Advertisement

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

03:42 PM Sep 15, 2024 | Team Udayavani |

ಕೇರಳ ರಾಜ್ಯದಲ್ಲಿಯೇ  ಅಧಿಕ ಸಂಖ್ಯೆಯಲ್ಲಿ ಶಾಸನಗಳು ಕಂಡುಬರುವ ಜಿಲ್ಲೆಯೆಂದರೆ ಅದು ಕಾಸರಗೋಡು. ಪ್ರಾಚೀನ ಕಾಲದಲ್ಲಿ ತುಳುನಾಡಿನ ನಾಡಿಮಿಡಿತವಾಗಿದ್ದ ಕಾಸರಗೋಡಿನಲ್ಲಿ ಪ್ರಸ್ತುತ ಕನಿಷ್ಠ 20 ಶಾಸನಗಳನ್ನು ನೋಡಬಹುದು.

Advertisement

ಅದರಲ್ಲೂ ಚಂದ್ರಗಿರಿ ನದಿಯ ಉತ್ತರದಲ್ಲಿ ಹೆಚ್ಚಿನ ಸಂಖ್ಯೆಯ ಶಾಸನಗಳು ಕಾಣಸಿಗುತ್ತವೆ. ಕಾಸರಗೋಡಿನ ಭಾಗದಲ್ಲಿ ಕಾಣಸಿಗುವ ಶಾಸನಗಳಲ್ಲಿ ಪ್ರತಿಶತ 90 ಕ್ಕೂ  ಹೆಚ್ಚಿನ ಶಾಸನಗಳು ದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ದಾನಶಾಸನವಾಗಿವೆ. ಇದರಲ್ಲಿ ಭೂದಾನಕ್ಕೆ ಸಂಬಂಧಿಸಿದ ಮಾಹಿತಿಗಳು ಹೆಚ್ಚಾಗಿ ಅಡಕವಾಗಿದೆ.

ಕಾಸರಗೋಡು ಭಾಗದಲ್ಲಿ ಮೂಲ ಚರಿತ್ರೆಗಳು ಪ್ರವಾಸಿಗರ ದಾಖಲೆಗಳಲ್ಲಿ ಲಿಖೀತವಾಗಿ ದಾಖಲಾಗಿದ್ದರೂ, ಅದಕ್ಕೆ ಇನ್ನಷ್ಟು ಪುಷ್ಟಿಯನ್ನು ಈ ಶಾಸನಗಳು ನೀಡುತ್ತವೆ ಎಂದರೆ ತಪ್ಪಿಲ್ಲ. ವಿದೇಶಿ ದಾಖಲೆಗಳಲ್ಲಿ ದಾಖಲಾಗದ ಮಾಹಿತಿಗಳು ಶಾಸನಗಳಲ್ಲಿ ದಾಖಲಾಗಿದ್ದು ಇವುಗಳ ವ್ಯಾಪ್ತಿಯನ್ನು ಹೆಚ್ಚಿಸಿದೆ. ವಿದೇಶಿ ಪ್ರವಾಸಿಗರು ಈ ನಾಡಿನ ದಾಖಲೆಗಳನ್ನು ಉಲ್ಲೇಖೀಸುವ ಮೊದಲೇ ಈ ಭಾಗದಲ್ಲಿ ಶಾಸನಗಳ ಪರಂಪರೆ ಶುರುವಾಗಿದ್ದುದರಿಂದ ಕಾಸರಗೋಡಿನ ವಿದೇಶಿ ದಾಖಲೆಗಿಂತಲೂ ಹಿಂದಿನ ಇತಿಹಾಸವನ್ನು ತಿಳಿಯಲು ಸಹಕಾರಿಯಾಗುತ್ತದೆ. ಇದು ಚರಿತ್ರೆಯನ್ನು ತಿಳಿಸುವ ಪ್ರಾಥಮಿಕ ಆಕರವೇ ಆಗಿದೆ.

ಉತ್ತರ ಕಾಸರಗೋಡಿನಲ್ಲಿ ಶಾಸನಗಳನ್ನು ಕೆತ್ತಿಸಿದ ಕೀರ್ತಿ ಮೊದಲಿಗೆ ಅಲುಪ ಅರಸರಿಗೆ ಸಲ್ಲುತ್ತದೆ. ಅಲುಪ ಅರಸರು ತುಳುನಾಡನ್ನು ಬಹುಕಾಲ ಆಳಿದ ದೊರೆಗಳಾಗಿದ್ದಾರೆ. ಇವರು 10ನೇ ಶತಮಾನದ ಕೊನೆಯಲ್ಲಿ ಈ ಭಾಗದಲ್ಲಿ ಶಾಸನಗಳನ್ನು ಹೊರಡಿಸಿದ್ದಾರೆ. ತಳಂಗರೆಯ ಜಯಸಿಂಹನ ಶಾಸನವು ಕಾಸರಗೋಡಿನ ಅತ್ಯಂತ ಪ್ರಾಚೀನ ಶಾಸನ. ಈ ಶಾಸನ ಕನ್ನಡ ಲಿಪಿಯಲ್ಲಿದೆ. ಜಯಸಿಂಹನ ಕುರಿತಾದ ಮಾಹಿತಿಯನ್ನು ಇದು ನೀಡುತ್ತದೆ.

ಇದಲ್ಲದೆ ಅಳುಪರಿಗೆ ಸಂಬಂಧಿಸಿದ ಇತರ ಶಾಸನಗಳೆಂದರೆ ಕಿದೂರು ಶಾಸನ, ಗೋಸಡ ಶಾಸನ, ಅನಂತಪುರ ಶಾಸನ, ಹೇರೂರು ಶಾಸನ,  ಕೊಡ್ಯಮ್ಮೆ ಶಾಸನ. ಈ ಶಾಸನಗಳೆಲ್ಲವೂ 12-13ನೇ ಶತಮಾನದ ಆಸುಪಾಸಿಗೆ ಸೇರಿದ್ದಾಗಿದೆ. ಕಾಸರಗೋಡಿನಲ್ಲಿ ಇಂದಿಗೆ ಕಾಣುವ ಪ್ರಮುಖ ಪ್ರಾಚೀನ ದೇವಾಲಯಗಳನ್ನು ಇವರ ಕಾಲದಲ್ಲಿ ನಿರ್ಮಿಸಲಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ.

Advertisement

ಕಾಸರಗೋಡಿನ ಉತ್ತರ ಭಾಗವನ್ನು ಅಲುಪ ಅರಸರು ಆಳುತ್ತಿದ್ದರೆ, ದಕ್ಷಿಣ ಭಾಗವನ್ನು ಚಂದ್ರಗಿರಿ ನದಿಯನ್ನು ಗಡಿಯನ್ನಾಗಿ ಮಾಡಿಕೊಂಡು ಪೆರುಮಾಳ್‌ ಅರಸರು ಆಳ್ವಿಕೆಯನ್ನು ನಡೆಸುತ್ತಿದ್ದರು. ಪೆರುಮಾಳ್‌ ರಾಜ ಎರಡನೇ ಭಾಸ್ಕರವರ್ಮನ ಕಾಲದಲ್ಲಿ ದಕ್ಷಿಣ ಭಾಗದಲ್ಲಿನ ದೇವಾಲಯಗಳು ಜೀರ್ಣೋದ್ಧಾರವಾದವು. ಈ ಬಗ್ಗೆ 11ನೇ ಶತಮಾನದ ಆದಿ ಭಾಗಕ್ಕೆ ಸೇರಿದ  “ಪುಲ್ಲೂರು ಕೊಡವಲಂ’ ಶಾಸನ ಮಾಹಿತಿ ನೀಡುತ್ತದೆ. ಹೀಗೆ 11ನೇ ಶತಮಾನದಿಂದ ಕೆಳದಿ ಅರಸರು ಬರುವ ತನಕ ದಕ್ಷಿಣ ಕಾಸರಗೋಡು ಭಾಗವು ಮಲಯಾಳಿ ಅರಸರ ಕೈಯಲ್ಲಿತ್ತು.

ಅಲುಪ ರಾಜವಂಶ ದುರ್ಬಲವಾದ ಬಳಿಕ ಉತ್ತರ ಕಾಸರಗೋಡಿನ ಭಾಗ ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಗೆ ಒಳಪಡುತ್ತದೆ. 14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಯಿತು. ಇದರ ಸಾಮ್ರಾಜ್ಯ ವಿಸ್ತರಣೆಯಾದ ಬಳಿಕ ದಕ್ಷಿಣದ ಮೇರೆ ಚಂದ್ರಗಿರಿ ಎಂಬುದಾಗಿ ತಿಳಿದುಬರುತ್ತದೆ. 14- 15ನೇ ಶತಮಾನಕ್ಕೆ ಸೇರಿದ ವಿಜಯನಗರ ಸಾಮ್ರಾಟರ ಹೆಸರುಗಳಿದ್ದ ಶಾಸನಗಳು ಈ ಭಾಗದಲ್ಲಿ ಪತ್ತೆಯಾಗಿವೆ.

ಅದರಲ್ಲೂ ಪ್ರಮುಖವಾಗಿ ವೀಂಜ ಗ್ರಾಮದ ಶಾಸನವು 1424-1446 ವಿಜಯನಗರ ಸಾಮ್ರಾಜ್ಯವನ್ನು ಆಳಿದ “ವೀರ ಪ್ರತಾಪ ದೇವರಾಯ’ನ ಉಲ್ಲೇಖವನ್ನು ಮಾಡುತ್ತದೆ. ಇದಲ್ಲದೆ ಮಂಗಲಪಾಡಿ ಶ್ರೀ ಸದಾಶಿವ ದೇವಾಲಯದ ಶಾಸನ, ಐಲ ದೇವಾಲಯದ ಶಾಸನ, ಮುಳಿಂಜ ಶ್ರೀ ಮಹಾಲಿಂಗೈಶ್ವರ ದೇವಾಲಯದ ಶಾಸನ, ಈ ಶಾಸನಗಳು ವಿಜಯನಗರ ಸಾಮ್ರಾಜ್ಯ ಮತ್ತು  ಗಡಿನಾಡಿಗೆ ಸಂಬಂಧ ಇತ್ತು ಎಂಬುದಾಗಿ ತಿಳಿಸಿಕೊಡುತ್ತವೆ.

ಅಲುಪರ ಸಾಮಂತರಾಗಿ ಉತ್ತರ ಕಾಸರಗೋಡನ್ನು ಆಳಿದವರೆಲ್ಲರೆಂದರೆ ತುಂಡರಸರಾದ ಕುಂಬಳೆ ಅರಸರು. ಇವರು ಕಣ್ವಪುರ ಅಥವಾ ಕಣಿಪುರವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ನಡೆಸಿದ್ದರು. ಇವರಿಗೆ ಸಂಬಂಧಿಸಿದ ಶಾಸನವನ್ನೂ ಅಡೂರು ದೇವಾಲಯದಲ್ಲಿ ಪತ್ತೆಹಚ್ಚಲಾಗಿದೆ.

ಕಾಸರಗೋಡು ಭಾಗವು 14 ರಿಂದ 16ನೇ ಶತಮಾನದ ಆರಂಭದವರೆಗೂ ವಿಜಯನಗರ ಸಾಮ್ರಾಜ್ಯದ ಅದೀನದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಯಾವಾಗ ದುರ್ಬಲವಾಯಿತೋ ಆಗ ಅಧಿಕಾರದ ಚುಕ್ಕಾಣಿ ಹಿಡಿದವರು ಕೆಳದಿಯ ಅರಸರು.  ಈವರೆಗೂ ಆಳ್ವಿಕೆ ನಡೆಸಿದ ಅರಸರ ಗಡಿಯಾಗಿದ್ದ ಚಂದ್ರಗಿರಿ ನದಿಯವರೆಗಿನ ಪ್ರದೇಶ, ಕೆಳದಿಯ ಅರಸರ ಕಾಲದಲ್ಲಿ ನೀಲೇಶ್ವರದವರೆಗೂ ವಿಸ್ತಾರವಾಯಿತು, ಎಂಬುದನ್ನು ತಿಳಿಯಬಹುದು.

ಕಾಸರಗೋಡು ಭಾಗದಲ್ಲಿ ಕೆಳದಿ ಅರಸರ ಕೊಡುಗೆ ಬಹಳಷ್ಟಿದೆ. ಅವರ ಕೊಡುಗೆಗಳು ಇಲ್ಲಿನ ಕೋಟೆ- ಕೊತ್ತಲಗಳು, ದೇವಾಲಯಗಳು, ವೀರಗಲ್ಲು ಮಾಸ್ತಿಗಲ್ಲು ಶಾಸನಗಳು, ಗಡಿಕಲ್ಲುಗಳಿಂದ ತಿಳಿಯಬಹುದಾಗಿದೆ. ಇಲ್ಲಿರುವ ಪ್ರಮುಖ ವೀರಗಲ್ಲು ಶಾಸನಗಳೆಂದರೆ ಕೂಡ್ಲು ಶ್ರೀ ಕುತ್ಯಾಳ ಗೋಪಾಲಕೃಷ್ಣ ದೇವಾಲಯದ ಎದುರಿಗಿರುವ  ಚೌಕಕಾರದ ವೀರಗಲ್ಲು ಮತ್ತು ದೇವಾಲಯದ ಒಳಗೆ ಶಾಸ್ತ ಗುಡಿಯ ಪಕ್ಕದಲ್ಲಿರುವ ವೀರಗಲ್ಲು, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಒಳಗಿರುವ ವೀರಗಲ್ಲು, ಅಂಬಾರು ಸದಾಶಿವ ದೇವಾಲಯದ ವೀರಗಲ್ಲು ಪ್ರಮುಖವಾಗಿದೆ.

ಇದಲ್ಲದೆ ಬೇಕಲ, ಚರ್ಕಳ ಮುಂತಾದ ಭಾಗದಲ್ಲಿನ ಮಾಸ್ತಿಗುಡ್ಡೆಗಳು ಕೆಳದಿ ಕಾಲದ ಪ್ರಮುಖ ಪ್ರದೇಶ. ಈ ಪ್ರದೇಶಗಳು ಕೋಟೆಗಳ ಸಮೀಪವೇ ಇದೆ. ಇದಲ್ಲದೆ ಗಡಿಗಲ್ಲುಗಳು ಕೆಳದಿ ಅರಸರ ಮಾಹಿತಿಯನ್ನು ನೀಡುತ್ತವೆ. ಕೆಳದಿ ಅರಸರ ಬಳಿಕ ಈ ಪ್ರದೇಶಗಳು ಹೈದರ್‌ ಮತ್ತು ಟಿಪ್ಪುವಿನ  ವಶವಾದವು. ಆತನ ಮರಣದ ಬಳಿಕ ಈ ಪ್ರದೇಶ ಬ್ರಿಟೀಷರ ವಶವಾಯಿತು.

ಹೀಗೆ ಕಾಸರಗೋಡು ಭಾಗದಲ್ಲಿನ ಶಾಸನಗಳನ್ನು ಅವಲೋಕನ ಮಾಡಿದಾಗ ಇಲ್ಲಿನ ರಾಜಕೀಯ, ಸಾಂಸ್ಕೃತಿಕ,  ಸಾಮಾಜಿಕ, ಧಾರ್ಮಿಕ ವಿಚಾರಗಳು ಮತ್ತು ರಾಜರ ಕೊಡುಗೆಗಳ ಜತೆಗೆ ಇತಿಹಾಸದ ಪುನರ್‌ ರಚನೆಗೆ,  ಕಾಲಾನುಕ್ರಮದ ಜೋಡಣೆಗೆ ಈ ಶಾಸನಗಳು ಸಹಕಾರಿಯಾಗುತ್ತವೆ. ಕನ್ನಡ ಮತ್ತು ತುಳು ಲಿಪಿಗಳ ವಿಕಾಸವನ್ನೂ ಈ ಶಾಸನಗಳಿಂದ ತಿಳಿಯಬಹುದಾಗಿದೆ. ಈ ಶಾಸನಗಳು ಪ್ರಮುಖ ಪುರಾತತ್ವ ದಾಖಲೆಗಳಾಗಿದ್ದು, ಇವುಗಳ ರಕ್ಷಣೆ ಅತ್ಯವಶ್ಯವಾಗಿದೆ.

-ಗಿರೀಶ್‌ ಪಿ.ಎಂ.

ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next