Advertisement

ಕಾಶ್ಮೀರಕ್ಕೆ ಒಂದಲ್ಲ 50 ಬಾರಿ ಭೇಟಿ ಕೊಡುವೆ: ರಾಜನಾಥ್‌

08:20 AM Sep 12, 2017 | Harsha Rao |

ಶ್ರೀನಗರ: “ಅಗತ್ಯಬಿದ್ದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದಲ್ಲ 50 ಬಾರಿ ಭೇಟಿ ನೀಡಲೂ ಸಿದ್ಧನಿದ್ದೇನೆ. ರಾಜ್ಯದಲ್ಲಿ ಸಹಾನುಭೂತಿ (ಕಂಪ್ಯಾಷನ್‌), ಸಂಪರ್ಕ (ಕಮ್ಯುನಿಕೇಷನ್‌), ಸಹಬಾಳ್ವೆ (ಕೊ-ಎಕ್ಸಿಸ್ಟೆನ್ಸ್‌) ಎಂಬ ಮೂರು “ಸಿ’ಗಳ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.’ ಹೀಗೆಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಜಮ್ಮು-ಕಾಶ್ಮೀರ ಭೇಟಿ ಯಲ್ಲಿರುವ ಅವರು ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ನಾಯಕರ ಜತೆಗೆ ಸರಣಿ ಸಭೆ ನಡೆಸಿದ ಬಳಿಕ ಸೋಮವಾರ ಮಾತನಾಡಿದರು. ಕಣಿವೆ ರಾಜ್ಯದಲ್ಲಿ ಶಾಂತಿಯ ಒಸರು ಇನ್ನೂ ಬತ್ತಿ ಹೋಗಿಲ್ಲ. ಹಿಂದಿನ ಪರಿಸ್ಥಿತಿಗಿಂತ ಹಾಲಿ ದಿನಮಾನಗಳಲ್ಲಿ ರಾಜ್ಯದ ಸ್ಥಿತಿ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಅಗತ್ಯ ಬಿದ್ದ ಎಲ್ಲರನ್ನೂ ಭೇಟಿಯಾಗುವೆ. ಅದಕ್ಕಾಗಿ 50 ಬಾರಿ ರಾಜ್ಯಕ್ಕೆ ಭೇಟಿ ನೀಡಲೂ ಸಿದ್ಧವೆಂದು ಹೇಳಿದ್ದಾರೆ ಕೇಂದ್ರ ಗೃಹ ಸಚಿವ.

ಕಣಿವೆ ರಾಜ್ಯದಲ್ಲಿ 18 ವರ್ಷಕ್ಕಿಂತ ಕೆಳಗಿನವರನ್ನು ಇತರ ಅಪರಾಧಿಗಳಂತೆ ಪರಿಗಣಿಸಬಾರದು. ಬಾಲಾಪರಾಧ ಕಾಯ್ದೆ ಯನ್ವವೇ ಅವರನ್ನು ಪರಿಗಣಿಸಬೇಕೆಂದರು. ಮಾತುಕತೆಗೆ ಯಾರಿಗೂ ಅಧಿಕೃತ ಆಹ್ವಾನ ನೀಡುವುದಿಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸ ಬೇಕೆಂದು ಪ್ರತಿಪಾದಿಸುವ ಸಂಘಟನೆ ಸರಕಾರದ ಜತೆ ಮಾತುಕತೆಗೆ ಬರಬಹುದು ಎಂದು ಆಹ್ವಾನ ನೀಡಿದ್ದಾರೆ ರಾಜನಾಥ್‌. 2014ರ ಬಳಿಕ ಪಾಕಿಸ್ತಾನದ ಜತೆ ಸೌಹಾರ್ದಯುತ ಸಂಬಂಧ ಬೆಳೆಸಲು ಕೇಂದ್ರ ಮುಂದಾಗಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಮತ್ತು ಪ್ರಧಾನಿ ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ಕೂಡ ಆ ದೇಶದ ಜತೆಗೆ ಉತ್ತಮ ಸಂಬಂಧ ಸ್ಥಾಪಿಸಲು ಕ್ರಮ ಕೈಗೊಂಡರೂ, ಅತ್ತಲಿಂದ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎಂದೂ ಹೇಳಿದ್ದಾರೆ. ಇದೇ ವೇಳೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 35ಎ ವಿಧಿಯ ವಿಚಾರದಲ್ಲಿ ಕಾಶ್ಮೀರಿಗರ ಭಾವನೆಗಳಿಗೆ ವಿರುದ್ಧವಾಗಿ ಹೋಗು ವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next