Advertisement

ನಗಿಸೋದು ಸುಲಭ ಅಳಿಸೋದು ಕಷ್ಟ : ಸವಾಲು ಗೆದ್ದ ಖುಷಿಯಲ್ಲಿ ಕಾಶೀನಾಥ್‌

04:50 AM Jul 14, 2017 | Karthik A |

‘ಜಾಸ್ತಿ ಮಾತಾಡೋದು ಕಷ್ಟ, ಕೆಮ್ಮು ಜಾಸ್ತಿಯಾಗಿದೆ …’ ಅಂತಲೇ ಮಾತಿಗೆ ಬಂದರು ಕಾಶೀನಾಥ್‌. ಅವರು ‘ಓಳ್‌ ಮುನ್ಸಾಮಿ’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದ ಅವರು, ಬೇಗ ಹೋಗುವ ಆತುರದಲ್ಲಿದ್ದರು. ಕಾರಣ ಡಾಕ್ಟರ್‌ ಬಳಿ ಹೋಗುವುದಿತ್ತಂತೆ, ಹೆಚ್ಚಿರುವ ಕೆಮ್ಮಿಗೆ ಚಿಕಿತ್ಸೆ ಪಡೆಯುವುದಿತ್ತಂತೆ. ಆ ಧಾವಂತದಲ್ಲಿದ್ದ ಅವರು, ‘ಚೌಕ’ ಚಿತ್ರದ ಯಶಸ್ಸಿನ ಜೊತೆಗೆ, ಇತ್ತೀಚೆಗೆ ಸಿಗುತ್ತಿರುವ ಹಲವು ಪಾತ್ರಗಳ ಬಗ್ಗೆ ಒಂದ್ಹತ್ತು ನಿಮಿಷ ಮಾತನಾಡಿ ಹೋದರು.

Advertisement

ಕಾಶೀನಾಥ್‌ ಇನ್ನೊಂದು ಚಿತ್ರದಲ್ಲಿ ಸದ್ದಿಲ್ಲದೆ ನಟಿಸಿದ್ದಾರೆ. ಅದೇ ‘ಓಳ್‌ ಮುನ್ಸಾಮಿ’. ಈ ಚಿತ್ರದಲ್ಲಿ ಅವರು ಸ್ವಾಮೀಜಿ ಪಾತ್ರ ಮಾಡಿದ್ದಾರಂತೆ. ಹಾಗೆ ನೋಡಿದರೆ, ಇತ್ತೀಚೆಗೆ ಅವರು ಒಂದೊಂದು ಚಿತ್ರದಲ್ಲಿ ಒಂದೊಂದು ವಿಭಿನ್ನ ಪಾತ್ರವನ್ನು ಮಾಡಿಕೊಂಡು ಬರುತ್ತಿದ್ದಾರೆ. ‘ಜೂಮ್‌’ನಲ್ಲಿ ವಿಜ್ಞಾನಿ, ‘ಚೌಕ’ದಲ್ಲಿ ತಂದೆಯ ಪಾತ್ರ, ‘ಓಳ್‌ ಮುನ್ಸಾಮಿ’ಯಲ್ಲಿ ಸ್ವಾಮೀಜಿ … ಇದಲ್ಲದೆ ಅವರು ಇನ್ನೇನನ್ನೋ ಹುಡುಕುತ್ತಿದ್ದಾರೆ.

‘ನಾನು ‘ಚೌಕ’ ಚಿತ್ರದಲ್ಲಿ ನಟಿಸಿದ ಮೇಲೆ, ಆ ತರಹದ ಪಾತ್ರ ಮಾಡುವುದಕ್ಕೆ ಬೇಜಾನ್‌ ಅವಕಾಶಗಳು ಬಂದವು. ನನಗೆ ಇಷ್ಟ ಆಗಲಿಲ್ಲ. ಸುಮ್ಮನೆ ತಂದೆ ಪಾತ್ರ ಮಾಡುವುದಕ್ಕೆ ಇಷ್ಟವಿಲ್ಲ. ನಾನು ಅದಕ್ಕೂ ಮುನ್ನ ತಂದೆ ಪಾತ್ರ ಮಾಡಿರಲಿಲ್ಲ. ಅದೊಂದು ಕಾರಣವಾದರೆ, ಯಾವುದೇ ಪಾತ್ರ ಮಾಡಿದರೂ, ಆ ಪಾತ್ರಕ್ಕೆ ತೂಕ ಇರಬೇಕು. ವಿಶ್ವನಾಥ್‌ ಪಾತ್ರದಲ್ಲಿ ತೂಕ ಇತ್ತು ಅನ್ನೋ ಕಾರಣಕ್ಕೆ ಒಪ್ಪಿಕೊಂಡಿದ್ದೆ. ‘ಜೂಮ್‌’ ಒಪ್ಪಿಕೊಂಡಿದ್ದು ಸಹ ಅದೇ ಕಾರಣಕ್ಕೆ. ನಾನು ಈ ಹಿಂದೆ ವಿಜ್ಞಾನಿ ಪಾತ್ರ ಮಾಡಿರಲಿಲ್ಲ. ಅದಕ್ಕೆ ಒಪ್ಪಿದ್ದೆ. ಆದರೆ, ಏನೇನೋ ಆಗೋಯ್ತು. ಆ ಚಿತ್ರದಲ್ಲಿ ದೊಡ್ಡ ಪಾತ್ರವಿತ್ತು. ಮೊದಲಾರ್ಧದಲ್ಲಿ ಸಾಕಷ್ಟು ವಿಷಯಗಳಿದ್ದವು. ಆಮೇಲೆ ಶೂಟ್‌ ಮಾಡ್ತೀನಿ ಅಂತ ನಿರ್ದೇಶಕರು ಹೇಳಿದ್ದರು. ಆದರೆ, ಕೊನೆಯಲ್ಲಿ ಎಲ್ಲಾ ಕಟ್‌ ಆಯ್ತು. ಅದೇನು ಲೆಂಥ್‌ ಜಾಸ್ತಿ ಅಂತ ಕೈಬಿಟ್ಟರೋ ಅಥವಾ ಇನ್ಯಾವ ಕಾರಣಕ್ಕೆ ಬಿಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ಕಟ್‌ ಆಯ್ತು. ನಿರ್ದೇಶಕರು ಸಿಕ್ಕಾಗ ಒಮ್ಮೆ ಬೈದೆ. ಆದರೂ ಅದೊಂದು ವಿಭಿನ್ನ ಪಾತ್ರ. ಪಾತ್ರ ವಿಭಿನ್ನವಾಗಿದ್ದರೆ, ಚಿತ್ರದುದ್ದಕ್ಕೂ ಬರುವುದಿದ್ದರೆ ಮಾಡೋಕೆ ಅಭ್ಯಂತರವಿಲ್ಲ’ ಎನ್ನುತ್ತಾರೆ ಕಾಶೀನಾಥ್‌.

‘ಚೌಕ’ ಚಿತ್ರದಲ್ಲಿ ವಿಶ್ವನಾಥ್‌ ಪಾತ್ರದ ಅವಕಾಶ ಸಿಕ್ಕಾಗ, ಆ ಪಾತ್ರ ತಮ್ಮಿಂದ ಸಾಧ್ಯವಾ ಎಂದು ಕಾಶೀನಾಥ್‌ ಅವರಿಗೆ ಅನಿಸಿತ್ತಂತೆ. ‘ಅಲ್ಲೀವರೆಗೂ ನಾನು ಹೆಚ್ಚಾಗಿ ಮಾಡಿದ್ದು ಕಾಮಿಡಿ ಪಾತ್ರಗಳೇ. ಇದು ಅದಕ್ಕೆ ತದ್ವಿರುದ್ಧವಾದೋದು. ಈ ಪಾತ್ರದಲ್ಲಿ ಅಳಿಸಬೇಕು. ನಗಿಸೋದಕ್ಕಿಂತ ಅಳಿಸೋದು ಕಷ್ಟ. ಅದೊಂಥರಾ ಸವಾಲು. ಅಲ್ಲಿ ಜನರಿಗೆ ಕಾಶೀನಾಥ್‌ ಕಾಣಬಾರದು, ವಿಶ್ವನಾಥ್‌ ಕಾಣಿಸಬೇಕು. ಹಾಗಾಗಿ ನನ್ನ ಮ್ಯಾನರಿಸಂ, ಔಟ್‌ಲುಕ್‌ ಎಲ್ಲವನ್ನೂ ಬದಲಾಯಿಸಬೇಕು. ಇದೆಲ್ಲಾ ಬದಲಾಯಿಸಿ, ಪ್ರೇಕ್ಷಕರ ಮನಸ್ಸಿಗೆ ಪ್ರಭಾವ ಬೀರುವುದು ಇನ್ನೂ ಕಷ್ಟ. ಕೊನೆಗೆ ಧೈರ್ಯ ಮಾಡಿ ಮಾಡಿದೆ. ನನ್ನ ಪಾತ್ರಕ್ಕೆ ಅಷ್ಟೊಂದು ಪ್ರತಿಕ್ರಿಯೆ ಸಿಗಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ಒಬ್ಬ ಹುಡುಗಿ ಬಂದು, ತಮ್ಮ ತಂದೆಯ ಹುಟ್ಟುಹಬ್ಬವನ್ನು ನನ್ನ ಜೊತೆಗೆ ಆಚರಿಸಬಹುದಾ ಎಂದು ಕೇಳಿದಳು. ಆಕೆಗೂ ತಾಯಿ ಇಲ್ಲವಂತೆ. ತಂದೆಯೇ ನೋಡಿಕೊಂಡರಂತೆ. ಚಿತ್ರದಲ್ಲಿ ನನ್ನ ಪಾತ್ರ ನೋಡಿ ಆಕೆಗೆ ಏನನಿಸಿತೋ, ಬಂದು ಐದು ನಿಮಿಷ ಟೈಮ್‌ ಕೊಡಿ ಎಂದಳು. ಇದೇ ತರಹ ಭಿನ್ನ ರೀತಿಯಲ್ಲಿ ನನ್ನ ಪಾತ್ರವನ್ನು ಎಲ್ಲರೂ ನೋಡ್ತಿದ್ದಾರೆ’ ಎನ್ನುತ್ತಾರೆ ಅವರು.

ಇನ್ನು ಹೊಸ ಹುಡುಗರು, ಕಥೆ ಮತ್ತು ಪಾತ್ರವನ್ನು ತರುವುದು ಹೆಚ್ಚಿದೆಯಂತೆ. ಅದರಲ್ಲಿ ಕೆಲವು ಚಿತ್ರಗಳಲ್ಲಿ ಅವರು ಈಗಾಗಲೇ ನಟಿಸಿದ್ದಾರೆ. ಹೊಸಬರಿಗೆ, ಕಾಶೀನಾಥ್‌ ಅವರ ಸಲಹೆ ಮತ್ತು ಸೂಚನೆಗಳು ಹೇಗಿರುತ್ತವೆ ಎಂದರೆ, ಸೂಚನೆ ಕೊಡೋದೇ ತಪ್ಪು ಎನ್ನುತ್ತಾರೆ ಅವರು. ‘ಬೇರೆಯವರ ಕೆಲಸದ ಬಗ್ಗೆ ಕಾಮೆಂಟ್‌ ಮಾಡೋದೇ ತಪ್ಪು. ಏಕೆಂದರೆ, ಅವರು ನನ್ನ ಬಳಿ ಬರುವಷ್ಟರಲ್ಲಿ ನೂರು ಬಾರಿ ಯೋಚನೆ ಮಾಡಿ ಬರೆದುಕೊಂಡು ಬಂದಿರುತ್ತಾರೆ. ಹಾಗಾಗಿ ಅದು ಸರಿ ಇಲ್ಲ, ಇನ್ನೇನೋ ಮಾಡಿ ಎನ್ನುವುದು ತಪ್ಪಾಗುತ್ತದೆ. ನಾನೇ ನಿರ್ದೇಶಕನಾದಾಗ ಯೋಚನೆ ಮಾಡುವುದಕ್ಕೂ, ಬೇರೆಯವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ. ಬೇರೆಯವರು ನನ್ನ ನಿರ್ದೇಶನ ಮಾಡುವಾಗ, ಅವರಿಗೆ ನಾನು ಹೊಂದಿಕೊಳ್ಳಬೇಕು’ ಎಂಬುದು ಕಾಶೀನಾಥ್‌ ಅವರ ಅಭಿಪ್ರಾಯ.

Advertisement

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next