Advertisement

ಪೇಟೆಯೊಳಗಿನ ನಿಲ್ದಾಣಕ್ಕೆ ಬಸ್‌ ಬರುವುದಷ್ಟೇ ಬಾಕಿ

08:51 PM Sep 23, 2021 | Team Udayavani |

ಕಟಪಾಡಿ: ವೇಗವಾಗಿ ಬೆಳೆಯುತ್ತಿರುವ ಕಟಪಾಡಿ ಪೇಟೆಯೊಳಗಿನ ಬಸ್‌ ನಿಲ್ದಾಣದ ಪ್ರದೇಶದಲ್ಲಿ ನೋ ಪಾರ್ಕಿಂಗ್‌, ಇನ್‌ ಆ್ಯಂಡ್‌ ಔಟ್‌ ಸೂಚನೆಯ ಬರಹಗಳು ಮತ್ತೆ ಬಣ್ಣ ಬಳಿದು ರಾರಾಜಿಸುತ್ತಿದ್ದು, ಬಸ್‌  ನಿಲ್ದಾಣ ಪ್ರವೇಶಿಸುವುದನ್ನು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.

Advertisement

ಇಲ್ಲಿ  ಅಡ್ಡಾದಿಡ್ಡಿಯಾಗಿ ವಾಹನಗಳ ಪಾರ್ಕಿಂಗ್‌ ಸಮಸ್ಯೆಯಿಂದಾಗಿ  ಪೇಟೆಯೊಳಗಿನ ತಂಗುದಾಣಕ್ಕೆ ಬಸ್‌ ಬಾರದೆ ಇರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ನಿತ್ಯ ಪ್ರಯಾಣಿಕರು ರಾಷ್ಟ್ರೀಯ

ಹೆದ್ದಾರಿ ದಾಟುವ ಮತ್ತು ಗ್ರಾಹಕರು ಪಾರ್ಕಿಂಗ್‌ ಮಾಡಲ್ಪಟ್ಟ ವಾಹನಗಳ ನಡುವೆ ನುಸುಳಿಕೊಂಡು ಹೋಗಿ ಖರೀದಿ ನಡೆಸುವ ಪರಿಸ್ಥಿತಿ ಬಂದೊದಗಿತ್ತು.

ಕಟಪಾಡಿ ಪೇಟೆಯು ಸಾಕಷ್ಟು ವ್ಯಾಪಾರ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ವಸತಿ ಸಮುತ್ಛಯಗಳು, ಹಲವು ದೇಗುಲ, ಆರಾಧನಾ ಕೇಂದ್ರ, ಹೊಟೇಲ್‌,  ಕ್ಲಿನಿಕಲ್‌ ಲ್ಯಾಬೋರೇಟರಿಗಳನ್ನು ಹೊಂದಿದೆ.

ಮಟ್ಟು, ಕೋಟೆ, ಶಿರ್ವ, ಶಂಕರಪುರ, ಮಣಿಪುರ ಸಹಿತ ಇತರ ಗ್ರಾಮಗಳಿಗೂ ಕೇಂದ್ರ ಸ್ಥಳವಾಗಿದೆ. ಆ ನಿಟ್ಟಿನಲ್ಲಿ  ಇವೆಲ್ಲವನ್ನೂ ಅವಲಂಬಿಸಿ ಸದಾ ಜನಜಂಗುಳಿಯಿಂದ ಕಟಪಾಡಿ ಪೇಟೆಯು ಗಿಜಿಗುಡುತ್ತಿರುತ್ತದೆ.

Advertisement

ಸುದಿನ ವರದಿ:

ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್‌  ಪ್ರದೇಶವಾಗಿ ಗುರುತಿಸಿಕೊಂಡಿರುವ ಕಟಪಾಡಿ ಪೇಟೆಯು ಹೆಚ್ಚಿನ ಪ್ರಯಾಣಿಕರಿಗೂ ಪ್ರಮುಖ ಸ್ಥಳವಾಗಿದೆ. ಪ್ರಸ್ತುತ ಕಟಪಾಡಿ ಪೇಟೆಯೊಳಕ್ಕೆ ಎಲ್ಲ ಬಸ್‌ಗಳು ಬಾರದೇ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ. ವಯೋವೃದ್ಧರು, ಮಕ್ಕಳು, ಮಹಿಳೆಯರು, ಅಂಗವಿಕಲರು, ಬಸ್‌ಗಾಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವಂತಹ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವ ಬಗ್ಗೆ ಉದಯವಾಣಿ ಸುದಿನವು “ಒಂದು ಊರು ಹಲವು ದೂರು’  ಸರಣಿಯಲ್ಲಿ ಜನಪರ ಕಾಳಜಿಯ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.

ಆ ನಿಟ್ಟಿನಲ್ಲಿ ಸ್ಥಳೀಯ ಕಟಪಾಡಿ ಗ್ರಾಮ ಪಂಚಾಯತ್‌ ಮತ್ತು ಕಾಪು ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು  ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಈ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಿದೆ. ಸೂಕ್ತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಕಟಪಾಡಿ ಬಸ್‌ ನಿಲ್ದಾಣದೊಳಕ್ಕೆ ಬಸ್‌ ಬರುವಂತೆ ಹೆಚ್ಚಿನ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಬೆರಳೆಣಿಕೆಯ ದಿನಗಳಲ್ಲಿ ಕಟಪಾಡಿ ಪೇಟೆಯ ನಿಲ್ದಾಣದಲ್ಲಿ ಬಸ್‌ ಸೇವೆಯು ಆರಂಭವಾಗುವ ಸಾಧ್ಯತೆ ಇದೆ.

ಕಟಪಾಡಿ ಪೇಟೆಯೊಳಕ್ಕೆ ಬಸ್‌ ನಿಲ್ದಾಣಕ್ಕೆ ಬರುವ ವ್ಯವಸ್ಥೆ ಕಲ್ಪಿಸಲು ಸಿದ್ಧತೆಗಳನ್ನು ನಡೆಸಲಾಗಿದೆ. ರಿಕ್ಷಾಗಳಿಗೆ ಬೇರೆಡೆ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕೇವಲ 3 ರಿಕ್ಷಾಗಳು ಮಾತ್ರ ಪೇಟೆಯೊಳಗೆ ನಿಲ್ಲಿಸಲು ಅವಕಾಶ ಕಲ್ಪಿಸಿ ಸಹಕಾರ ಕೋರಲಾಗಿದೆ. ವ್ಯಾಪಾರಕ್ಕಾಗಿ ಬರುವ ಗ್ರಾಹಕರ ದ್ವಿಚಕ್ರ ವಾಹನಗಳಿಗೆ ವ್ಯಾಪಾರ ಮಳಿಗೆಗಳ ಮುಂಭಾಗದಲ್ಲಿಯೇ ಬಣ್ಣ ಬಳಿದು ಸ್ಥಳವನ್ನು ನಿಗದಿಪಡಿಸಲಾಗಿದೆ. ಇತರ ವಾಹನಗಳ ಪಾರ್ಕಿಂಗ್‌  ಸಮಸ್ಯೆಗೆ ಫ್ಲೆ$ç ಓವರ್‌ ಆದ ಬಳಿಕವಷ್ಟೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದ್ದು, ಸರ್ವರೂ ಸಹಕರಿಸಬೇಕು. ಎಲ್ಲವೂ ಯೋಜನೆಯಂತೆ ನಡೆದಲ್ಲಿ ಮುಂದಿನ ವಾರದೊಳಗೆ ಕಟಪಾಡಿ ಪೇಟೆಯೊಳಗಿನ  ನಿಲ್ದಾಣದಲ್ಲಿ ಬಸ್‌ ಸೇವೆಯನ್ನು ನೀಡಲಿದೆ .ರಾಘವೇಂದ್ರ, ಪಿ.ಎಸ್‌.ಐ. ಕಾಪು ಠಾಣೆ 

ಪೊಲೀಸ್‌ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ  ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಬಸ್‌ ಕಟಪಾಡಿ  ನಿಲ್ದಾಣಕ್ಕೆ ಬರುವಲ್ಲಿ ಪ್ರಯತ್ನಿಸಲಾಗುತ್ತಿದ್ದು, ವಾರದೊಳಗಾಗಿ ಕಟಪಾಡಿ ಪೇಟೆಯ  ನಿಲ್ದಾಣದಲ್ಲಿ ಬಸ್‌ ಪ್ರಯಾಣಿಕರಿಗೆ ಸೇವೆಯನ್ನು ನೀಡುವ ಭರವಸೆ ಇದೆ. ಮಮತಾ ವೈ. ಶೆಟ್ಟಿ, ಪಿ.ಡಿ.ಒ., ಕಟಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next