Advertisement

ವಾರಾಣಸಿ ಪುರಪತಿಂ ಭಜ ವಿಶ್ವನಾಥಂ

12:06 AM Dec 14, 2021 | Team Udayavani |

ಕಾಶಿ ಕಾರಿಡಾರ್‌ ಯೋಜನೆಯ ಮೊದಲ ಹಂತದ ಕಾಮಗಾರಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವನಾಥ ಧಾಮ ಎನ್ನುವುದು ಕೇವಲ ಬೃಹತ್‌ ಕಟ್ಟಡವಲ್ಲ. ಅದು ನಮ್ಮ ದೇಶದ ಸನಾತನ ಸಂಸ್ಕೃತಿಯ, ಪ್ರಾಚೀನತೆ, ಪರಂಪರೆ, ಶಕ್ತಿ, ಆಧ್ಯಾತ್ಮಿಕ, ಕ್ರಿಯಾಶೀಲತೆಯ ಪ್ರತಿರೂಪ ಎಂದು ಹೇಳಿದ ಅವರು, ಇಚ್ಛಾಶಕ್ತಿಯೊಂದಿದ್ದರೆ ನಾವು ಏನನ್ನಾದರೂ ಸಾಧಿಸಬಹುದು ಎಂಬುದನ್ನು ಈ ಯೋಜನೆ ತೋರಿಸಿಕೊಟ್ಟಿದೆ ಎಂದರು. ಇನ್ಯಾವುದೇ ಬಾಹ್ಯ ಶಕ್ತಿಗಳು ನಮ್ಮ ಭಾರತವನ್ನು ಮುಟ್ಟಲಾಗದು ಎಂಬುದನ್ನು ಕಾಶಿಯ ಈ ನವೀಕರಣ ಯೋಜನೆ ಜಗತ್ತಿಗೆ ಸಾರಿದೆ. ಈ ದೇಶದಲ್ಲಿ ಮೊಘಲ್‌ ಸಾಮ್ರಾಜ್ಯದ ಔರಂಗಜೇಬ್‌ ಮೇಲೆದ್ದು ಬಂದರೆ, ಶಿವಾಜಿಯಂತಹ ಹೋರಾಟಗಾರ ಕೂಡ ಹುಟ್ಟಿಕೊಳ್ಳುತ್ತಾನೆ ಎಂದು ಸೂಚ್ಯವಾಗಿ ತಿಳಿಸಿದರು. ಮೋದಿ ಭಾಷಣದ ಆಯ್ದ ಭಾಗ ಇಲ್ಲಿದೆ.

Advertisement

ಕಾಶಿ ವಿಶ್ವನಾಥ, ಮಾತಾ ಅನ್ನಪೂರ್ಣ, ಈ ನಗರದ ಕಾವಲುಗಾರ ಕಾಲಭೈರವೇಶ್ವರನ ದರ್ಶನ ಮಾಡಿ ದೇಶವಾಸಿಗಳಿಗೆ ಆಶೀರ್ವಾದ ನೀಡುವಂತೆ ಬೇಡಿಕೊಂಡು ಇಲ್ಲಿಗೆ ಆಗಮಿಸಿದ್ದೇನೆ. ಗಂಗಾತರಂಗ ರಮಣೀಯ ಜಟಾ ಕಲಾಪಂ, ಗೌರೀ ನಿರಂತರ ವಿಭೂಷಿತ ವಾಮಭಾಗಂ, ನಾರಾಯಣಪ್ರಿಯಭೂಷಿತ ಮನಂಗಮದಾ ಪಹಾರಂ, ವಾರಾಣಸಿ ಪುರಪತಿಂ ಭಜ ವಿಶ್ವನಾಥಂ.

ಈ ಪವಿತ್ರ ಕ್ಷೇತ್ರದಿಂದ ದೇಶವಾಸಿಗಳೆಲ್ಲರಿಗೂ ಪ್ರಣಾಮಗಳನ್ನು ಸಲ್ಲಿಸಲು ಬಯಸುತ್ತೇನೆ. ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಯಾರೇ ಒಬ್ಬ ವ್ಯಕ್ತಿ ಕಾಶಿಗೆ ಪ್ರವೇಶ ಮಾಡುತ್ತಿರುವಂತೆಯೇ ಆತ ಎಲ್ಲ ಬಂಧನಗಳಿಂದ ಮುಕ್ತನಾಗುತ್ತಾನೆ. ಭಗವಾನ್‌ ವಿಶ್ವೇಶ್ವರನ ಆಶೀ ರ್ವಾದದಿಂದ ಈ ಪ್ರದೇಶಕ್ಕೆ ವಿಶೇಷ ಶಕ್ತಿ ಇದೆ ಮತ್ತು ಇದರಿಂದ ನಮ್ಮ ಅಂತರಾತ್ಮಕ್ಕೆ ವಿಶೇಷ ಅನುಭೂತಿ ಉಂಟಾಗುತ್ತದೆ. ಯಾವುದೇ ಪುಣ್ಯ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ನಾವು ಪವಿತ್ರವಾಗಿರುವ ತೀರ್ಥಗಳನ್ನು ಸಂಗ್ರಹಿಸುತ್ತೇವೆ. ಅದರಿಂದ ವಿಶೇಷವಾಗಿರುವ ಅನುಭೂತಿಯೂ ಉಂಟಾಗುತ್ತದೆ. ಈ ಪವಿತ್ರ ದಿನ ಅಂಥ ಅನುಭವ ನನಗೆ ಉಂಟಾಗಿದೆ.

ಈ ದಿನ ಸೋಮವಾರ. ಇದು ಭಗವಾನ್‌ ಶಿವನಿಗೆ ಪ್ರಿಯವಾಗಿ ರುವ ದಿನ. ಇದೊಂದು ಇತಿಹಾಸ ಸೃಷ್ಟಿಯಾದ ದಿನವಾಗಿದೆ. ಇಂಥ ಪವಿತ್ರ ಪೂರ್ಣವಾಗಿರುವ ದಿನಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎನ್ನುವುದು ಸತ್ಯ. ಈ ದಿನ ವಿಶ್ವನಾಥ ಧಾಮ ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ ಮತ್ತು ಎಲ್ಲರಿಗೂ ಕಾಣುವಂತೆ ಪುನರ್‌ ನಿರ್ಮಾಣ ಮಾಡಲಾಗಿದೆ. ದೇಗುಲದ ಪುನರ್‌ ನಿರ್ಮಾಣ ಕಾಮಗಾರಿ ವೇಳೆ ಪತ್ತೆಯಾಗಿದ್ದ ಹಳೆಯ ದೇಗುಲ ಗಳನ್ನೂ ಮತ್ತೆ ಕಟ್ಟಲಾಗಿದೆ. ಬಾಬಾ ವಿಶ್ವನಾಥ ನಮಗೆಲ್ಲರಿಗೂ ಈ ದಿನ ಆಶೀರ್ವಾದ ನೀಡಿದ್ದಾರೆ.

ನಮ್ಮ ಸಂಸ್ಕೃತಿಯ ಪ್ರತೀಕ: ವಿಶ್ವನಾಥ ಧಾಮ ಎನ್ನುವುದು ಕೇವಲ ಬೃಹತ್‌ ಕಟ್ಟಡವಲ್ಲ. ಅದು ನಮ್ಮ ದೇಶದ ಸನಾತನ ಸಂಸ್ಕೃತಿಯ, ಪ್ರಾಚೀನತೆ, ಪರಂಪರೆ, ಶಕ್ತಿ, ಆಧ್ಯಾತ್ಮಿಕತೆ, ಕ್ರಿಯಾಶೀಲತೆಯ ಪ್ರತಿರೂಪವೇ ಆಗಿದೆ. ಇಲ್ಲಿ ಪ್ರಾಚೀನತೆ ಮತ್ತು ಆಧುನಿಕ ಯುಗದ ಸಮ್ಮಿಳನ ಉಂಟಾಗಿದೆ ಎಂದರೆ ತಪ್ಪಾಗಲಾರದು. ನೀವು ಈ ದೇಗುಲಕ್ಕೆ ಬಂದರೆ ಕೇವಲ ದೇವರ ದರ್ಶನ ಪಡೆದಂತೆ ಆಗುವುದಿಲ್ಲ. ಅದರ ಬದಲಾಗಿ ವಿಶೇಷ ಅನುಭೂತಿಯನ್ನು ಹೊಂದುತ್ತೀರಿ.

Advertisement

ಗಂಗಾ ಮಾತೆ ಉತ್ತರ ವಾಹಿನಿ ರೂಪದಲ್ಲಿ ವಿಶ್ವನಾಥನ ಕಾಲಿಗೆ ಶರಣಾಗಲು ಕಾಶಿಗೆ ಆಗಮಿಸುತ್ತಾಳೆ. ಅತ್ಯಂತ ಶುಭದಿನ ವಾಗಿರುವ ಈ ದಿನ ಆ ಮಾತೆಯೂ ಖುಷಿಯಲ್ಲಿದ್ದಾಳೆ. ದೇಗುಲ ಭೇಟಿಗೆ ಮುನ್ನ ಗಂಗಾ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಉಂಟಾಗುವ ವಿಶೇಷ ಅನುಭವ ಆ ತಾಯಿಯೇ ನಮ್ಮನ್ನು ಆಶೀರ್ವದಿಸಿದಂತಾಗುತ್ತದೆ. ದೇಗುಲದ ಆವರಣದ ಪುನರ್‌ ನಿರ್ಮಾಣದ ಕಾರ್ಯ ಕೈಗೆತ್ತಿಕೊಳ್ಳುವುದಕ್ಕಿಂತ ಮೊದಲು ಕಾಶಿ ವಿಶ್ವನಾಥ ದೇಗುಲದ ಒಟ್ಟು ವ್ಯಾಪ್ತಿ 3 ಸಾವಿರ ಚದರ ಅಡಿ ಅತ್ತು. ಮೊದಲ ಹಂತದ ಕಾಮಗಾರಿ ಮುಕ್ತಾಯದ ಬಳಿಕ ದೇಗುಲಕ್ಕಾಗಿಯೇ ಮೀಸಲಾಗಿ ಇರುವ ಸ್ಥಳ 5 ಲಕ್ಷ ಚದರ ಅಡಿಗೆ ಏರಿಕೆಯಾಗಿದೆ. ಹೀಗಾಗಿ ವಯೋ ವೃದ್ಧರು, ದಿವ್ಯಾಂಗರು ಸೇರಿದಂತೆ 50 ಸಾವಿರದಿಂದ 75 ಸಾವಿರ ಭಕ್ತರು ಭೇಟಿ ನೀಡಲು ಸಾಧ್ಯವಾಗಲಿದೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ದೇಗುಲದ ಬಳಿಯವರೆಗೆ ಆಗಮಿಸಲು ಜೆಟ್ಟಿ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ಕಾಶಿ ವಿಶ್ವನಾಥ ಕಾರಿಡಾರ್‌ ಲೋಕಾರ್ಪಣೆ: ಹೂಮಳೆ.. ಹೂಮಳೆ.. ಹೂಗಳ ಸುರಿಮಳೆ!

ಜನರ ಮೂಲಕ ದೇವರ ದರ್ಶನ: ಜನರ ಮೂಲಕ ನಾನು ದೇವರನ್ನು ಕಾಣುತ್ತೇನೆ. ಜತೆಗೆ ಪ್ರತಿಯೊಬ್ಬ ವ್ಯಕ್ತಿಯೂ ದೇವರ ಭಾಗವೇ ಆಗಿದ್ದಾರೆ. ದೀರ್ಘ‌ ಕಾಲದಿಂದ ನಮ್ಮ ದೇಶ ಗುಲಾಮಗಿರಿ ಯಲ್ಲಿಯೇ ಇದ್ದ ಕಾರಣವೂ, ನಮ್ಮ ಆತ್ಮವಿಶ್ವಾಸದ ಮೇಲೆ ಕೂಡ ಋಣಾತ್ಮಕವಾಗಿಯೇ ಪರಿಣಾಮ ಬೀರಿತ್ತು. ಇದರಿಂದಾಗಿ ಏನನ್ನಾದರೂ ಸಾಧಿಸಬೇಕು ಎಂಬ ಹುಮ್ಮಸ್ಸಿಗೂ ಅದು ಪೆಟ್ಟುಕೊಟ್ಟಿತ್ತು ಎಂಬುದು ಸುಳ್ಳಲ್ಲ, ಈ ಒಂದು ಪುಣ್ಯ ಸುಸಂದರ್ಭದಲ್ಲಿ ದೇಶವಾಸಿಗಳು ಶುಚಿತ್ವ, ಸೃಷ್ಟಿ ಮತ್ತು ಆತ್ಮ ನಿರ್ಭರತೆ ಎಂಬ ನಿರ್ಣಯಗಳನ್ನು ಜಾರಿಗೆ ತರುವ ಬಗ್ಗೆ ದೃಢ ಸಂಕಲ್ಪ ಮಾಡಬೇಕು. ಇದರಿಂದಾಗಿ ಮುಂದಿನ ದಿನಗಳಲ್ಲಿ ದೇಶ ಸ್ವಾವಲಂಬಿಯಾಗುವತ್ತ ನಿಮ್ಮ ಕೊಡುಗೆಯೂ ಸೇರ್ಪಡೆಯಾಗ ಲಿದೆ. ಶುಚಿತ್ವ ಎನ್ನುವುದು ಜೀವನದ ಭಾಗವೇ ಆಗಬೇಕು. ವಿಶೇಷವಾಗಿ “ನಮಾಮಿ ಗಂಗೆ’ ಯೋಜನೆಯಲ್ಲಿ ಜನರು ಮುಕ್ತವಾಗಿ ಭಾಗಿಗಳಾಗಬೇಕು ಎನ್ನುವುದು ನನ್ನ ಆಶಯ. ಸಾವಿರಾರು ವರ್ಷಗಳ ಇತಿಹಾಸ ಇರುವ ಕಾಶಿಯ ಈ ವೇದಿಕೆ ಯಿಂದ ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಹೊಸರೀತಿಯ ಚಿಂತನೆ ನಡೆಸಿ, ಅದನ್ನು ಹೊಸ ರೀತಿಯಲ್ಲಿ ಅನುಷ್ಠಾನ ಮಾಡಬೇಕು.

ಶಾಶ್ವತವಾಗಲಿದೆ ಈ ಸೇವೆ ಭಗವಾನ್‌ ಶಂಕರನ ಕೃಪೆಯಿಂದಾಗಿ ಕಾಶಿ ಎನ್ನುವ ಪಾವನವಾಗಿರುವ ಈ ಕ್ಷೇತ್ರ ಶಾಶ್ವತವಾಗಿ ಉಳಿಯಲಿದೆ. ದೇಗುಲ ಪುನರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತಿ ಕೆಲಸಗಾರನೂ ನಿಸ್ಪೃಹೆಯಿಂದ ದುಡಿದಿದ್ದಾರೆ. ಕೊರೊನಾದ ನಡು ವೆಯೂ ಅವರೆಲ್ಲರೂ ಶ್ರಮ ವಹಿಸಿ ದುಡಿದಿರುವುದ ಶ್ಲಾಘನೀಯವೇ ಆಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ಈ ಯೋಜನೆ ಜಾರಿಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಅಸಾಧ್ಯವಾಗದೇ ಇರುವ ಅಂಶಗಳನ್ನು ಸಾಧಿಸಲು ಭಾರತೀಯರಿಗೆ ವಿಶೇಷ ಸಾಮರ್ಥ್ಯ ಇದೆ. ನಮ್ಮವರಿಗೆ ದೇಶದ ಬಗ್ಗೆ ಹಗಲು ಮತ್ತು ರಾತ್ರಿ ಯೋಚಿಸುವುದೇ ಒಂದು ತಪಸ್ಸು ಎಂದರೆ ತಪ್ಪಾಗ ಲಾರದು. ಹೀಗಾಗಿ ಯಾವುದೇ ರೀತಿಯ ಸವಾಲು ಇದ್ದರೂ ಎಲ್ಲರೂ ಒಗ್ಗಟ್ಟಾಗಿ ಅದನ್ನು ಎದುರಿಸುವ ಛಾತಿ ದೇಶವಾಸಿಗಳಿಗೆ ಇದೆ ಎಂದರು.

“ಔರಂಗಜೇಬ್‌ಗ ಪ್ರತಿಯಾಗಿ ಒಬ್ಬ ಶಿವಾಜಿ ಹುಟ್ಟುತ್ತಾನೆ’
ಇತಿಹಾಸದ ಅವಧಿಯಲ್ಲಿ ಹಲವಾರು ಮಂದಿ ದಾಳಿಕೋರರು ಪವಿತ್ರವಾಗಿರುವ ಈ ನಗರದ ಮೇಲೆ ದಾಳಿ ನಡೆಸಿ, ನಾಶ ಮಾಡಲು ಯತ್ನಿಸಿದ್ದರು. ಔರಂಗಜೇಬ್‌ ಯಾವ ರೀತಿ ದಾಳಿ ಮಾಡಿದ್ದ ಮತ್ತು ಇಲ್ಲಿನ ನಾಗರಿಕತೆಯನ್ನು ಯಾವ ರೀತಿ ಬದಲಾವಣೆ ಮಾಡಲು ಪ್ರಯತ್ನ ಮಾಡಿದ್ದ ಎಂಬ ಬಗ್ಗೆ ಇತಿಹಾಸದಲ್ಲಿ ದಾಖಲಾಗಿವೆ. ನಮ್ಮ ಸಂಸ್ಕೃತಿಯನ್ನು ಮತಾಂಧತೆಯ ಮೂಲಕ ಮೆಟ್ಟಿ ಹಾಕಲು ಪ್ರಯತ್ನ ಮಾಡಿದ್ದ. ಆದರೆ ಜಗತ್ತಿನ ಇತರ ಭಾಗದ ಮಣ್ಣಿಗೂ, ನಮ್ಮ ದೇಶಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ದೇಶದಲ್ಲಿ ಮೊಘಲ್‌ ಸಾಮ್ರಾಜ್ಯದ ಔರಂಗಜೇಬ್‌ ಮೇಲೆದ್ದು ಬಂದರೆ, ಹೋರಾಟಗಾರ ಶಿವಾಜಿ ಕೂಡ ಹುಟ್ಟಿಕೊಳ್ಳುತ್ತಾನೆ. ಸಾಲಾರ್‌ ಮಸೂದ್‌ ಮುಂದೊತ್ತಿ ಬಂದರೆ, ರಾಜ ಸುಖ್‌ದೇವ್‌ರಂಥ ವ್ಯಕ್ತಿಗಳು ಅವರನ್ನು ಮಟ್ಟ ಹಾಕಲು ಸಿದ್ಧರಾಗುತ್ತಾರೆ. ಇಂಥ ಪ್ರತಿರೋಧದ ಮೂಲಕ ನಮ್ಮ ಏಕತೆ ಮತ್ತು ಶಕ್ತಿಯನ್ನು ತೋರಿಸಿದಂತಾಗಿದೆ.

ಮಧ್ವಾಚಾರ್ಯರ ಸ್ಮರಿಸಿದ ಪ್ರಧಾನಿ
ದ್ವೈತಮತ ಸಿದ್ಧಾಂತ ಪ್ರತಿಪಾದಕ ಮಧ್ವಾಚಾರ್ಯರು ಕೂಡ ಕಾಶಿ ವಿಶ್ವನಾಥ ದೇಗುಲದ ವೈಭವ, ಮಹತ್ವದ ಬಗ್ಗೆಯೂ ತಮ್ಮ ಶಿಷ್ಯರಿಗೆ ಉತ್ತಮವಾಗಿ ವಿವರಿಸಿದ್ದಾರೆ. ಈ ಪವಿತ್ರ ಕ್ಷೇತ್ರದ ವಿಶ್ವನಾಥ ಪಾಪ ನಾಶಕ ಎಂದು ಆಚಾರ್ಯರು ತಮ್ಮ ಶಿಷ್ಯರಿಗೆ ಹೇಳಿದ್ದರು.

ಅನ್ನಪೂರ್ಣೆಯ ವಿಗ್ರಹ ಪುನರ್‌ಪ್ರತಿಷ್ಠಾಪನೆ
ಆಧುನಿಕ ಭಾರತವು ಕಳೆದು ಹೋಗಿರುವ ತನ್ನ ಪರಂಪರೆಯನ್ನು ಪುನಃಸ್ಥಾಪಿಸುವತ್ತ ಸಾಗಿದೆ. ಅದಕ್ಕೆ ನಿದರ್ಶನವೋ ಎಂಬಂತೆ ಕಾಶಿಯಿಂದ ಕಳವಾಗಿದ್ದ ಪವಿತ್ರ ಅನ್ನಪೂರ್ಣ ಮಾತೆಯ ವಿಗ್ರಹ ಶತಮಾನಗಳ ಬಳಿಕ ಮತ್ತೆ ನಮ್ಮ ಕೈಸೇರಿದೆ ಮತ್ತು ಕಾಶಿ ವಿಶ್ವನಾಥ ದೇಗುಲದ ಆವರಣದಲ್ಲಿ ಪುನರ್‌ ಪ್ರತಿಷ್ಠಾಪನೆ ಮಾಡಲಾಗಿದೆ. ಇದೊಂದು ನಿಜಕ್ಕೂ ಸಂತೋಷದಾಯಕವಾಗಿರುವ ವಿಚಾರ. ಕಾಶಿ ವಿಶ್ವನಾಥ ದೇಗುಲದ ಲೋಕಾರ್ಪಣೆಯ ಈ ಶುಭ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದಿರುವ ಸಾಧು ಸಂತರಿಗೆ ಆಭಾರಿಯಾಗಿದ್ದೇನೆ. ದೇಗುಲ ಲೋಕಾರ್ಪಣೆಗೊಳಿಸಿದ ಈ ಶುಭ ಸಂದರ್ಭದಲ್ಲಿ ಕಾಶಿ ಪಟ್ಟಣದ ಹಾಗೂ ದೇಶದ ನಾಗರಿಕರಿಗೆ ಮತ್ತೂಮ್ಮೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ.

ಕಾಮಗಾರಿ ಬಗ್ಗೆ ಶ್ಲಾಘನೆ
ಕಾಶಿ ವಿಶ್ವನಾಥ ಧಾಮವನ್ನು ಲೋಕಾರ್ಪಣೆ ಮಾಡಿದ ಬಳಿಕ ಈ ದೇಶಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಖಚಿತ ದಿಕ್ಸೂಚಿಯನ್ನು ನೀಡಲಿದೆ. ಈ ಧಾಮದ ನಿರ್ಮಾಣ ಕಾರ್ಯ ಎನ್ನುವುದೇ ನಮ್ಮ ಸಾಮರ್ಥ್ಯ ಮತ್ತು ಕರ್ತವ್ಯದ ಪ್ರತಿರೂಪ ಎಂದರೆ ತಪ್ಪಲ್ಲ. ಖಚಿತ ಗುರಿ ಮತ್ತು ಚಿಂತನೆ ಇದ್ದರೆ ಯಾವ ಕೆಲಸವನ್ನೂ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next