ಕಾಸರಗೋಡು: ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾಗಿರುವ ನಿಫಾ ವೈರಸ್ ಸೋಂಕಿನಿಂದ ಇಬ್ಬರು ಸಾವಿಗೀಡಾಗಿದ್ದು, ಆರೋಗ್ಯ ಕಾರ್ಯಕರ್ತರು ಸೇರಿದಂತೆ 5 ಮಂದಿಯಲ್ಲಿ ನಿಫಾ ವೈರಸ್ ಸೋಂಕು ದೃಢಗೊಂಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಆರೋಗ್ಯ ಇಲಾಖೆಯು ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ, ಜನರಲ್ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು ಅಲ್ಲದೆ ಇನ್ನಿತರ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಜಿಲ್ಲೆಯಲ್ಲಿ ನಿಫಾ ವೈರಸ್ ಹರಡದಂತೆ ಅಗತ್ಯದ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುವುದಾಗಿ ಆರೋಗ್ಯ ಇಲಾಖೆಯು ತಿಳಿಸಿದೆ. ಈ ಬಗ್ಗೆ ಆತಂಕ ಬೇಡವೆಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದರೂ ಗರಿಷ್ಠ ಜಾಗ್ರತೆ ಪಾಲಿಸುವಂತೆ ಸೂಚಿಸಿದೆ.
ಕೇರಳ – ಕರ್ನಾಟಕ ಗಡಿ ಪ್ರದೇಶದಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯು ಕೆಲವೊಂದು ನಿರ್ಬಂಧ ವಿಧಿಸಿದ್ದು, ಜಿಲ್ಲೆಯಾದ್ಯಂತ ಸೂಕ್ತ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ.
ನಿಫಾ ವೈರಸ್ ಪ್ರಕರಣದ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳ ಮೂಲಕ ಕರ್ನಾಟಕ ಪ್ರವೇಶಿಸುವ ವಾಹನಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಹಣ್ಣುಹಂಪಲು, ತರಕಾರಿ ಹಾಗೂ ಇನ್ನಿತರ ಆಹಾರ ಸಾಮಗ್ರಿ ಗಳನ್ನು ಹೇರಿಕೊಂಡು ತೆರಳುವ ವಾಹನಗಳನ್ನು ಪರಿಶೀಲಿಸಲು ಗಡಿಭಾಗಗಳಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.