ಮುಂಬಯಿ: ಕಾಪು ಮೊಗವೀರ ಮಹಾಸಭಾ ಇದರ ಮುಂಬಯಿ ಶಾಖೆಯ ಸದಸ್ಯರು ಹಾಗೂ ಅವರ ಕುಟುಂಬಸ್ಥರ ವಾರ್ಷಿಕ ವಿಹಾರಕೂಟವು ಜ. 27 ರಂದು ಮಲಾಡ್‌ನ ಮನೋರಿ ದ್ವೀಪದಲ್ಲಿ ನಡೆಯಿತು.
ವಿಹಾರ ಕೂಟದಲ್ಲಿ ನೂರಕ್ಕೂ ಮಿಕ್ಕಿದ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಆರಂಭದಲ್ಲಿ ಸದಸ್ಯರು ಹಾಗೂ ಅವರ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎಲ್ಲರಿಗೂ ಬೆಳಗ್ಗೆಯ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಸಂಜೆ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಭೆಯ ಅಧ್ಯಕ್ಷ ಸತೀಶ್ ಎನ್. ಕರ್ಕೇರ ಅವರು ವಿಹಾರಕೂಟದಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿ, ಇದೇ ಉತ್ಸಾಹ, ಹುರುಪನ್ನು ಸಭೆಯ ಇತರ ಕಾರ್ಯಚಟುವಟಿಕೆಗಳಲ್ಲೂ ತೋರಿಸಬೇಕು. ಸದ್ಯದಲ್ಲೇ ಮಹಾ ಸಭೆಯ ಮುಂಬಯಿ ಶಾಖೆಯ ಮಹಿಳಾ ವಿಭಾಗವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಫೆ. 17ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ನೀಡಲಾಗುವುದು. ಈ ವರ್ಷದ ಡಿ. 25ರಂದು ನಾವು ಊರಿನಲ್ಲಿ ನಂಬಿಕೊಂಡು ಬಂದಿರುವ ಬಬ್ಬರ್ಯ ದೈವದ ನೇಮೋತ್ಸವವು ನಡೆಯಲಿದ್ದು, ಇದರಲ್ಲೂ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದರು.
ಬಹುಮಾನ ವಿತರಣೆ
ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪದಾಧಿಕಾರಿಗಳು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಉಮೇಶ್ ಕರ್ಕೇರ, ಕೃಷ್ಣ ಸಾಲ್ಯಾನ್, ಮೋಹನ್ ಒ. ಮೆಂಡನ್, ರೂಪೇಶ್ ಸುವರ್ಣ ಮೊದಲಾದವರು ವಿಹಾರಕೂಟದ ಯಶಸ್ಸಿಗೆ ಸಹಕರಿಸಿದರು. ಉಪಾಧ್ಯಕ್ಷ ವಸಂತ ಆರ್. ಕುಂದರ್ ವಂದಿಸಿದರು.
ಸಭಾದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.