Advertisement

“ಅವರನ್ನು ಕಂಡ ಆ ಕ್ಷಣ ಕಳೆದು ಹೋದೆ’

01:11 AM Dec 18, 2020 | mahesh |

ಉಡುಪಿ: “ಅವರನ್ನು ನೋಡುತ್ತಲೇ ಕಳೆದು ಹೋಗುವ ಅದೃಷ್ಟ ನನ್ನದಾಯಿತು. ಕೋಟ್ಯಧಿಪತಿಯಲ್ಲಿ ಭಾಗವಹಿಸಿದ ಖುಷಿಯು ಎಷ್ಟೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ರೋಮಾಂಚನ ಆದದ್ದು ಅವರನ್ನು ಎದುರಿಗೆ ಕಂಡಾಗ, ಮಾತನಾಡಿಸಿದಾಗ. ಅದು ನನ್ನ ಬದುಕಿನ ಅತ್ಯಮೂಲ್ಯ ಕ್ಷಣ’ ಎಂದು ಉದಯವಾಣಿಗೆ ವಿವರಿಸಿದ್ದು ಅಜ್ಜರಕಾಡಿನ ಅನಾಮಯ.

Advertisement

ಜನಪ್ರಿಯ ಕೌನ್‌ ಬನೇಗಾ ಕರೋಡ್‌ ಪತಿಯ (ಕೆಬಿಸಿ) ಹಾಟ್‌ ಸೀಟ್‌ನಲ್ಲಿ ಕುಳಿತು ಬಹುತೇಕ ಗುರಿಯತ್ತಿರ ಹೋಗಿ ಸಾಧನೆ ಮಾಡಿದ ಅನಾಮಯ ಉಡುಪಿಯ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ. ಯೋಗೇಶ್‌ ದಿವಾಕರ್‌ ಮುತ್ತು ಅನುರಾಧಾರ ಪುತ್ರ. ಅಕ್ಕ ಅದಿತಿ ಪಿಪಿಸಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

ಅನಾಮಯ ಎರಡು ವರ್ಷಗಳಿಂದ ಬಿಡದೇ ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಅವರ ಕೆಬಿಸಿ ನೋಡುತ್ತಿದ್ದ. ಆ ಮೂಲಕ ಅಲ್ಲಿ ಕೇಳಲಾಗುವ ಪ್ರಶ್ನೆಗಳ ಮಾಹಿತಿ ಸಂಗ್ರಹಿಸುವುದನ್ನೂ ಮಾಡುತ್ತಿದ್ದ. ಆ ಹವ್ಯಾಸವೇ ಹಾಟ್‌ ಸೀಟ್‌ನಲ್ಲಿ ಕುಳ್ಳಿರಿಸಿತು ಎಂದರೆ ನಂಬಲೇಬೇಕು. ಅನಾಮಯ ಭಾಗವಹಿಸಿದ್ದು ಮಕ್ಕಳ ಸಂಚಿಕೆಯಲ್ಲಿ. ಗೆದ್ದ ಮೊತ್ತ 50 ಲಕ್ಷ ರೂ. ಅವರು ಉದಯವಾಣಿಯೊಂದಿಗೆ ಹಂಚಿಕೊಂಡ ಅನುಭವ ಇಲ್ಲಿದೆ.

ಅಮಿತಾಬ್‌ ಬಚ್ಚನ್‌ ಯಾರು ಅಂತ ಗೊತ್ತಿತ್ತಾ?
ಅವರ “ಪೀಕು’ ಚಿತ್ರವನ್ನು ನೋಡಿದ್ದೆ. ಅವರನ್ನು ನೇರವಾಗಿ ನೋಡುವ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಆದರೆ ಅದು ಕೆಬಿಸಿ ಮೂಲಕ ಸಿಕ್ಕಿತು. ಮೊದಲ ಬಾರಿಗೆ ಮುಖಾಮುಖೀಯಾ ದಾಗ ರೋಮಾಂಚನವಾಯಿತು. ಅವರನ್ನು ನೋಡಿದ ಒಂದು ಕ್ಷಣ ಕಳೆದೇ ಹೋದೆ.

ಕೆಬಿಸಿಯಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತಾ?
ಎರಡು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನೋಡುತ್ತಿದ್ದಾಗ ಅವಕಾಶ ಸಿಕ್ಕರೆ ಬಿಡಬಾರದು ಎಂದು ಅನ್ನಿಸಿದ್ದು ಸತ್ಯ. ಆ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಮನೆಯಲ್ಲಿ ಕುಳಿತು ಉತ್ತರಿಸುತ್ತಿದ್ದೆ. ಇದು ನನ್ನ ಜ್ಞಾನವನ್ನು ಹೆಚ್ಚಿಸಿತಲ್ಲದೇ ಶಾಲೆ ಹಾಗೂ ಇತರ ಕ್ವಿಜ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಪೂರಕವಾಯಿತು. ಆದರೆ ಅಕ್ಟೋಬರ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಆಸೆ ಈಡೇರಿತು.

Advertisement

ಶಾಲೆ ಕ್ವಿಜ್‌ಗಿಂತ ಈ ಕಾರ್ಯಕ್ರಮ ಹೇಗೆ ವ್ಯತ್ಯಾಸ?
ಎರಡರಲ್ಲೂ ಸಾಮಾನ್ಯ ಜಾನ ಕುರಿತಾದ ಪ್ರಶ್ನೆಗಳೇ. ಆದರೆ ಅದನ್ನು ನಡೆಸಿಕೊಡುವ ವ್ಯಕ್ತಿ ಗಳು ಭಿನ್ನ. ಜತೆಗೆ ಕ್ವಿಜ್‌ ಮಾಸ್ಟರ್‌ ಕೇಳುವ ಪ್ರಶ್ನೆಗೆ ಸಮಯ ಮತ್ತು ಒತ್ತಡ ಕಡಿಮೆ ಇರುತ್ತದೆ. ಆದರೆ ಇದರಲ್ಲಿ ಹಾಟ್‌ ಸೀಟ್‌ನಲ್ಲಿ ಕುಳಿತು ಉತ್ತರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು.

“ಬಿಗ್‌’ ಬಿ ಹಾಗೂ ನಿಮ್ಮ ನಡುವಿನ ಮಾತುಕತೆ?
ಅವರೊಂದಿಗಿನ ಮಾತುಕತೆಯಲ್ಲಿ ಶೇ. 90ರಷ್ಟು ಮಾತುಗಳು ನನ್ನ ಆಸಕ್ತಿಯಾದ ಕಾರುಗಳ ಮೇಲೆಯೇ ಇರುತ್ತಿತ್ತು. ಇದರಿಂದಾಗಿ ನನಗೆ ಒತ್ತಡ ಕಡಿಮೆ ಆಗಿ ಉತ್ತರ ನೀಡಲು ಅನುಕೂಲವಾಯಿತು.

ಪ್ರಶ್ನೆ ಹಾಗೂ ಲೈಫ್ ಲೈನ್‌ ಹೇಗೆ ಬಳಸಿದಿರಿ?
40 ಸಾವಿರ ರೂ. ಪ್ರಶ್ನೆಯಿಂದ ಲೈಫ್ಲೈನ್‌ ಬಳಸಲು ಪ್ರಾರಂಭಿಸಿದೆ. 4 ಲೈಫ್ಲೈನ್‌ಗಳಲ್ಲಿ ಎರಡರಿಂದ ಸರಿ ಉತ್ತರ ನೀಡಿದೆ. 6.45 ಲ.ರೂ. ಮೊತ್ತದ ಪ್ರಶ್ನೆಗೆ ಉತ್ತರ ಗೊತ್ತಿತ್ತು. ಆದರೂ ಗೊಂದಲದ ಕಾರಣ ಲೈಫ್ಲೈನ್‌ ಬಳಸಿದೆ. ಅನಂತರ 1 ಕೋ.ರೂ. ಪ್ರಶ್ನೆ ಸಂದರ್ಭದಲ್ಲಿ ನನ್ನಲ್ಲಿ ಒಂದು 50:50 ಲೈಫ್ಲೈನ್‌ ಇತ್ತು. ಆದರೆ ನನಗೆ ಉತ್ತರ ಗೊತ್ತಿರಲಿಲ್ಲ. ಹಾಗಾಗಿ ರಿಸ್ಕ್ ಬೇಡ ಎಂದು ಆಟದಿಂದ ಹೊರಗೆ ಬಂದೆ.

ಮುಂದಿನ ಕನಸು ಏನು?
ಚೆನ್ನಾಗಿ ಓದಿಕೊಂಡು ಕಾರು ಕಂಪೆನಿ ತೆಗೆಯ ಬೇಕು ಎನ್ನುವ ಆಸೆ ಇದೆ. ಅದರಲ್ಲಿ ಹೈಡ್ರೋಜನ್‌ ಕಾರುಗಳನ್ನು ರೂಪಿಸಬೇಕೆಂದುಕೊಂಡಿರುವೆ. ಪ್ರಸ್ತುತ ಕಲಿಕೆಯ ಜತೆಗೆ ಕ್ರೀಡೆ, ಸಂಗೀತ-ವಾದ್ಯ, ಸೇರಿದಂತೆ ಇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದೇನೆ.

ಈ ವಿದ್ಯಾರ್ಥಿ ವಿಶೇಷ ಸಂಚಿಕೆಗೆ ಆನ್‌ಲೈನ್‌ ಲರ್ನಿಂಗ್‌ ಆ್ಯಪ್‌ವೊಂದು 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅ. 5ರಿಂದ 25 ರವರೆಗೆ ಆನ್‌ಲೈನ್‌ ಕ್ವಿಜ್‌ ಸ್ಪರ್ಧೆ ಆಯೋಜಿಸಿತ್ತು. ದೇಶಾದ್ಯಂತ 1.5 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾರಂಭಿಕ ಹಂತದಲ್ಲಿ 1,000 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅನಂತರದ ಹಂತದಲ್ಲಿ 200 ಮಂದಿಗೆ ಅವಕಾಶ ಸಿಕ್ಕಿತು. ಅಂತಿಮವಾಗಿ ಆಯ್ಕೆಯಾದ ಒಟ್ಟು 8 ವಿದ್ಯಾರ್ಥಿಗಳಲ್ಲಿ ಅನಾಮಯನೂ ಒಬ್ಬ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ. ಈಗ 4 ವಿದ್ಯಾರ್ಥಿಗಳ ಪೈಕಿ ಹೆಚ್ಚು ಪ್ರಶ್ನೆಗೆ ಉತ್ತರಿಸಿ ಮೊತ್ತ ಗಳಿಸಿದವನೂ ಇವನೇ.

ಅನಾಮಯಗೆ ಎಲ್ಲ ಕ್ಷೇತ್ರದಲ್ಲಿ ಆಸಕ್ತಿ. ಆತನ ಇಷ್ಟದಂತೆ ನಾವೆಲ್ಲರೂ ಅವನಿಗೆ ಪ್ರೋತ್ಸಾಹ ನೀಡು ತ್ತಿದ್ದೇವೆ. ಕಲಿಕೆ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುಂದಿದ್ದಾನೆ. ಕೆಬಿಸಿಯಲ್ಲಿ ಒಳ್ಳೆಯ ರೀತಿಯಲ್ಲಿ ಉತ್ತರಿಸುತ್ತಾನೆ ಎಂಬ ಆತ್ಮವಿಶ್ವಾಸ ಇತ್ತು. ನಮ್ಮ ನಿರೀಕ್ಷೆ ಮೀರಿ ಉತ್ತರಿಸಿದ್ದಾನೆ.
– ಯೋಗೇಶ್‌ ದಿವಾಕರ್‌, ಅನುರಾಧಾ, ಅನಾಮಯನ ಹೆತ್ತವರು

Advertisement

Udayavani is now on Telegram. Click here to join our channel and stay updated with the latest news.

Next