ಇಸ್ಲಾಮಾಬಾದ್ : ಇದೀಗ ಸನ್ನಿಹಿತವಾಗುತ್ತಿರುವ ಪಾಕ್ ಮಹಾ ಚುನಾವಣೆಯಲ್ಲಿ ಬಹುಮತದಿಂದ ಗೆದ್ದುಬರುವುದೆಂದು ತಿಳಿಯಲಾಗಿರುವ ಪಾಕಿಸ್ಥಾನ್ ತೆಹರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಭಾರತದೊಂದಿಗೆ ತನ್ನ ದೇಶ ಉತ್ತಮ ಬಾಂಧವ್ಯವನ್ನು ಹೊಂದಬೇಕೆಂಬ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತದೊಂದಿಗಿನ ಸಂಬಂಧ ಉತ್ತಮಗೊಂಡರೆ ಪಾಕಿಸ್ಥಾನದ ವಾಣಿಜ್ಯ, ವ್ಯಾಪಾರ, ವಹಿವಾಟು ಎಲ್ಲವೂ ಸುಗಮವಾಗಿ ದೇಶ ಉತ್ತಮ ಆರ್ಥಿಕಾಭಿವೃದ್ಧಿ ಸಾಧಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
“ಭಾರತದೊಂದಿಗೆ ನಾವು ಉತ್ತಮ ಸಂಬಂಧ ಹೊಂದಿದರೆ ನಮಗೆ ಭಾರೀ ದೊಡ್ಡ ಮಾರುಕಟ್ಟೆ ತೆರೆದುಕೊಳ್ಳುತ್ತದೆ; ವ್ಯಾಪಾರ ವಾಣಿಜ್ಯ ವಹಿವಾಟಿನ ಅವಕಾಶಗಳು ತೆರೆದುಕೊಳ್ಳುತ್ತವೆ. ಅದರಿಂದ ಇಡಿಯ ದೇಶಕ್ಕೆ ಲಾಭವಾಗುತ್ತದೆ’ ಎಂದು ಇಮ್ರಾನ್ ಖಾನ್ ಹೇಳಿದರು.
ಕಾಶ್ಮೀರ ವಿವಾದವನ್ನು ಉಲ್ಲೇಖೀಸಿ ಮಾತನಾಡಿದ ಇಮ್ರಾನ್ ಖಾನ್, ಈ ಬಿಕ್ಕಟ್ಟಿನ ಪರಿಣಾಮವಾಗಿ ಇಡಿಯ ಭಾರತೀಯ ಉಪಖಂಡ ಪಾಕಿಸ್ಥಾನದ ಕೈಯಲ್ಲಿ ಒತ್ತೆಸೆರೆಯಲ್ಲಿದೆ ಎಂದರಲ್ಲದೆ ಈ ಹಿಂದಿನ ಎಲ್ಲ ಪಾಕ್ ಸರಕಾರಗಳು ಭಾರತದೊಂದಿಗಿನ ಶಾಂತಿಯುತ ಸಂಬಂಧಗಳನ್ನು ಪುನರ್ ಸ್ಥಾಪಿಸಲು ಮಾಡಿದ ಯತ್ನಗಳನ್ನು ಪ್ರಶಂಸಿಸಿದರು.
ಪಾಕ್ ಆರ್ಥಿಕತೆ ಈಗ ದೀವಾಳಿಯಾಗುವ ಅಂಚಿನಲ್ಲಿದೆ; ಆದುದರಿಂದ ದೇಶದ ವಾಣಿಜ್ಯ, ವಹಿವಾಟಿಗೆ ಉತ್ತೇಜನ ನೀಡುವ ಪ್ರಯತ್ನಗಳನ್ನು ತತ್‌ಕ್ಷಣವೇ ಮಾಡಬೇಕಾಗಿದೆ ಎಂದು ಇಮ್ರಾನ್ ಖಾನ್ ಹೇಳಿದರು.