ವಿಶ್ವದ ಅತಿ ಹೆಚ್ಚು ದೀರ್ಘ ಆಯಸ್ಸಿನ ಜನರ ತಾಣ ದಕ್ಷಿಣ ಜಪಾನ್‌ನ ಒಕಿನಾವಾ ದ್ವೀಪ ಸಮುಚ್ಚಯ! ಇಲ್ಲಿ ಹೆಂಗಳೆಯರ ಸರಾಸರಿ ವಯೋಮಾನ ತೊಂಬತ್ತು ವರ್ಷ. ಗಂಡಸರದು ಸುಮಾರು ಎಂಬತ್ತನಾಕು ವರ್ಷ! ಅಂದರೆ ಹೆಂಗಸರೇ ಹೆಚ್ಚು ಕಾಲ ಬದುಕುವರು ಎಂದಾಯಿತು. ಆ ದ್ವೀಪ ಸಮುಚ್ಚಯದ ಮಂದಿಯ ಆಹಾರ ಅಭ್ಯಾಸಗಳ ಬಗ್ಗೆ ಒಂದಿಷ್ಟು ಅರಿಯೋಣ. ಮೀನು, ಹಂದಿ ಮಾಂಸ, ಗೆಣಸು ಮತ್ತು ಸಮುದ್ರ ಕಳೆಯೊಂದನ್ನು ಈ ಮಂದಿ ಹೆಚ್ಚಾಗಿ ಸೇವಿಸುತ್ತಾರೆ. ಒಮ್ಮೆ ಅರವತ್ತನಾಲ್ಕರ ಗಡಿ ದಾಟಿದರೆ ಸೈ. ಅನಂತರ ನಿರಾಯಾಸವಾಗಿ ಶತಮಾನ ಪೂರೈಸುವರು ಎಂಬ ದೃಢ ನಂಬಿಕೆ ಅಲ್ಲಿನ ಜನಕ್ಕಿದೆ. ಭಯಂಕರ ರೋಗಗಳೆನಿಸಿದ ಕ್ಯಾನ್ಸರ್, ಹೃದಯ ಕಾಯಿಲೆ ಮತ್ತು ಲಕ್ವದಂಥ ತೊಂದರೆಗೊಳಗಾದವರ ಸಂಖ್ಯೆ ಒಕಿನಾವಾ ಪ್ರದೇಶದಲ್ಲಿ ತೀರಾ ವಿರಳ. ಅಷ್ಟೆ ಅಲ್ಲ. ಆಲ್‌ಷೆವಿಯರ್ ಕಾಯಿಲೆ ಎಂಬ ಮರೆಗುಳಿತನ, ಖನ್ನತೆಯ ಬವಣೆಗಳೂ ಅಲ್ಲಿನ ಜನರಿಗೆ ಇಲ್ಲ ಇಂತಿಪ್ಪ ಒಕಿನಾವಾದಿಂದ ಸೀದಾ ನಾವು ತುಮಕೂರಿನ ಕ್ಯಾತ್ಸಂದ್ರಕ್ಕೆ ಬರೋಣ.
1) ಕ್ಯಾಂತ್ಸಂದ್ರದಲ್ಲಿ ಹುಟ್ಟಿ ಬೆಳೆದ ರಾಜಮ್ಮನವರಿಗೆ ಇದೀಗ ನೂರಾನಾಲ್ಕರ ಸಂಭ್ರಮ. ಅಮಲ್ದಾರ ರಾಮರಾವ್ ಮತ್ತು ಜಾನಕಮ್ಮ ದಂಪತಿಗಳ ಕೊನೆಯ ಮಗಳೀಕೆ. ಹುಟ್ಟಿದ್ದು 1915, ಮಾರ್ಚ್ 14ರಂದು. ಅಂದರೆ ಇದೀಗ ಬರೋಬ್ಬರಿ ನೂರಾ ಮೂರು ಸಂವತ್ಸರ ಮುಗಿಸಿ ನೂರಾನಾಲ್ಕರ ಹೊಸ್ತಿಲಲ್ಲಿ ಇದ್ದಾರೆ. ಏಕಾದಶಿಯ ನಿಟ್ಟುಪವಾಸ ಮಾಡುತ್ತಿದ್ದರಂತೆ. ಇದೀಗ ಮಕ್ಕಳ ಮೊಮ್ಮಕ್ಕಳ ಒತ್ತಾಯಕ್ಕೆ ಮಣಿದು ಫಲಾಹಾರಕ್ಕೆ ಒಪ್ಪಿದ್ದಾರೆ. ದಿನಕ್ಕೊಂದೇ ಊಟ, ಅವರ ಸುಖಾಯುಷ್ಯದ ಗುಟ್ಟು. ಸರಳ ಜೀವನ ಮತ್ತು ಆರೇಳು ದಶಕಗಳ ದಣಿವರಿಯದ ದುಡಿಮೆ. ಈಗಲೂ ದಿನ ಪತ್ರಿಕೆ ಓದುತ್ತಾರೆ. ರಾತ್ರಿ ಹತ್ತೂವರೆಗೆ ಲೈಟ್ ಆಫ್. ಹಗಲು ಸ್ನಾನದ ನಂತರವೇ ಒಪ್ಪೊತ್ತಿನ ಊಟ. ಇದೀಗ ಕಿವಿ ಕೊಂಚ ಮಂದ. ಹಾಗಾಗಿ ಟಿ.ವಿ ಹಂಗಿಲ್ಲ. ಸಿಹಿ ಅಡುಗೆ ಅಂದರೆ ಇಂದಿಗೂ ಪಂಚ ಪ್ರಾಣ. ಯಾವ ಕಾಯಿಲೆ-ಮಾತ್ರೆಯ ಹಂಗಿಲ್ಲದ ರಾಜಮ್ಮ, ಎಪ್ಪತ್ತು ವರ್ಷದ ಹಿಂದಿನ ತಮ್ಮ ಕುಟುಂಬ ವೈದ್ಯ ಸಲಹೆಗಾರ ಗಂಗಾಧರ್ ಅವರ ಸುದ್ದಿ ಹೇಳುತ್ತಾರೆ. ಯುರೋಪಿಯನ್ ಶಾಲೆಯಲ್ಲಿ ಕಲಿಯುತ್ತಿದ್ದಾಗ ತಮ್ಮ ಸೀನಿಯರ್ ವಿದ್ಯಾರ್ಥಿ, ಇಂದಿನ ಸಿದ್ಧಗಂಗೆ ಶತಾಯುಷಿಗಳ ನೆನಪು ಇಂದಿಗೂ ಹಸಿರಾಗಿದೆ. ದಿನವೂ ದಿನ ಪತ್ರಿಕೆ ಓದುವ ರಾಜಮ್ಮ ದೈನಂದಿನ ತಿಥಿ, ನಕ್ಷತ್ರ ಗುರುತುಮಾಡಿಕೊಳ್ಳುತ್ತಾರೆ. ತಮ್ಮ ಪಿಂಚಣಿಯ ವಿವರ ಕೂಡ ಆಕೆಗೆ ನಾಲಿಗೆ ತುದಿಯಲ್ಲಿದೆ.
2) ಬೆಂಗಳೂರು ಕೆಂಗೇರಿಯ ಉಲ್ಲಾಳು ಸಮೀಪದ ಪುಟ್ಟ ವಲಗೇರಹಳ್ಳಿಯ ಮುನಿಯಮ್ಮನಿಗೆ ಇದೀಗ ನೂರರ ಗಡಿಗೆ ತೀರ ಹತ್ತಿರ. ಸಾಲುಮರದ ತಿಮ್ಮಕ್ಕನಂತೆ ಈಕೆಗೂ ಗಿಡ ಮರದ ಸಸಿ ನೆಡುವ ಹುಚ್ಚು. ರೈತಾಪಿ ಕೆಲಸ ಮಾಡುತ್ತಿದ್ದ ಮುನಿಯಮ್ಮ ಇದೀಗ ಬೆಂಗಳೂರು ಮಹಾನಗರದ ವ್ಯಾಪ್ತಿಯಡಿ ತಮ್ಮ ಭೂಮಿ ಕಳೆದುಕೊಂಡರು. ಮಿಶ್ರಾಹಾರಿ ಮುನಿಯಮ್ಮನಿಗೆ ಇದು ವರೆಗೆ ಬಿ.ಪಿ., ಶುಗರ್ ಕಾಯಿಲೆಗಳ ಹಂಗಿಲ್ಲ. ಆಕೆಗೆ ಬದುಕು ಭಾರವಾಗಿಲ್ಲ. ಏಳು ಮಕ್ಕಳ ಹಡೆದ ಮಹಾತಾಯಿ ಈಕೆ. ಇಂದು ಹದಿಮೂರು ಮೊಮ್ಮಕ್ಕಳ ಅಜ್ಜಿ. ಒಕ್ಕಲುತನದ ಸಾದಾ ಬದುಕು ಮುನಿಯಮ್ಮನ ತುಂಬು ಜೀವನದ ಒಳಗುಟ್ಟು. ಆಕೆ ತನ್ನ ಮುದಿತನದ ಬದುಕನ್ನು ಹಂಗಾಗಿ ಕಾಣುತ್ತಿಲ್ಲ. ತನ್ನ ಅನುಭವಗಳನ್ನು ಮಕ್ಕಳು, ಮೊಮ್ಮಕ್ಕಳ ಸಂಗಡ ಹಂಚಿಕೊಳ್ಳುತ್ತಾರೆ.
3) ಬಾಗಲಕೋಟೆ ಜಿಲ್ಲೆ ಗುಳೇದ ಗುಡ್ಡದ ದುರುಗಮ್ಮನಿಗೆ ತನ್ನ ವಯಸ್ಸು ಎಷ್ಟು ಎಂದು ತಿಳಿದಿಲ್ಲ. ಆದರೆ ಆಕೆಯ ಮುಖದ ನಿರಿಗೆಗಳು ಕನಿಷ್ಠ ಒಂಬತ್ತು ದಶಕ ದಾಟಿದ ಚಿಹ್ನೆ ಮೂಡಿಸುತ್ತವೆ. ದೊಡ್ಡ ಮೊಮ್ಮಗಳು ಲಗ್ನವಾಗಿ ಆಕೆಯ ಕೂಸಿಗೆ ಇದೀಗ ಲಗ್ನದ ವಯಸ್ಸು ಎಂಬ ಹೆಮ್ಮೆ ದುರುಗಮ್ಮನಿಗೆ. ಕೂಲಿಗಾಗಿ ಮಗಂದಿರು ಗುಳೇದ ಗುಡ್ಡದಿಂದ ಪರ ಊರಿಗೆ ವಲಸೆ ಬಂದಾಗ ಊರೂರು ಅಂಡಲೆತ ಅನಿವಾರ್ಯ. ಆದರೆ ತನ್ನ ಬಡತನದ ಬಗ್ಗೆ ಬದುಕಿನ ಅನಿಶ್ಚಿತತೆ ಬಗ್ಗೆ, ದುರುಗಮ್ಮನಿಗೆ ಖೇದವೆಂಬುದಿಲ್ಲ. “ಹುಟ್ಟಿಸಿದ ಸಿವಾ ಎರಡುಹೊತ್ತಿನ ರೊಟ್ಟಿಗೆ ತತ್ವಾರ ಮಾಡಿಲಿÅà’ ಎಂಬ ಹೆಮ್ಮೆ ದುರುಗಮ್ಮನ ದೀರ್ಘ ಜೀವನದ ಗುಟ್ಟು. ದುರುಗಮ್ಮ ಸಸ್ಯಾಹಾರಿ. ದುಡಿಮೆಯೇ ಈಕೆಯ ಆರೋಗ್ಯದ ಜೀವಾಳ. ಈಗಲೂ ಕೂಲಿಗೆ ಹೋಗುವ ಕೂಲಿಗೆ ಹೋಗುವ ಮಂದಿಗೆಲ್ಲ ಮನೆ ಈಕೆಯೇ ರೊಟ್ಟಿ ತಟ್ಟುತ್ತಾಳೆ. ಮನೆಯಲ್ಲಿರುವ ಕಿರಿಯ ಸದಸ್ಯರ ದೇಖರೇಕೆ ದುರುಗಮ್ಮನ ಬಲು ಇಷ್ಟದ ಕೆಲಸ.
ಈಗ ನೀವೇ ಹೇಳಿ. ಕ್ಯಾತ್ಸಂದ್ರದ ರಾಜಮ್ಮನಿಗೆ, ವಲಗೇರ ಹಳ್ಳಿಯ ಮುನಿಯಮ್ಮನಿಗೆ ಅಥವಾ ಗುಳೇದಗುಡ್ಡದ ದುರುಗಮ್ಮನಿಗೆ ಎಂದಿಗೂ ಬದುಕು ಭಾರ ಎನಿಸಲಿಲ್ಲ. ಆದಾವ ವೈದ್ಯರ ಬಳಿಯೂ ಅವರು ಖನ್ನತೆಗೆ, ಮರೆಗುಳಿತನದ ಚಿಕಿತ್ಸೆಗೆ ಎಡತಾಕಲಿಲ್ಲ. ಮದ್ದು ಮಾತ್ರೆಗಳ ಗೊಡವೆ ಇವರಿಗಿಲ್ಲ. ಈ ಹಿನ್ನೆಲೆಯಲ್ಲಿ ಕೊಂಚ ವಿಚಾರ ಮಾಡೋಣ. ಅಮೆರಿಕನ್ನರ ಮಾದರಿಯ ಡಂಪಿಂಗ್ ಅಂದರೆ ವಯಸ್ಸಾದ ತಂದೆ ತಾಯಿಯರನ್ನು ಬೇರೆ ಮಾಡುವ, ಹೊಸ ಪೀಳಿಗೆಯ ಜಾಡು ಇದೀಗ ನಮ್ಮಲ್ಲೂ ಕಾಲಿಟ್ಟಿದೆ. ಅಂತಹ ಭಾವನಾತ್ಮಕ ಬೆಸುಗೆ ಕಡಿಮೆಯಾಗಿ ಬಗೆ ಬಗೆಯ ಮನೋದೈಹಿಕ ಕಾಯಿಲೆಗೆ ತುತ್ತಾಗುತ್ತಿರುವ ಹರೆಯದ ಮಂದಿ ಹತಾಶರಾಗುತ್ತಿದ್ದಾರೆ. ಇಂತಹ ನೆಲಗಟ್ಟಿನಲ್ಲಿ ದೀರ್ಘ ಜೀವನ ಶಾಪ ಎಂಬ ಭಾವನೆ ಜೊತೆಯಾಗುತ್ತಿದೆಯೇ?
ಕಾಲವೇ ಇದಕ್ಕೆ ಉತ್ತರಿಸಬೇಕು.
ಡಾ.ಸತ್ಯನಾರಾಯಣ ಭಟ್ ಪಿ.