Advertisement

ಜಾತಿ ಮೇಳೈಸಿದರೆ ಬಿಗಿ ಸೆಣಸು; ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ

12:08 AM May 05, 2023 | Team Udayavani |

ಕಾಪು: ಜಿಲ್ಲೆಯ ಚುನಾವಣೆ ಕಣದಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಕಾಪು ಕೂಡ ಒಂದು. ಜಾತಿ ಲೆಕ್ಕಾಚಾರವೇ ಮುನ್ನೆಲೆಗೆ ಬಂದರೆ ಅಚ್ಚರಿ ಫ‌ಲಿತಾಂಶ ಬರಬಹುದು.
ಕಾಂಗ್ರೆಸ್‌ನಿಂದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಸ್ಪರ್ಧೆ ಯಲ್ಲಿದ್ದರೆ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಗುರ್ಮೆ ಸುರೇಶ್‌ ಶೆಟ್ಟಿ ಬಿಜೆಪಿ ಅಭ್ಯರ್ಥಿ. ಕ್ಷೇತ್ರದಲ್ಲಿ ಎಸ್‌ಡಿಪಿಐ, ಜೆಡಿಎಸ್‌, ಎಎಪಿ ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್‌- ಬಿಜೆಪಿ ಮಧ್ಯೆ ನೇರ ಹಣಾಹಣಿ.

Advertisement

ಇಲ್ಲಿ ಬಿಲ್ಲವ ಸಮುದಾಯದವರು ಹೆಚ್ಚು ಕಾಲ ಶಾಸಕರಾಗಿದ್ದರು. ಮೊಗವೀರ ಮತ್ತು ಬಂಟ ಸಮುದಾಯದವರು ಕೆಲ ಅವಧಿಗೆ ಆಡಳಿತ ನಡೆಸಿದ್ದಾರೆ. ಘಟಾನುಘಟಿ ನಾಯಕರು ಅಲ್ಪ ಮತಗಳ ಅಂತರದಲ್ಲಿ ಸೋತಿರುವ ಉದಾಹರಣೆಗಳಿವೆ. ಸದ್ಯದ ಜಿದ್ದಾಜಿದ್ದಿ ಕಣದಲ್ಲಿ ಈ ರೀತಿಯ ಫ‌ಲಿತಾಂಶ ಮರುಕಳಿಸುವ ಸಾಧ್ಯತೆಯೂ ಅಲ್ಲಗೆಳೆಯುವಂತಿಲ್ಲ.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್‌ ಶೆಟ್ಟಿಯವರು ಚುನಾವಣಾ ರಾಜಕೀಯಕ್ಕೆ ಹೊಸಬರು. ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ಸಂಬಂಧ ಜಾತಿ ಸಮೀಕರಣ ಬದ ಲಾದ ಹಿನ್ನೆಲೆಯಲ್ಲಿ ಗುರ್ಮೆಯವರಿಗೆ ಅವಕಾಶ ಸಿಕ್ಕಿತು.

ಇದೇ ಅಂಶ ಬಿಜೆಪಿಗೆ ಹೆಚ್ಚು ಫ‌ಲಕಾರಿ ಆಗಬಹುದು. ಕರಾವಳಿಯಲ್ಲಿ ಪಕ್ಷ ಸಂಘಟನೆ ಬಲಿಷ್ಠವಾಗಿರುವುದು, ಹಿಂದಿನ ಶಾಸಕರ ಅವಧಿಯ ಅಭಿವೃದ್ಧಿ ಕಾರ್ಯ, ಆರೆಸ್ಸೆಸ್‌ ಬಲ, ಕೇಡರ್‌ ವ್ಯವಸ್ಥೆಯ ಜತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೊದಲಾದವರು ಪ್ರಚಾರಕ್ಕೆ ಬಂದಿರುವುದು ಬಲ ತುಂಬಬಹುದು.

ಕಾಂಗ್ರೆಸ್‌ನ ವಿನಯ ಕುಮಾರ್‌ ಸೊರಕೆ ಅವರು ಕ್ಷೇತ್ರದ ಬಗ್ಗೆ ಚೆನ್ನಾಗಿ ಅರಿತಿದ್ದಾರೆ. ಕ್ಷೇತ್ರ ಬದಲಿಸಿ 2013ರಲ್ಲಿ ಕಾಪುವಿನಲ್ಲಿ ಸ್ಪರ್ಧಿಸಿ ಗೆದ್ದಿರುವ ಸೊರಕೆಯವರು 2018ರ ಚುನಾವಣೆಯಲ್ಲಿ ಸೋತರೂ ಕ್ಷೇತ್ರದಾದ್ಯಂತ ಸುತ್ತಾಟ ನಡೆಸಿ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು.

Advertisement

ಕಳೆದ ಬಾರಿಯ ಸೋಲಿನ ಕುರಿತ ತುಸು ಅನುಕಂಪ, ಬಿಜೆಪಿಯ ಹೊಸ ಆಭ್ಯರ್ಥಿ ಎಂಬ ಅಂಶ ಎಷ್ಟರಮಟ್ಟಿಗೆ ಕಾಂಗ್ರೆಸ್‌ಗೆ ಲಾಭ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ. ತಮ್ಮ ಕೊನೆಯ ಚುನಾವಣೆ ಎಂಬ ಭಾವನಾತ್ಮಕ ನಡೆಯೂ ಸೊರೆಕೆಯವರಿಗೆ ಅನುಕೂಲ ಆಗಬಹುದು. ಎಐಸಿಸಿ ಮುಖಂಡ ರಾಹುಲ್‌ ಗಾಂಧಿ ಅವರು ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ.

ಜಾತಿ ಲೆಕ್ಕಾಚಾರ ಹೇಗೆ?
ಇಲ್ಲಿ ಬಿಲ್ಲವರು, ಬಂಟ ಮತದಾರರು ಹೆಚ್ಚಿದ್ದಾರೆ. ಅನಂತರದ ಸ್ಥಾನ ಮೊಗವೀರ ಸಮುದಾಯದವರದ್ದು. ಬಿಲ್ಲವ ಸಮುದಾಯದಿಂದ ವಿನಯಕುಮಾರ್‌ ಸೊರಕೆ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದರೆ, ಬಂಟ ಸಮುದಾಯದಿಂದ ಗುರ್ಮೆ ಸುರೇಶ್‌ ಶೆಟ್ಟಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಪ್ರಮುಖ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್‌ ವರ್ಗದ ಮತದಾರರು ಯಾರ ಕಡೆಗೆ ವಾಲಬಹುದು ಎಂಬುದೂ ಸಹ ಫ‌ಲಿತಾಂಶವನ್ನು ನಿರ್ಣಯಿಸುವುದರಲ್ಲಿ ಪಾತ್ರ ವಹಿಸಬಹುದು. ಜೆಡಿಎಸ್‌ನಿಂದ ಸಬಿನಾ ಸಮದ್‌, ಆಮ್‌ ಆದ್ಮಿ ಪಾರ್ಟಿಯಿಂದ ಎಸ್‌. ಆರ್‌. ಲೋಬೋ, ಎಸ್‌ಡಿಪಿಐನಿಂದ ಮಹಮ್ಮದ್‌ ಹನೀಫ್ ಅವರು ಸ್ಪರ್ಧಿಸಿದ್ದು, ಇವರು ಎಷ್ಟು ಮತಗಳನ್ನು ಸೆಳೆಯಲಿದ್ದಾರೆ ಎಂಬುದೂ ಮುಖ್ಯ. ಉಳಿದಂತೆ ಜಿಎಸ್‌ಬಿ, ವಿಶ್ವಕರ್ಮ, ಎಸ್ಸಿ,ಎಸ್ಟಿ, ದೇವಾಡಿಗ, ಕುಲಾಲ್‌ ಮತಗಳು ಯಾರ ಕಡೆಗೆ ಎನ್ನುವುದೂ ಮತ್ತೂಂದು ಪ್ರಮುಖ ಅಂಶವಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳು 5
- ಗುರ್ಮೆ ಸುರೇಶ್‌ ಶೆಟ್ಟಿ (ಬಿಜೆಪಿ )
-  ವಿನಯ್‌ ಕುಮಾರ್‌ ಸೊರಕೆ (ಕಾಂಗ್ರೆಸ್‌ )
-  ಸಬಿನಾ ಸಮದ್‌ (ಜೆಡಿಎಸ್‌)
-  ಎಸ್‌. ಆರ್‌. ಲೋಬೋ (ಎಎಪಿ)
-  ಮಹಮ್ಮದ್‌ ಹನೀಫ್ (ಎಸ್‌ಡಿಪಿಐ)

ಲೆಕ್ಕಾಚಾರ ಏನು?
ಕ್ಷೇತ್ರದಲ್ಲಿ ಗೆಲ್ಲಲು ಇಬ್ಬರೂ ಅಭ್ಯರ್ಥಿಗಳಿಗೆ ಗೆಲುವಿಗೆ ಪೂರಕವಾಗುವ ಅಂಶಗಳು ಸಾಕಷ್ಟಿವೆ. ಅವುಗಳನ್ನು ಹೇಗೆ ಮತವನ್ನಾಗಿ ಪರಿವರ್ತಿಸುತ್ತಾರೆ ಎಂಬುದು ಗೆಲುವನ್ನು ನಿರ್ಧರಿಸಲಿದೆ.

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next