾನ್‌ ಸಿದ್ಧ‌ವಾಗಿದೆ. ಸ್ಟೇಜ್‌ ಟ್ರೀಟ್‌ಮೆಂಟ್‌ ಪ್ಲಾನ್‌ಗೆ ಎಂಬ ಹೊಸ ಮಾದರಿ ಪ್ರಕಾರ ಪೈಪ್‌ ಲೈನ್‌ ಇಲ್ಲದೇ ಒಂದು ಎಕರೆಯಲ್ಲಿ ಸಕ್ಕಿಂಗ್‌ ಯುನಿಟ್‌ ಮೂಲಕ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅವಕಾಶವಿದೆ. ಈ ಬಗ್ಗೆ ಪುರಸಭೆ ಅನುಮೋದನೆ ನೀಡಬೇಕಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು. ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಅರುಣ್‌ ಶೆಟ್ಟಿ, ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದರು.

ಡೋರ್‌ ನಂಬರ್‌: ಗೊಂದಲ ನಿವಾರಣೆಗೆ ಆಗ್ರಹ
ಭೂ ಪರಿವರ್ತನೆ ಆಗದೇ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಡೋರ್‌ ನಂಬರ್‌ ನೀಡುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನ ಬಳಲುವಂತಾಗಿದೆ. ಈ ಬಗ್ಗೆ ಪುರಸಭೆ ಏನಾದರೂ ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು ಒತ್ತಾಯಿಸಿದರು.

Advertisement

ವಿದ್ಯುತ್‌ ಉನ್ನತೀಕರಣ: 2.76 ಕೋ. ರೂ. ಅನುದಾನ
ಪುರಸಭಾ ವ್ಯಾಪ್ತಿಯಲ್ಲಿ ವಿದ್ಯುತ್‌ ಉನ್ನತೀಕರಣ ಯೋಜನೆಗೆ ಐಪಿಡಿಎಸ್‌ ಯೋಜನೆಯಡಿ ಸಂಸದೆ ಶೋಭಾ ಕರಂದ್ಲಾಜೆಯವರು ಮುತುವರ್ಜಿ ವಹಿಸಿ 2.76 ಕೋ. ರೂ. ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆಗೊಳಿಸಿದ್ದಾರೆ.ಇದರ ಕಾಮಗಾರಿ ನಡೆಸಲು ಖಾಸಗಿಯವರಿಗೆ ಟೆಂಡರ್‌ ಕೂಡ ಆಗಿದೆ ಎಂಬ ಮಾಹಿತಿಯಿದೆ. ಈ ಕಾಮಗಾರಿ ಪ್ರಾರಂಭ ಆಗುವಾಗ ಪುರಸಭೆಯ ಗಮನಕ್ಕೆ ತಂದು, ಕಾಮಗಾರಿ ನಡೆಸುವಂತೆ ಮೆಸ್ಕಾಂಗೆ ಸೂಚನೆ ನೀಡಬೇಕು ಎಂದು ವಿಪಕ್ಷ ನಾಯಕರು ಒತ್ತಾಯಿಸಿದರು.

ಅಗಲಿದ ನಾಯಕರಿಗೆ ಸಂತಾಪ ಸಲ್ಲಿಕೆ
ಅಗಲಿದ ಸಂಸದ ಅನಂತ್‌ ಕುಮಾರ್‌, ಸಿ.ಕೆ. ಜಾಫರ್‌ ಶರೀಫ್‌, ಮಾಜಿ ಸಚಿವ ಅಂಬರೀಷ್‌, ಹಾಗೂ ಹಿಂದಿನ ಕಾಪು ಗ್ರಾ. ಪಂ. ಪಿಡಿಒ ಪಿ. ಸುಂದರ ಪ್ರಭು ಇವರಿಗೆ ಸಂತಾಪ ಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next