Advertisement

ಹಾಸ್ಟೆಲ್‌ ಸೌಲಭ್ಯ ಪಡೆಯುವಲ್ಲಿ ವಿಳಂಬ 

06:00 AM Jul 22, 2018 | |

ಕಾಪು: ಪದವಿ ತರಗತಿ ಪ್ರಾರಂಭವಾಗಿ ತಿಂಗಳು ಕಳೆಯುತ್ತ ಬಂದಿದೆ. ಸರಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸರಕಾರದ ನಿಯಮಾವಳಿಯಿಂದಾಗಿ ಹಾಸ್ಟೆಲ್‌ ಸೌಲಭ್ಯ ಪಡೆಯುವಲ್ಲಿ ವಿಳಂಬವಾಗಿದ್ದು, ಕಾಲೇಜಿನಲ್ಲೇ ವಸತಿ ವ್ಯವಸ್ಥೆ ಮಾಡಿಕೊಂಡು ದಿನ ಕಳೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

Advertisement

ಸರಕಾರದ ನಿಯಮಾವಳಿಗಳ ಕಾರಣ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕರ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯದಲ್ಲಿ ಕಾಪು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇನ್ನೂ ವಸತಿ ಸೌಲಭ್ಯವಾಗದೇ ಇರುವ ಕಾರಣ ಕಾಲೇಜಿನ 17 ಮಂದಿ ವಿದ್ಯಾರ್ಥಿಗಳು ಕಾಲೇಜ್‌ನ ರೆಸ್ಟ್‌ ರೂಮ್‌ ಅನ್ನೇ ವಸತಿ ನಿಲಯ – ವಿಶ್ರಾಂತಿ ಕೊಠಡಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯಕ್ಕೆ ಸೇರ್ಪಡೆಗೊಳ್ಳಬಯಸುವ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅವುಗಳನ್ನು ಪರಿಶೀಲಿಸಿ ಕೆಟಗರಿ ಆಧಾರದಲ್ಲಿ ಪ್ರವೇಶಾತಿ ನೀಡಲಾಗುತ್ತದೆ. ಆದರೆ ಆನ್‌ಲೈನ್‌ ಪ್ರವೇಶಾತಿ ಪ್ರಕ್ರಿಯೆ ಅಂತಿಮಗೊಳ್ಳದಿರುವುದರಿಂದ ಕಾಪು ಕಾಲೇಜ್‌ನ ಹಾಸ್ಟೆಲ್‌ ಸೌಲಭ್ಯ ಬಯಸುವ ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಕಾಲೇಜಲ್ಲೇ ಓದು, ಊಟ, ನಿದ್ದೆ  
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರ್ಪಡೆಗೊಂಡಿರುವ ಕೊಲ್ಲೂರು-5, ನಿಟ್ಟೂರು-5, ಸಕಲೇಶಪುರ-5, ಮೂಡಿಗೆರೆ-1, ಕೊಪ್ಪ-1 ವಿದ್ಯಾರ್ಥಿಯೂ ಸೇರಿದಂತೆ 17 ಮಂದಿ ಕಾಲೇಜಿನ ವಿಶ್ರಾಂತಿ ಕೊಠಡಿಯನ್ನೇ ವಿಶ್ರಾಂತಿಗಾಗಿ ವಸತಿ ನಿಲಯವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಅಲ್ಲೇ ವಿದ್ಯೆ, ಓದು, ಹೋಂ ವರ್ಕ್‌, ಊಟ, ನಿದ್ದೆ ಸಹಿತ ಎಲ್ಲವನ್ನೂ ನಡೆಸುವಂತಾಗಿದೆ.

ಆಗಸ್ಟ್‌ ವರೆಗೆ ಅನಿವಾರ್ಯ
ಸರಕಾರದ ವಿವಿಧ ನಿಯಮಾವಳಿಗಳು ಹಾಸ್ಟೆಲ್‌ ವಿದ್ಯಾರ್ಥಿಗಳ ಪಾಲಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದು ಇಲಾಖೆ ನೀಡಿದ ಮಾಹಿತಿಯಂತೆ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಜು. 20 ಕೊನೆಯ ದಿನವಾಗಿರುತ್ತದೆ. ಆ ಬಳಿಕ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಕೆಟಗರಿ ಆಧಾರಿತವಾಗಿ ಪ್ರವೇಶ  ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಅದಕ್ಕಾಗಿ ಆಗಸ್ಟ್‌ ಪ್ರಥಮ ವಾರದವರೆಗೆ ಕಾಯುವುದು ಅನಿವಾರ್ಯವಾಗಿದೆ.

ಪ್ರಾಂಶುಪಾಲರ ಮುತುವರ್ಜಿ
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಗಣೇಶ್‌ ಬಿಜೈ ಅವರು ತಮ್ಮ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಎದುರಾಗಬಾರದೆಂಬ ದೃಷ್ಟಿಯಿಂದ ಸ್ವತಃ ಮುತುವರ್ಜಿ ವಹಿಸಿ ಕಾಲೇಜಿನ ಕೊಠಡಿಯೊಂದರಲ್ಲೇ ಊಟ, ಪಾಠ, ನಿದ್ದೆಗೆ ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ಗಾಳಿ ಒತ್ತಡ ಜಾಸ್ತಿ
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾಕರ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯದ ನಿರೀಕ್ಷೆಯೊಂದಿಗೆ ನಾವು ಕಾಪು ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯಲು ಮುಂದಾಗಿದ್ದೇವೆ. ಆದರೆ ಕಾಲೇಜು ಪುನರಾರಂಭಗೊಂಡು ಒಂದು ತಿಂಗಳಾಗುತ್ತ ಬಂದರೂ ನಮಗೆ ವಸತಿ ನಿಲಯದ ವ್ಯವಸ್ಥೆ ಲಭ್ಯವಾಗಿಲ್ಲ. ಆನ್‌ಲೈನ್‌ ಮೂಲಕ ವಸತಿ ನಿಲಯಕ್ಕೆ ಪ್ರವೇಶ ದೊರಕಲಿದ್ದು, ಅಲ್ಲಿಯವರೆಗೆ ಪ್ರಾಂಶುಪಾಲರೇ ಮುತುವರ್ಜಿ ವಹಿಸಿ ಕಾಲೇಜಿನಲ್ಲೇ ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. 
– ನಾಗಭೂಷಣ್‌, 
ಪ್ರಥಮ ಬಿ.ಕಾಂ. ವಿದ್ಯಾರ್ಥಿ

ಶೀಘ್ರದಲ್ಲೇ ಕಾರ್ಯಾರಂಭ
ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಅನಂತರದ ಬಾಲಕರ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜುಲೈ 20ರ ವರೆಗೆ ಅವಕಾಶವಿದೆ. ಇಡೀ ರಾಜ್ಯದಲ್ಲಿ ಇದೇ ರೀತಿಯ ವ್ಯವಸ್ಥೆಯಿದ್ದು, ಉಡುಪಿ ಜಿಲ್ಲೆಯಲ್ಲಿ 23 ಹಾಸ್ಟೆಲ್‌ಗ‌ಳಲ್ಲೂ ಇದೇ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
– ಶಂಕರನಾರಾಯಣ ಭಟ್‌, 
ಮೆನೇಜರ್‌, ಹಿಂದುಳಿದ ಮತ್ತು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next