ಕಾಪು: ಕಾಪು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳೆರಡೂ ಕೊನೆಯ ಹಂತದ ಕ್ಲೈಮಾಕ್ಸ್‌ನಿಂದಾಗಿ ಬಿಜೆಪಿ ಪಾಲಾಗಿದೆ.
23 ಮಂದಿ ಸದಸ್ಯ ಬಲದ ಕಾಪು ಪುರಸಭೆಯ ಅಧ್ಯಕ್ಷ ಹುದ್ದೆಯು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಕಟವಾಗಿತ್ತು.
ಬಿಜೆಪಿ -12, ಕಾಂಗ್ರೆಸ್ -7, ಎಸ್‌ಡಿಪಿಐ -3, ಜೆಡಿಎಸ್ -1 ಸದಸ್ಯ ಬಲವನ್ನು ಹೊಂದಿದ್ದು, ಶಾಸಕ, ಸಂಸದ ಮತ್ತು ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ 16 ಮತಗಳನ್ನು ಹೊಂದಿತ್ತು.
ಅಧ್ಯಕ್ಷ ಹುದ್ದೆಗೆ ಬಿಜೆಪಿಯೊಳಗೆ ನಾಲ್ಕು ಮಂದಿಗೆ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಹರಿಣಾಕ್ಷಿ ದೇವಾಡಿಗ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದು, ಉಪಾಧ್ಯಕ್ಷ ಹುದ್ದೆಗೆ ಎಸ್.ಡಿ.ಪಿ.ಐ ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಸರಿತಾ ಶಿವಾನಂದ್ ಸ್ಪರ್ಧಿಸಿದ್ದರು.
ಅಂತಿಮವಾಗಿ ಅಧ್ಯಕ್ಷರಾಗಿ ಹರಿಣಾಕ್ಷಿ ದೇವಾಡಿಗ ಮತ್ತು ಉಪಾಧ್ಯಕ್ಷರಾಗಿ ಸರಿತಾ ಶಿವಾನಂದ್ ಅವರು 16 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಶೋಭಾ ಎ. ಬಂಗೇರ ಮತ್ತು ಸತೀಶ್ಚಂದ್ರ ಮೂಳೂರು ತಲಾ 9 ಮತ ಗಳಿಸಿದ್ದಾರೆ.
ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಚುನಾವಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಬಿಜೆಪಿ ಚುನಾವಣಾ ವೀಕ್ಷಕರಾಗಿದ್ದ ಮನೋಹರ ಕಲ್ಮಾಡಿ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಯುವ ಮೋರ್ಚಾ ಅಧ್ಯಕ್ಷ ಸೋನು ಪಾಂಗಾಳ, ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಗುರುರಾಜ್, ರೈತ ಮೋರ್ಚಾ ಅಧ್ಯಕ್ಷ ಕೃಷ್ಣ ರಾವ್, ಪಕ್ಷದ ವಿವಿಧ ಸ್ತರಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಪುರಸಭಾ ಸದಸ್ಯರು ವಿಜೇತ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.