Advertisement

ಚುರುಕುಗೊಂಡ ಸಮಾರಂಭ; ದೇಗುಲಗಳಿಗೆ ಭಕ್ತಪ್ರವಾಹ

10:02 PM Feb 06, 2022 | Team Udayavani |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 35 ಜೋಡಿಗಳಿಗೆ ಸರಳ ರೀತಿಯ ವಿವಾಹ ಕಾರ್ಯಕ್ರಮ ನಡೆಯಿತು.

Advertisement

ಬೆಳಗ್ಗೆ 8.45ರಿಂದ ಆರಂಭವಾದ ವಿವಾಹ ಮುಹೂರ್ತಗಳು ಮಧ್ಯಾಹ್ನ 12.30ರ ತನಕ ನಡೆದವು. ಸುಮಾರು 5 ಸಾವಿರ ಮಂದಿ ಅನ್ನ ಪ್ರಸಾದ ಭೋಜನ ಸ್ವೀಕರಿಸಿದ್ದಾರೆ.

ಎರಡು ಕೌಂಟರ್‌
ಸುವ್ಯಸ್ಥಿತವಾಗಿ ಮದುವೆ ಮುಹೂರ್ತ ನಡೆಸಿಕೊಡುವುದಕ್ಕಾಗಿ ನಾಲ್ವರು ಅರ್ಚಕ ಪುರೋಹಿತರು, ಎರಡು ಕೌಂಟರ್‌ ಮತ್ತು ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿತ್ತು. ದ.ಕ. ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ವಧುವರರೂ ಇದ್ದರು. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನ ಫಲಕ ಅಳವಡಿಸಲಾಗಿದ್ದು, ಧ್ವನಿವರ್ಧಕದ ಮೂಲಕವೂ ತಿಳಿಸಲಾಯಿತು.

ವಾಹನಗಳ ಸಂಖ್ಯೆ ಹೆಚ್ಚಿದ್ದರೂ ಟ್ರಾಫಿಕ್‌ ಸಮಸ್ಯೆ ಉಂಟಾಗ ದಂತೆ ಅಚ್ಚುಕಟ್ಟಾದ ನಿರ್ವಹಣೆ ವ್ಯವಸ್ಥೆ ಮಾಡಲಾಗಿತ್ತು.

ಕೊಲ್ಲೂರು: 5 ಸಾವಿರ ಮಂದಿ ದರ್ಶನ
ಶ್ರೀ ಮೂಕಾಂಬಿಕಾ ದೇಗುಲದಲ್ಲಿ ರವಿವಾರ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು.

Advertisement

ಬೆಳಗ್ಗಿನಿಂದ ಸಂಜೆ ತನಕ 5 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ಸುಮಾರು ಮೂರೂವರೆ ಸಾವಿರ ಮಂದಿಗೆ ಅನ್ನಪ್ರಸಾದ ವಿತರಿಸಲಾಯಿತು. ಕಾರ್ಯನಿರ್ವಹಣಾ ಧಿಕಾರಿ ಮಹೇಶ ಅವರ ಮಾರ್ಗದರ್ಶನದಲ್ಲಿ ಭಕ್ತರಿಗೆ ಸಕಲ ಸೌಕರ್ಯ ಒದಗಿಸಲಾಗಿತ್ತು.

ಬೀಚ್‌, ಧಾರ್ಮಿಕ ಕೇಂದ್ರಗಳತ್ತ ಪ್ರವಾಸಿಗರು
ಉಡುಪಿ/ಪಣಂಬೂರು: ಮಲ್ಪೆ ಮತ್ತು ಪಣಂಬೂರು ಕಡಲ ತೀರ ಸಹಿತ ಉಭಯ ಜಿಲ್ಲೆಯ ಬೀಚ್‌ಗಳಲ್ಲಿ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಮಲ್ಪೆ ಬೀಚ್‌ ಇಡೀ ದಿನ ಚಟುವಟಿಕೆಯಿಂದ ಕೂಡಿತ್ತು. ಸ್ಥಳೀಯರು, ದೂರದ ಊರಿನ ಪ್ರವಾಸಿಗರು ಸಮುದ್ರದಲ್ಲಿ ಮೋಜಿನಾಟ ವಾಡುವ ಮೂಲಕ ವಾರಾಂತ್ಯವನ್ನು ಸಂಭ್ರಮಿಸಿದರು. ಸಂಜೆ ವೇಳೆ ಉಡುಪಿ ಮತ್ತು ಮಂಗಳೂರು ನಗರದಲ್ಲಿ ಜನದಟ್ಟಣೆ ಹೆಚ್ಚಿತ್ತು. ಶ್ರೀ ಕೃಷ್ಣಮಠ ಸಹಿತ ಜಿಲ್ಲೆಯ ವಿವಿಧ ಧಾರ್ಮಿಕ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೊರ ಜಿಲ್ಲೆಗಳಿಂದ ಆಗಮಿಸಿ ದೇವರ ದರ್ಶನ ಪಡೆದರು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶುಭ ಕಾರ್ಯಕ್ರಮಗಳು ನೆರವೇರಿದವು. ವಿವಾಹ, ಉಪನಯನ, ಗೃಹ ಪ್ರವೇಶ ಕಾರ್ಯಕ್ರಮಗಳು ಹೆಚ್ಚಿದ್ದವು.

ಹೆದ್ದಾರಿಯಲ್ಲಿಯೂ ವಾಹನಗಳ ಸಾಲು ಕಂಡುಬಂದಿತಾದರೂ ಟ್ರಾಫಿಕ್‌ ಜ್ಯಾಮ್‌ ಉಂಟಾಗಿ ಸಮಸ್ಯೆಯಾದ ವರದಿಯಾಗಿಲ್ಲ.

ಧರ್ಮಸ್ಥಳ: ಭಕ್ತರ ಹೆಚ್ಚಳ
ಬೆಳ್ತಂಗಡಿ: ಹಲವು ದಿನಗಳಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಕ್ಷೀಣಿಸಿದ್ದು, ಈಗ ಮತ್ತೆ ಆಲಯಗಳು ಕಳೆ ತುಂಬುತ್ತಿವೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶನಿವಾರ ಮತ್ತು ರವಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಸೌತಡ್ಕ ಕ್ಷೇತ್ರದಲ್ಲೂ ಶುಕ್ರವಾರ ಮೂಡಪ್ಪ ಸೇವೆ ನಡೆದು ನಾಡಿನೆಲ್ಲೆಡೆ ಗಮನ ಸೆಳೆದಿದ್ದರಿಂದ ವಾರಾಂತ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಕಂಡುಬಂತು.

ಧರ್ಮಸ್ಥಳದಲ್ಲಿ ಸೋಮವಾರವೂ ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ಇದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಶನಿವಾರ ಮತ್ತು ರವಿವಾರ ವಾಡಿಕೆಗಿಂತ ಹೆಚ್ಚು ಜನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರಲ್ಲದೆ, ವಿವಿಧ ಸೇವೆಗಳನ್ನು ಸಲ್ಲಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next