Advertisement

Crime News ಕಾಸರಗೋಡು ಅಪರಾಧ ಸುದ್ದಿಗಳು

10:50 PM Dec 09, 2023 | Team Udayavani |

ದುಬಾೖ ಬ್ಯಾಂಕಿಗೆ ವಂಚಿಸಿದ ಪ್ರಕರಣ: ತೃಕ್ಕರಿಪುರ ನಿವಾಸಿಯ ಸೊತ್ತು ಜಪ್ತಿ
ಕಾಸರಗೋಡು: ದುಬಾೖಯ ಬ್ಯಾಂಕ್‌ನಿಂದ 300 ಕೋಟಿ ರೂ. ಲಪಟಾಯಿಸಿದ ಆರೋಪದಂತೆ ಎನ್‌ಫೋರ್ಸ್‌ಮೆಂಟ್‌ ಡೈರೆಕ್ಟರ್‌(ಇ.ಡಿ) ತನಿಖೆ ತೀವ್ರಗೊಳಿಸಿದೆ. ಇದರಂಗವಾಗಿ ಆರೋಪಕ್ಕೆಡೆಯಾದ ವ್ಯಕ್ತಿಯ ಸೊತ್ತುಗಳನ್ನು ತನಿಖಾ ತಂಡ ಮುಟ್ಟುಗೋಲು ಹಾಕಿದೆ.

Advertisement

ತೃಕ್ಕರಿಪುರ ಉಡುಂಬುಂತಲ ನಿವಾಸಿಯೂ, ಸಿನೆಮಾ ನಿರ್ಮಾಪಕನಾದ ಅಬ್ದುಲ್‌ ರಹ್ಮಾನ್‌ ಹಾಗೂ ಆತನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿದ್ದ 3.58 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇದಲ್ಲದೆ ಇತರ ಸೊತ್ತುಗಳು, ಕಂಪೆನಿಗಳ ಶೇರ್‌ ಮೊದಲಾದವುಗಳನ್ನು ಮುಟ್ಟುಗೊಲು ಹಾಕಲಾಗಿದೆ. ಅಬ್ದುಲ್‌ ರಹ್ಮಾನ್‌ನ ಹೆಕ್ಸ್‌ ಆಯಿಲ್‌ ಆ್ಯಂಡ್‌ ಗ್ಯಾಸ್‌ ಸರ್ವೀಸಸ್‌ ಎಂಬ ಕಂಪೆನಿಯ ಅಭಿವೃದ್ಧಿಗಾಗಿ ಶಾರ್ಜಾದ ವಿವಿಧ ಬ್ಯಾಂಕ್‌ಗಳಿಂದಾಗಿ ಸುಮಾರು 340 ಕೋಟಿ ರೂ. ಸಾಲ ಪಡೆದಿರುವುದಾಗಿ ಇ.ಡಿ. ನಡೆಸಿದ ತನಿಖೆಯಿಂದ ತಿಳಿದು ಬಂದಿದೆ. ಈ ಪೈಕಿ ಬಹುಪಾಲು ಮೊತ್ತವನ್ನು ಮರಳಿಸದೆ ವಂಚಿಸಲಾಗಿದೆಯೆಂದು ದೂರಲಾಗಿದೆ. ಬ್ಯಾಂಕ್‌ಗಳು ನೀಡಿದ ದೂರಿನಂತೆ ಚಂದೇರ ಪೊಲೀಸರು ದಾಖಲಿಸಿದ ಪ್ರಕರಣದ ಆಧಾರದಲ್ಲಿ ಇ.ಡಿ. ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದರಂತೆ ತೃಕ್ಕರಿಪುರ, ಕಲ್ಲಿಕೋಟೆ, ಕೊಚ್ಚಿಯಲ್ಲಿರುವ ಅಬ್ದುಲ್‌ ರಹ್ಮಾನ್‌ ಹಾಗೂ ಪತ್ನಿಯ ಮನೆ ಮತ್ತು ಸಂಸ್ಥೆಗಳಿಗೆ ದಾಳಿ ನಡೆಸಿದೆ.

ಲಾರಿಯಡಿಗೆ ಸಿಲುಕಿ ಚಾಲಕನ ಸಾವು
ಬದಿಯಡ್ಕ: ನಿಯಂತ್ರಣ ತಪ್ಪಿದ ಟಿಪ್ಪರ್‌ ಲಾರಿಯಿಂದ ಹಾರಿ ಅಪಾಯದಿಂದ ಪಾರಾಗಲು ಯತ್ನಿಸಿದ ಚಾಲಕ ಅದೇ ಲಾರಿಯಡಿಗೆ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ. ಇದೇ ವೇಳೆ ಪೊಲೀಸರು ಹಿಂಬಾಲಿಸಿರುವುದೇ ಲಾರಿ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

ಚೆರ್ಲಡ್ಕ ಎದುರ್ತೋಡಿನ ಅಸ್ಮಿಯ ಮಂಜಿಲ್‌ನ ಅಬ್ದುಲ್‌ ರಹ್ಮಾನ್‌ ಅವರ ಪುತ್ರ ನೌಫಲ್‌ (24) ಸಾವಿಗೀಡಾದ ಚಾಲಕ. ಶನಿವಾರ ಮುಂಜಾನೆ ಗೋಳಿಯಡ್ಕದಲ್ಲಿ ಅಪಘಾತ ಸಂಭವಿಸಿದೆ. ಮರಳು ಹೇರಿದ ಟಿಪ್ಪರ್‌ ಲಾರಿ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿರುವುದಾಗಿ ಶಂಕಿಸಲಾಗಿದೆ. ರಸ್ತೆ ಬದಿಯಲ್ಲಿದ್ದ ಮಣ್ಣಿನ ದಿಬ್ಬಕ್ಕೆ ಢಿಕ್ಕಿ ಹೊಡೆಯುವ ಮೊದಲು ಲಾರಿಯಿಂದ ಹೊರಕ್ಕೆ ಎಸೆಯಲ್ಪಟ್ಟಿರುವುದಾಗಿ ಶಂಕಿಸಲಾಗಿದೆ. ಗಂಭೀರ ಗಾಯಗೊಂಡ ನೌಫಲ್‌ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಇದೇ ವೇಳೆ ಟಿಪ್ಪರ್‌ ಲಾರಿಯನ್ನು ಎಸ್‌.ಐ. ಹಾಗೂ ಪೊಲೀಸರು ಹಿಂಬಾಲಿಸಿದುದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಆರೋಪಕ್ಕೆಡೆಯಾದ ಎಸ್‌.ಐ. ಹಾಗೂ ಪೊಲೀಸರು ಅಪಘಾತ ಸಂಭವಿಸಿದ ಸಮಯದಲ್ಲಿ ಕುಂಬಳೆ ಭಾಗದಲ್ಲಿದ್ದರೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ತಾಳ್ತಾಜೆ ನಿವಾಸಿಯ ನಿಗೂಢ ಸಾವು
ಆಂತರಿಕ ಅವಯವಗಳು ರಾಸಾಯನಿಕ ತಪಾಸಣೆಗೆ
ಉಪ್ಪಳ: ಮುಳಿಗದ್ದೆ ತಾಳ್ತಾಜೆ ಕೊರಗ ಕಾಲನಿಯ ಮತ್ತಡಿ ಅವರ ಪುತ್ರ ಗೋಪಾಲ (28) ಅವರ ನಿಗೂಢ ಸಾವಿನ ಕುರಿತು ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೃತದೇಹದಿಂದ ಸಂಗ್ರಹಿಸಿದ ರಕ್ತ ಹಾಗೂ ಆಂತರಿಕ ಅವಯವಗಳನ್ನು ರಾಸಾಯನಿಕ ತಪಾಸಣೆಗೆ ಕಳುಹಿಸಿಕೊಡಲಾಗುವುದು. ಅವುಗಳ ತಪಾಸಣೆಯಲ್ಲಿ ಮಾತ್ರವೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಡಿ. 5ರಂದು ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ಗೋಪಾಲ ಅವರ ಮೃತದೇಹ ಡಿ. 6ರಂದು ರಾತ್ರಿ ಪೆರುವೋಡಿ ಕುಡಾನದ ಕಾಡು ಪೊದೆಯಲ್ಲಿ ಪತ್ತೆಯಾಗಿತ್ತು. ಮೃತದೇಹ ಪತ್ತೆಯಾದ ಕೆಲವೇ ದೂರದಲ್ಲಿ ಅವರ ಮೊಬೈಲ್‌ ಫೋನ್‌ ಹಾಗು ಪರ್ಸ್‌ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next