Advertisement
ಎಲ್ಲೂರಿನ ಘನತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯ ಹಸಿಕಸ ವಿಲೇವಾರಿ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಬಂದಿದೆ ಎನ್ನುವುದನ್ನು ಮುಖ್ಯಾಧಿಕಾರಿ ನಾಗರಾಜ್ ಸಿ. ಸಭೆಯ ಗಮನಕ್ಕೆ ತಂದರು. ಪುರಸಭಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಪುರಸಭೆ ಹೊರತು ಪಡಿಸಿ ಬೇರೆ ಇತರ ಗ್ರಾಮಗಳ ತ್ಯಾಜ್ಯವನ್ನು ಸೇರಿಸಿಕೊಂಡರೆ ಮುಂದೆ ನಮಗೆ ಸಮಸ್ಯೆಯುಂಟಾಗಬಹುದು ಎಂದರು.
Related Articles
Advertisement
ಶಾಸಕರು ಮಾತನಾಡಿ, ಸಭೆಯಲ್ಲಿ ಭಾಗವಹಿಸಲೇ ಬೇಕಾದ ಇಲಾಖೆಗಳ ಅಪೇಕ್ಷಿತ ಅಧಿಕಾರಿಗಳ ಪಟ್ಟಿ ಮಾಡಬೇಕು. ಅವರು ಸಭೆಯಲ್ಲಿ ಪಾಲ್ಗೊಳ್ಳುವಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದರು. ಮುಂದೆ ಈ ಬಗ್ಗೆ ಕ್ರಮ ವಹಿಸುವುದಾಗಿ ಮುಖ್ಯಾಧಿಕಾರಿ ನಾಗರಾಜ್ ಭರವಸೆ ನೀಡಿದರು.
ಟ್ರಾಫಿಕ್ ನಿರ್ವಹಣೆ, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಾಪು ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಕಾಪು ಪೇಟೆಯ ಹೃದಯ ಭಾಗದಲ್ಲಿ ನಿಲುಗಡೆಗೊಳಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರ, ಪಾರ್ಕಿಂಗ್‌ಗೆ ತೊಂದರೆಯಾಗುತ್ತಿದೆ. ಈ ವಾಹನಗಳನ್ನು ಸ್ಥಳಾಂತರಿಸಲು ಕ್ರಮ ವಹಿಸುವಂತೆ ಅರುಣ್ ಶೆಟ್ಟಿ ಪಾದೂರು ಆಗ್ರಹಿಸಿದರು. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಎಎಸ್‌ಐ ರವೀಶ್ ಹೊಳ್ಳ ಉತ್ತರಿಸಿದರು. ಕಾಪು ಪೇಟೆಯ ಟ್ರಾಫಿಕ್ ನಿರ್ವಹಣೆ, ಪಾರ್ಕಿಂಗ್ ಸಮಸ್ಯೆಗೆ ಪರಿಹಾರಕ್ಕೆ ಈಗಾಗಲೇ ಸಲ್ಲಿಸಲಾಗಿರುವ ನೀಲ ನಕ್ಷೆಗೆ ಅನುಗುಣವಾಗಿ ಮುಂದುವರಿಯುವ ಬಗ್ಗೆ ಚರ್ಚಿಸಲಾಯಿತು. ಜಲಮಂಡಳಿ ಅಪೂರ್ಣ ಕಾಮಗಾರಿಯಿಂದ ತೊಂದರೆ
ಪುರಸಭೆ ವ್ಯಾಪ್ತಿಯಲ್ಲಿ ಜಲಮಂಡಳಿ ಮೂಲಕ ನಡೆಯುತ್ತಿರುವ ಕುಡಿಯುವ ನೀರಿನ ಅಪೂರ್ಣ ಕಾಮಗಾರಿಯಿಂದ ಎಲ್ಲ ವಾರ್ಡ್‌ಗಳಲ್ಲಿಯೂ ಸಮಸ್ಯೆಗಳಾಗುತ್ತಿವೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಸಮರ್ಪಕವಾಗಿ ಹೊಂಡ ಮುಚ್ಚದೆ ಸಂಚಾರಕ್ಕೆ ತೊಡಕಾಗುತ್ತಿದೆ. ಸಭೆಯಲ್ಲಿ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಸದಸ್ಯರು ದೂರಿದರು. ಎಲ್ಲಾ ಕಡೆಗಳಲ್ಲಿನ ಸಮಸ್ಯೆಯನ್ನು ಒಂದೇ ಬಾರಿ ಪರಿಹರಿಸಲು ಸಾಧ್ಯವಿಲ್ಲ. ಒಂದೊಂದೆ ವಾರ್ಡ್‌ಗಳ ಸಮಸ್ಯೆಗಳನ್ನು ಪರಿಹರಿಸುವುದಾಗಿ ಗುತ್ತಿಗೆದಾರ ಪರವಾಗಿ ಗೌತಮ್ ಭರವಸೆ ನೀಡಿದರು. ಕಾಪು ಯೋಜನಾ ಪ್ರಾಧಿಕಾರದಲ್ಲಿ ದಲ್ಲಾಳಿ ಕಾಟ
ಕಾಪು ನಗರ ಯೋಜನಾ ಪ್ರಾಧಿಕಾರದಲ್ಲಿ ದಲ್ಲಾಳಿಗಳ ಕಾಟ ಮಿತಿ ಮೀರಿದೆ. ಪ್ರತೀಯೊಂದು ಕಡತ ವಿಲೇವಾರಿಗೆ ಲಂಚದ ಬೇಡಿಕೆ ಹೆಚ್ಚಾಗುತ್ತಿದೆ. ಕಚೇರಿಯೊಳಗಿನ ಕಡತಗಳನ್ನು ಏಜೆಂಟರುಗಳೇ ತೆಗೆದು ಕೊಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಹೆ„ರಾಣಾಗುತ್ತಿದ್ದಾರೆ. ಪುರಸಭೆ ಕಟ್ಟಡದಲ್ಲೇ ಪ್ರಾಧಿಕಾರದ ಕಚೇರಿ ಇರುವುದರಿಂದ ಪುರಸಭೆಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್ ಹಾಗೂ ಕಿರಣ್ ಆಳ್ವ ಆರೋಪಿಸಿದರು. ಯೋಜನಾ ಪ್ರಾಧಿಕಾರದ ಸದಸ್ಯೆ ಶ್ರುತಿ ಉತ್ತರಿಸಿ, 2 ತಿಂಗಳ ಹಿಂದೆಯಷ್ಟೇ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು ಇತರ 3 ಕಡೆಗಳಲ್ಲೂ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ. ಕಾಪು ಕಚೇರಿಯಲ್ಲಿ ವಾರದ 2 ದಿನ ಕಾರ್ಯನಿರ್ವಹಿಸುತ್ತಿದ್ದೇನೆ. ಕಡತ ವಿಲೇಗೆ ಸಂಬಂಧಿಸಿ ಯಾವ ದಾಖಲಾತಿಗಳು ಬೇಕು ಎನ್ನುವುದನ್ನು ಫಲಕದಲ್ಲಿ ಹಾಕಲಾಗುವುದು. ದಲ್ಲಾಳಿ ಹಾವಳಿ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಲಾಗುವುದು. ಸಾರ್ವಜನಿಕರು ನೇರವಾಗಿ ಬಂದು ವ್ಯವಹರಿಸುವಂತೆ ಮನವಿ ಮಾಡಿದರು. ನಗರ ಯೋಜನಾ ಪ್ರಾಧಿಕಾರ ಕಚೇರಿಯಿಂದ 7 ಲಕ್ಷ ರೂಪಾಯಿ ಬಾಡಿಗೆ ಬಾಕಿಯಿದೆ. ಪುರಸಭೆ ನಿಧಿಗೆ ಇದು ನಷ್ಟವನ್ನುಂಟು ಮಾಡುತ್ತಿದ್ದು ಆಡಳಿತ ಮಂಡಳಿ ರಚನೆವರೆಗೆ ಕಾಯದೆ, ಆಡಳಿತಾಧಿಕಾರಿಯೊಂದಿಗೆ ಚರ್ಚಿಸಿ ಶೀಘ್ರ ಬಾಕಿ ಮೊತ್ತ ಪಾವತಿಸುವಂತೆ ಮುಖ್ಯಾಧಿಕಾರಿ ಒತ್ತಾಯಿಸಿದರು. ಹೆದ್ದಾರಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಿರ್ಲಕ್ಷ್ಯ : ಪುರಸಭೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ ಬಹಳಷ್ಟು ಸಮಸ್ಯೆಗಳಿವೆ. ಗಂಭೀರ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸಭೆಗೆ ಬರುತ್ತಿಲ್ಲ ಎಂದು ಸದಸ್ಯರು ಅಳಲು ದೂರಿದರು. ಈ ಬಗ್ಗೆ ಉತ್ತರಿಸಿದ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಪುರಸಭೆ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗೆ ಕೂಲಂಕಷವಾಗಿ ತಿಳಿಸಲಾಗಿದೆ. ಸಮಸ್ಯೆ ಬಗ್ಗೆ ಮೌಖೀಕ ಹಾಗೂ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದೆ. ನಮ್ಮ ಮಾತನ್ನೂ ಕೇಳುತ್ತಿಲ್ಲ. ಸಮಸ್ಯೆಗೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸದಸ್ಯರ ಗೌರವಧನ ಹೆಚ್ಚಳಕ್ಕೆ ಮನವಿ
ಗ್ರಾ.ಪಂ. ಸದಸ್ಯರಿಗೆ 2,000 ಗೌರವಧನ ನೀಡಲಾಗುತ್ತಿದೆ. ಆದರೆ ಪುರಸಭೆ ಸದಸ್ಯರಿಗೆ ಕೇವಲ 1,200 ರೂ. ಗೌರವಧನ ಸಿಗುತ್ತಿದೆ. ಹೆಚ್ಚಿಸುವಂತೆ ಅರುಣ್ ಶೆಟ್ಟಿ ಒತ್ತಾಯಿಸಿದರು. ಮೋಹಿನಿ ಶೆಟ್ಟಿ ಅದಕ್ಕೆ ದನಿಗೂಡಿದರು. ಈ ಬಗ್ಗೆ ಈಗಾಗಲೇ ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿ ಯುವ ವಿಶ್ವಾಸವಿದೆ ಎಂದು ಶಾಸಕರು ಉತ್ತರಿಸಿದರು. ಪುರಸಭೆ ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯೀ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯಾಂಶಗಳು
– ತಾಲೂಕು ಕೇಂದ್ರ, ಪುರಸಭಾ ವ್ಯಾಪ್ತಿಯಲ್ಲಿ ಆಧಾರ್ ಕೇಂದ್ರ ಪ್ರಾರಂಭಕ್ಕೆ ಕ್ರಮಕ್ಕೆ ಸದಸ್ಯ ನೂರುದೀªನ್ ಮನವಿ.
– ಮನೆ ದುರಸ್ತಿಗೆ ನೀಡಿರುವ 298 ಅರ್ಜಿಗಳು ವಿಲೇಗೊಳ್ಳದೆ ಬಾಕಿಯಿದ್ದು ಸೂಕ್ತ ಕ್ರಮಕ್ಕೆ ಸದಸ್ಯೆ ಫರ್ಜಾನ ಆಗ್ರಹ.
– ಮೀನುಗಾರಿಕಾ ರಸ್ತೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ಮಹಮ್ಮದ್ ಆಸಿಫ್ ಒತ್ತಾಯ.
– ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಸಂದರ್ಭ ನಗರ ನೈರ್ಮಲ್ಯೀಕರಣಕ್ಕೆ ಅನುದಾನ ಕೋರಿ ಸರಕಾರಕ್ಕೆ ಪತ್ರ ಬರೆಯುವಂತೆ ಅರುಣ್ ಶೆಟ್ಟಿ ಪಾದೂರು ಒತ್ತಾಯ.
– ಸಭೆಯಲ್ಲಿ ನಡೆದ ಚರ್ಚೆಗಳನ್ನು ಕಡತದಲ್ಲಿ ದಾಖಲೀಕರಣ ಮತ್ತು ಪಾಲನಾ ವರದಿ ಸಿದ್ಧ ಪಡಿಸುವಾಗ ಸದಸ್ಯರ ಬಗ್ಗೆ ಭೇದ ತೋರಿಸದಿರುವಂತೆ ಸದಸ್ಯ ಅಮೀರ್ ಮಹಮ್ಮದ್ ವಿನಂತಿ.