Advertisement

ಮೂರು ದಶಕ ಕಂಡ ನಿಲ್ದಾಣದಲ್ಲಿ ಕನಿಷ್ಠ ಎರಡು ರೈಲೂ ನಿಲ್ಲುತ್ತಿಲ್ಲ!

02:11 PM Jul 21, 2022 | Team Udayavani |

ಕಾಪು: ತಾಲೂಕು ಕೇಂದ್ರಕ್ಕೆ ಹತ್ತಿರ ದಲ್ಲಿರುವ ಮತ್ತು ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಸಹಿತವಾಗಿ ಎಲ್ಲ ವಿಧದಲ್ಲೂ ಬೆಳೆಯುತ್ತಿರುವ ಬೆಳಪು ಗ್ರಾಮದಲ್ಲಿ ಕೊಂಕಣ ರೈಲು ಕರಾವಳಿಗೆ ಕಾಲಿಟ್ಟ ಪ್ರಾರಂಭದಲ್ಲೇ (1991-92) ನಿರ್ಮಾಣಗೊಂಡಿದ್ದ ಪಡುಬಿದ್ರಿ (ಪಣಿಯೂರು) ರೈಲ್ವೇ ನಿಲ್ದಾಣದ ಪಾಡು ಆರಕ್ಕೇರದೆ ಮೂರಕ್ಕಿಳಿಯದೆ ನಿಂತಲ್ಲೇ ನಿಂತು ಬಿಟ್ಟಿದೆ.

Advertisement

ಉಡುಪಿ ಮತ್ತು ಮೂಲ್ಕಿ ನಿಲ್ದಾಣಗಳಂತೆ ಕೊಂಕಣ ರೈಲು ಕರಾವಳಿಗೆ ಕಾಲಿಟ್ಟಾಗಲೇ ಬೆಳಪು ಗ್ರಾಮದ ಪಣಿಯೂರಿನಲ್ಲಿ ಪಡುಬಿದ್ರಿ ರೈಲು ನಿಲ್ದಾಣ ನಿರ್ಮಾಣಗೊಂಡಿತ್ತು. ಆದರೆ ಅದು ಇನ್ನೂ ಮೇಲ್ದರ್ಜೆಗೇರಿಲ್ಲ. ಪಡುಬಿದ್ರಿ (ಪಣಿಯೂರು) ನಿಲ್ದಾಣವನ್ನು ಅಭಿವೃದ್ಧಿಪಡಿಸಿದಲ್ಲಿ ಗ್ರಾಮೀಣ ಪ್ರದೇಶಗಳ ಬಹುತೇಕ ಮಂದಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ನಿಲ್ದಾಣದ ಸುತ್ತ ಏನಿದೆ?

ರೈಲು ನಿಲ್ದಾಣವು ಎಲ್ಲೂರಿನ ಅದಾನಿ ಯು.ಪಿ. ಸಿ.ಎಲ್‌. ವಿದ್ಯುತ್‌ ಸ್ಥಾವರ, ಪಾದೂರಿನ ಐಎಸ್‌ ಪಿಆರ್‌ಎಲ್‌ (ಕಚ್ಚಾ ತೈಲ ಸಂಗ್ರಹಣ ಘಟಕ), ಪಡುಬಿದ್ರಿ ನಡಾÕಲಿನ ಸುಜ್ಲಾನ್‌ ಘಟಕ, ಬೆಳಪುವಿನಲ್ಲಿ ನಿರ್ಮಾಣಗೊಂಡಿರುವ ಕೆಐಎಡಿಬಿ ಇಂಡಸ್ಟ್ರಿಯಲ್‌ ಪಾರ್ಕ್‌, ಕಾಪು ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು, ಮಂಗಳೂರು ವಿ.ವಿ. ಸಂಯೋಜಿತ ಅತ್ಯಾಧುನಿಕ ವಿಜ್ಞಾನ ಸಂಶೋಧನ ಕೇಂದ್ರ ಸಹಿತವಾಗಿ ಕಾಪು ತಾಲೂಕು ಕೇಂದ್ರದಿಂದ ಕೂಗಳತೆಯ ದೂರದಲ್ಲಿದೆ.

ವಿಪುಲ ಅವಕಾಶ

Advertisement

ಬೆಳಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾ ಧುನಿಕ ವಿಜ್ಞಾನ ಸಂಶೋಧನ ಕೇಂದ್ರಕ್ಕೆ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ದೂರದ ಸ್ಥಳಗಳಿಂದ ಬರುವವರಿಗೆ ಈ ರೈಲು ನಿಲ್ದಾಣ ಉಪಯುಕ್ತವಾಗಲಿದೆ. ದೇಶದ ಕಚ್ಚಾತೈಲ ಭದ್ರತೆಯನ್ನು ಪೂರೈಸುವ ಉದ್ದೇಶದೊಂದಿಗೆ ನಿರ್ಮಾಣಗೊಳ್ಳಲಿರುವ ಐಎಸ್‌ ಪಿಆರ್‌ಎಲ್‌ ಪಾದೂರು ಕಚ್ಛಾ ತೈಲ ಸಂಗ್ರಹಣ ಕೇಂದ್ರದ ಎರಡನೇ ಹಂತದ ವಿಸ್ತರಣೆಗೆ ಪೂರಕವಾಗಿ ಉದ್ಯೋಗ ಅರಸಿ ಬರುವವರಿಗೆ, ಭೂಗತ ಪೈಪ್‌ಲೈನ್‌ ಅಳವಡಿಕೆಗೆ ಬೇಕಾಗುವ ವ್ಯವಸ್ಥೆಗಳನ್ನು ಜೋಡಿಸುವ ಸಲಕರಣೆಗಳ ಸಾಗ ಣೆಗೂ ರೈಲು ನಿಲ್ದಾಣವನ್ನು ಅವಲಂಬಿಸಬಹುದಾಗಿದೆ.

ಮುಂಬಯಿ, ಬೆಂಗಳೂರು ರೈಲು ನಿಲುಗಡೆಗೆ ಬೇಡಿಕೆ

ನಿಲ್ದಾಣದಲ್ಲಿ ಮಂಗಳೂರು-ಮಡಂಗಾವ್‌ ನಡುವೆ ಸಂಚರಿಸುವ ಪ್ಯಾಸೆಂಜರ್‌ ಟ್ರೈನ್‌, ವೇರಾವೆಲ್‌ – ಗುಜರಾತ್‌ ಎಕ್ಸ್‌ಪ್ರೆಸ್‌ ಮತ್ತು ಡೆಮು ಎಕ್ಸ್‌ಪ್ರೆಸ್‌ ರೈಲು ನಿಲುಗಡೆಯಾಗುತ್ತಿತ್ತು. ಕೊರೊನಾ ಬಳಿಕ ವೇರಾವೆಲ್‌ – ಗುಜರಾತ್‌ ಎಕ್ಸ್‌ಪ್ರೆಸ್‌ ಮತ್ತು ಡೆಮು ಎಕ್ಸ್‌ಪ್ರೆಸ್‌ ನಿಲುಗಡೆಯನ್ನು ಹಿಂಪಡೆಯಲಾಗಿದೆ. ಪ್ರಸ್ತುತ ಇಲ್ಲಿ ಮಂಗಳೂರು – ಮಡಂಗಾವ್‌ ರೈಲು ಮಾತ್ರ ನಿಲುಗಡೆಯಾಗುತ್ತಿದ್ದು, ಗ್ರಾಮೀಣ ಭಾಗದ ಜನರಿಂದ ಹೆಚ್ಚು ಬೇಡಿಕೆಯಿರುವ ಮತ್ಸ್ಯಗಂಧ ಎಕ್ಸ್‌ ಪ್ರಸ್‌, ಸಿಎಸ್‌ಟಿ ಎಕ್ಸ್‌ಪ್ರೆಸ್‌ ಮತ್ತು ಯಶವಂತಪುರ – ಕಾರವಾರ ರೈಲುಗಳ ನಿಲುಗಡೆಗೆ ಜನರಿಂದ ಬೇಡಿಕೆ ಹೆಚ್ಚುತ್ತಿದೆ.

ಏನೆಲ್ಲ ಸಮಸ್ಯೆಗಳಿವೆ?

ನಿಲ್ದಾಣದಲ್ಲಿ 24 ಬೋಗಿ ನಿಲ್ಲಲು ಕನಿಷ್ಠ 600 ಮೀಟರ್‌ ರೂಫಿಂಗ್‌ ಬೇಕಿದ್ದು, ಕೇವಲ 400 ಮೀಟರ್‌ ರೂಫಿಂಗ್‌ ಇದೆ. ಒಂದು ಬದಿಯಲ್ಲಿ ಮಾತ್ರ ಪ್ಲಾಟ್‌ ಫಾರಂ ಸಹಿತವಾದ ರೂಫಿಂಗ್‌ ಸೌಲಭ್ಯವಿದೆ. ಮತ್ತೂಂದು ಬದಿಯಲ್ಲಿ ಪ್ಲಾಟ್‌ ಫಾರಂ ಸಹಿತ ರೂಫಿಂಗ್‌ ಆಗಿಲ್ಲ. ಸ್ಟೇಷನ್‌ನ ಪಶ್ಚಿಮ ಬದಿಯಲ್ಲಿರುವ ಹತ್ತಾರು ಮನೆಯವರಿಗೆ ನಡೆದಾಡಲು, ಜಾನುವಾರುಗಳ ಓಡಾಟಕ್ಕೆ ಅಂಡರ್‌ಪಾಸ್‌ ಅಥವಾ ಫ್ಲೈ ಓವರ್‌ ಮಾದರಿಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಲಾಗಿತ್ತಾದರೂ ಅದು ಕೂಡ ಭರವಸೆಯಾಗಿಯೇ ಉಳಿದಿದೆ.

ಹಲವು ಬಾರಿ ಮನವಿ: ನಿಲ್ದಾಣದ ಹೆಸರನ್ನು ಪಡುಬಿದ್ರಿ ಬದಲಿಗೆ ಪಣಿಯೂರು ಎಂದು ಪುನರ್‌ ನಾಮಕರಣ ಮಾಡುವಂತೆ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಮತ್ಸ್ಯಗಂಧ ಮತ್ತು ಬೆಂಗಳೂರು ರೈಲುಗಳ ನಿಲುಗಡೆ ಬಗ್ಗೆ ಇಲಾಖೆ ಹಾಗೂ ಸ್ಥಳೀಯ ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳಿಗೂ ಹಲವು ಬಾರಿ ಮನವಿ ಮಾಡಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ರೈಲ್ವೇ ಸಚಿವ ಡಿ.ವಿ. ಸದಾನಂದ ಗೌಡ ಅವರೂ ನಮಗೆ ಬೆಂಬಲ ಸೂಚಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. –ದೇವಿಪ್ರಸಾದ್‌ ಶೆಟ್ಟಿ ಬೆಳಪು ರೈಲ್ವೇ ನಿಲ್ದಾಣ ಮೇಲ್ದರ್ಜೆ ಹೋರಾಟ ಸಮಿತಿ ಮುಖಂಡರು ಅನುಮೋದನೆ ಸಿಗಲಿ: ಸೂಪರ್‌ ಫಾಸ್ಟ್‌ ರೈಲಿಗೆ ನಿಲುಗಡೆ ನೀಡಬೇಕಾದರೆ ಪ್ರತೀ ನಿಲ್ದಾಣದ ನಡುವೆ ಇಷ್ಟೇ ಅಂತರವಿರಬೇಕು, ಅಂತಹ ಕಡೆಗಳಲ್ಲಿ ಮಾತ್ರ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕೆಂಬ ಇಲಾಖಾ ನಿರ್ದೇಶನಗಳಿವೆ. ಸ್ಟೇಷನ್‌ನಲ್ಲಿ ರೈಲು ನಿಲು ಗಡೆಯ ಬಗ್ಗೆ ಬೇಡಿಕೆ ಇರುವಲ್ಲಿ ಫೀಸಿಬಿಲಿಟಿ ಸರ್ವೇ, ಉಳಿತಾಯದ ಲೆಕ್ಕಾಚಾರ ಮಾಡಿ, ಅದರ ಬಗ್ಗೆ ವರದಿ ಸಿದ್ಧಪಡಿಸಿ ಅದನ್ನು ರೈಲ್ವೇ ಬೋರ್ಡ್‌ಗೆ ಅನುಮೋದನೆಗೆ ಕಳುಹಿಸಬೇಕಿದೆ. ಅಲ್ಲಿ ಅಪ್ರೂವಲ್‌ ಸಿಕ್ಕಿದ ಬಳಿಕ ರೈಲು ನಿಲುಗಡೆ ಬಗ್ಗೆ ಕೊಂಕಣ ರೈಲ್ವೇ ನಿರ್ಧಾರ ಮಾಡಲು ಸಾಧ್ಯವಿದೆ. –ಸುಧಾ ಕೃಷ್ಣಮೂರ್ತಿ ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೇ

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next