ಬೆಂಗಳೂರು: ಪಶ್ಚಿಮಘಟ್ಟ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಜಾರಿಗೆ ಅಜ್ಞಾನ ಮತ್ತು ಸ್ವಾರ್ಥ ಅಡ್ಡಿಯಾಗಿದೆ ಎಂದು ಪರಿಸರ ವಿಜ್ಞಾನ ಬರಹಗಾರ ಹಾಗೂ ಪತ್ರಕರ್ತ ನಾಗೇಶ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಏರ್ಪಡಿಸಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬಳಿಕ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಧವ ಗಾಡ್ಗಿಳ್ ವರದಿ ಪಶ್ಚಿಮಘಟ್ಟದ ಭವಿಷ್ಯದ ದೃಷ್ಟಿಯಿಂದ ಸುರಕ್ಷಿತ ವರದಿ ಆಗಿತ್ತು. ಆದರೆ, ಕಸ್ತೂರಿರಂಗನ್ ವರದಿ ಸ್ವಲ್ಪ ಸಡಿಲ ಸ್ವರೂಪದ ವರದಿಯಾಗಿದೆ ಎಂದು ತಿಳಿಸಿದರು.
ಮಾಧವ ಗಾಡ್ಗಿಳ್ ವರದಿ ಬಗ್ಗೆ ಅನಾವಶ್ಯಕ ಗೊಂದಲಗಳನ್ನು ನಿರ್ಮಾಣ ಮಾಡಲಾಯಿತು. ಸ್ಥಳೀಯ ಭಾಷೆಯಲ್ಲಿ ವರದಿ ಬಗ್ಗೆ ಅಲ್ಲಿನ ಜನರಿಗೆ ಹೇಳಿಕೊಡಬೇಕು ಎಂದು ಗಾಡ್ಗಿಳ್ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಆ ಕೆಲಸ ಆಗಿಲ್ಲ. ಬಳಿಕ ಬಂದ ಕಸ್ತೂರಿ ರಂಗನ್ ವರದಿ ಬಗ್ಗೆಯೂ ಆತಂಕ-ಅನುಮಾನಗಳು ಹುಟ್ಟಿಕೊಂಡವು. ವರದಿಯನ್ನು ಓದಿಕೊಳ್ಳದೇ ಇರುವುದು ಇದಕ್ಕೆ ಪ್ರಮುಖ ಕಾರಣ.
ಒಟ್ಟಾರೆಯಾಗಿ ಅಜ್ಞಾನ ಮತ್ತು ಸ್ವಾರ್ಥದ ಕಾರಣದಿಂದಾಗಿ ವರದಿಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಭೂಮಿಗೆ 460 ಕೋಟಿ ವರ್ಷದ ಇತಿಹಾಸ ಇದೆ ಎಂದು ಅಂದಾಜಿಸಲಾಗಿದೆ. ಅದರಂತೆ ಒಂದು ಕೋಟಿ ವರ್ಷದ ಇತಿಹಾಸವನ್ನು ಒಂದು ಪುಟದಲ್ಲಿ ಬರೆದರೆ ಒಟ್ಟು 460 ಪುಟಗಳ ಪುಸ್ತಕ ಆಗಬಹುದು. ಈ 460 ಪುಟದ ಪುಸ್ತಕದಲ್ಲಿ ಮನುಷ್ಯ ಬರುವುದು ಕೊನೆಯ ಪುಟದ ಕೊನೆಯ ಪ್ಯಾರಾದಲ್ಲಿ.
ಆದರೆ, ಈ ಮನುಷ್ಯ ಪ್ರಕೃತಿ ಮತ್ತು ಪರಿಸರವನ್ನು ಗೆದ್ದಲು ಹುಳುವಿನಂತೆ ಹಾಳು ಮಾಡುತ್ತ ಬಂದಿದ್ದಾನೆ. ಪ್ರಕೃತಿ ವಿಕೋಪ ಹಾಗೂ ಪರಿಸರ ವೈಪರಿತ್ಯಗಳಿಗೆ ಮನುಷ್ಯನ ಸ್ವಾರ್ಥ ಹಾಗೂ ವೈಯುಕ್ತಿ ಭಾನಗಡಿಗಳು ಕಾರಣ. ಪರಿಸರದ ಬಗೆಗಿನ ಮನುಷ್ಯನ ದೃಷ್ಟಿಕೋನ ಬದಲಾಗಬೇಕು ಎಂದರು. ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಇದ್ದರು.
ಇಂದು (ಏ.22) ವಿಶ್ವ ಭೂಮಿ ದಿನ. ಪ್ರಪಂಚದ 135 ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಒಂದು ಕಡೆಯೂ ಈ ಸಂಬಂಧ ಕಾರ್ಯಕ್ರಮಗಳು ನಡೆಯದಿರುವುದು ನೋವಿನ ಸಂಗತಿ.
-ನಾಗೇಶ ಹೆಗಡೆ, ಪರಿಸರ ಬರಹಗಾರ