Advertisement

ಕಸ್ತೂರಿರಂಗನ್‌ ವರದಿ ತಿರಸ್ಕಾರ: ರಾಜಕೀಯ ಲೆಕ್ಕಾಚಾರ

01:04 AM Jan 06, 2021 | Team Udayavani |

ಕುಂದಾಪುರ: ಕಸ್ತೂರಿ ರಂಗನ್‌ ವರದಿಯ ಅನುಷ್ಠಾನದಿಂದ ಹಿಂದೆ ಸರಿದಿರುವ ರಾಜ್ಯ ಸರಕಾರದ ನಿರ್ಧಾರದಲ್ಲಿ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದು ಪರಿಸರ ಪರಿಣತರು ಅಭಿಪ್ರಾಯಪಡುತ್ತಿದ್ದಾರೆ. ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಸರಕಾರ ಮಾನ್ಯ ಮಾಡಲೇಬೇಕೆಂದೇನೂ ಇಲ್ಲ. ಅಂಗೀಕರಿಸಲೂಬಹುದು, ನಿರಾಕರಿಸಲೂಬಹುದು. ಆದ್ದರಿಂದ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂಬಂತಿ ದೆಯೇ ಈ ನಿರ್ಧಾರ ಎಂದು ಚರ್ಚೆ ಆರಂಭವಾಗಿದೆ.

Advertisement

ಪರೋಕ್ಷ ನ್ಯಾಯಾಂಗ ನಿಂದನೆ?
ಹಸುರು ಪೀಠದ ಆದೇಶದಂತೆ ಕಸ್ತೂರಿ ವರದಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರದ ಕಾರಣ ಈಗ ಸರಕಾರ ತಿರಸ್ಕರಿಸಿದರೆ ಅದು ನ್ಯಾಯಾಂಗ ನಿಂದನೆ ಆಗುವುದಿಲ್ಲ. ಆದರೆ ಹಸುರುಪೀಠ ಅನೇಕ ತೀರ್ಪುಗಳಲ್ಲಿ ವರದಿಯ ಶಿಫಾರಸುಗಳನ್ನು ಉಲ್ಲೇಖೀಸಿದ್ದು, ಆಗ ಪರೋಕ್ಷವಾಗಿ ಸರಕಾರ ನ್ಯಾಯಾಂಗ ನಿಂದನೆ ಮಾಡಿದಂತಾಗುತ್ತದೆ. ಯಾರಾದರೂ ಪ್ರತ್ಯೇಕ ಅರ್ಜಿಯ ಮೂಲಕ ಪೀಠದ ಗಮನಕ್ಕೆ ತಂದಲ್ಲಿ ಮಾತ್ರ ಇದು ಅನ್ವಯಿಸುತ್ತದೆ.

ಈಗಾಗಲೇ ಅನುಷ್ಠಾನ
ರಾಜ್ಯ ಸರಕಾರ ವರದಿಯನ್ನು ತಿರಸ್ಕರಿಸಿದ್ದರೂ ಕೇಂದ್ರ ಈಗಾಗಲೇ ಭಾಗಶಃ ಅನುಷ್ಠಾನಕ್ಕೆ ತಂದಾಗಿದೆ. 2013ರ
ನ. 13ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಉಪನಿರ್ದೇಶಕ ಡಾ| ಅಮಿತ್‌ ಲವ ಆದೇಶವೊಂದನ್ನು ಹೊರಡಿಸಿದ್ದು, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧಿತ ಮತ್ತು ಅನುಮತಿ ನೀಡಿದ ಚಟುವಟಿಕೆಗಳನ್ನು ಉಲ್ಲೇಖೀಸಿದ್ದಾರೆ. ಪಶ್ಚಿಮಘಟ್ಟ ಉಳಿಸುವ ಸಲುವಾಗಿಯೇ ಪಶ್ಚಿಮ ಘಟ್ಟ ಹಬ್ಬಿರುವ ಕೇರಳ ಹೊರತಾಗಿ 5 ರಾಜ್ಯಗಳಲ್ಲಿ ಈ ಕಾಯ್ದೆ ಈಗಾಗಲೇ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಆದ್ದರಿಂದ ಹೊಸದಾಗಿ ವರದಿ ತಿರಸ್ಕರಿಸಿ ಹುಲಿ ಹಿಡಿಯುವ ಸಾಹಸ ಇಲ್ಲ ಎಂಬ ಅಭಿಪ್ರಾಯವೂ ಇದೆ.

ಕೇರಳ ಮಾದರಿ
ಕೇರಳ ಸರಕಾರ ಈ ಹಿಂದೆಯೇ ಕಸ್ತೂರಿ ರಂಗನ್‌ ವರದಿಯನ್ನು ಭಾಗಶಃ ಅನುಷ್ಠಾನಿಸಲು ಒಪ್ಪಿದೆ. ಜನವಸತಿ ಪ್ರದೇಶಕ್ಕೆ ತೊಂದರೆಯಾಗದಂತೆ ಉಮ್ಮನ್‌ ವಿ. ಸಮಿತಿಯ ಶಿಫಾರಸಿನಂತೆ ಕೆಲವು ಮಾರ್ಪಾಟು ಮಾಡಿ ಕೇಂದ್ರಕ್ಕೆ ಕಳುಹಿಸಿತ್ತು. ಇದರಿಂದಾಗಿ ಅಲ್ಲಿ ಜನರಿಗೆ ಬೇಕಾದ ಮಾದರಿಯಲ್ಲಿ ಪರಿಸರಕ್ಕೂ ಹಾನಿಯಾಗದಂತೆ ಶಿಫಾರಸು ಜಾರಿಯಲ್ಲಿದೆ. ಕರ್ನಾಟಕ ಸರಕಾರ ಮಾತ್ರ ಇಂತಹ ಯಾವ ಪ್ರಯತ್ನಗಳನ್ನೂ ಮಾಡದೆ ಈಗ ತಿರಸ್ಕಾರ ಮಾಡುತ್ತಿರುವುದಾಗಿ ಹೇಳಿದೆ.

ರಾಜಕೀಯ ನಿರ್ಧಾರ
ಕಾಂಗ್ರೆಸ್‌ ಸರಕಾರ ಇದ್ದಾಗ ಬಿಜೆಪಿ ಕಸ್ತೂರಿ ರಂಗನ್‌ ವರದಿ ಅನುಷ್ಠಾನವನ್ನು ವಿರೋಧಿಸಿತ್ತು. ಈಗ ಕೇಂದ್ರವೇ ಒಪ್ಪಿಕೊಳ್ಳುತ್ತಿದ್ದರೂ ರಾಜ್ಯ ರಾಜಕೀಯವಾಗಿ ಅಸಹಾಯಕವಾಗಿದೆ. ತಾನು ತಿರಸ್ಕರಿಸಿದ್ದರೂ ಕೇಂದ್ರ ಪೂರ್ಣ ಪ್ರಮಾಣದ ಅನುಷ್ಠಾನ ಮಾಡಿದರೆ ರಾಜ್ಯ ಸರಕಾರಕ್ಕೆ ಮುಖಭಂಗವಾಗಲಿದೆ.

Advertisement

ತಪ್ಪು ಮಾಹಿತಿ
ರಾಜಕೀಯ ಕಾರಣಗಳಿಗೋಸ್ಕರ ಒಕ್ಕಲೆಬ್ಬಿಸಲಾಗುತ್ತದೆ, ಕೃಷಿಗೆ ಔಷಧ ಬಿಡುವಂತಿಲ್ಲ ಎಂಬಂತಹ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ. ಪಶ್ಚಿಮ ಘಟ್ಟದ ಉಳಿವಿಗೆ ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಕೇಂದ್ರ ಹಸುರುಪೀಠ ಅನೇಕ ಬಾರಿ ಸಮಯಾವಕಾಶ ನೀಡಿದ್ದು, ರಾಜ್ಯ ಹಿಂದೇಟು ಹಾಕಿದರೂ ಕೇಂದ್ರ ಅದನ್ನು ಮನ್ನಿಸಬೇಕೆಂದೇನೂ ಇಲ್ಲ. 6 ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾದ ಕಾರಣ ಒಂದು ರಾಜ್ಯದ ನಿರ್ಧಾರ ಅಮುಖ್ಯವಾಗುತ್ತದೆ.
– ವಿ.ವಿ. ಭಟ್‌ ನಿವೃತ್ತ ಐಎಎಸ್‌ ಅಧಿಕಾರಿ

ಅನುಷ್ಠಾನದಲ್ಲಿದೆ
ವರದಿಯ ಅನೇಕ ಅಂಶಗಳನ್ನು 2013ರಲ್ಲಿ ಕೇಂದ್ರ ಸರಕಾರ ಆದೇಶ ಮಾಡಿ ಆಗಿದೆ. ವರದಿಯಲ್ಲಿ ಉಲ್ಲೇಖೀತ ಅಂಶಗಳು ಪ್ರಾಯೋಗಿಕವಾಗಿ ಅನುಷ್ಠಾನದಲ್ಲಿವೆ. ಆದ್ದರಿಂದ ಈ ಹಂತದಲ್ಲಿ ತಿರಸ್ಕರಿಸಿದರೂ ಯಾವುದೇ ಪರಿಣಾಮ ಬೀರುವುದಿಲ್ಲ.
– ಪ್ರಿನ್ಸ್‌ ಐಸಾಕ್‌, ಬೆಂಗಳೂರು ಹಸುರುಪೀಠ ನ್ಯಾಯವಾದಿ

“ಉದಯವಾಣಿ’ ವರದಿ
ಕಸ್ತೂರಿ ರಂಗನ್‌ ವರದಿಯ ಬಗ್ಗೆ ಜನರಿಗೆ ಇರುವ ಸಂಶಯವನ್ನು ನಿವಾರಿಸಿ, ಜನವಿರೋಧಿ ಅಂಶಗಳನ್ನು ಕೈಬಿಡಿ ಎಂದು “ಉದಯವಾಣಿ’ 2014ರ ಜ. 21ರಂದು ಸರಣಿ ವರದಿ ಮಾಡಿತ್ತು. ಇದರ ಅನಂತರವೂ ಅನೇಕ ಬಾರಿ ಕಾಲಕಾಲಕ್ಕೆ ಜನರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ವರದಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next