ಬೆಂಗಳೂರು: ಕೆಎಎಸ್ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನೀಡಿರುವ ತೀರ್ಪಿನಲ್ಲಿ ಕೆಲವೊಂದು ಸ್ಪಷ್ಟನೆಗಳನ್ನು ಕೋರಿ ಕರ್ನಾಟಕ ಲೋಕಸೇವಾ ಆಯೋಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2016ರ ಜೂ.21ರಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನೀಡಿರುವ ಆದೇಶವನ್ನು ಪಾಲನೆ ಮಾಡಲಾಗಿಲ್ಲ ಎಂದು ಆರೋಪಿಸಿ ಎಸ್. ಶ್ರೀನಿವಾಸ ಹಾಗೂ ಇತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ.ರವಿ ಮಳಿಮಠ ಹಾಗೂ ನ್ಯಾ. ಎಚ್.ಪಿ.ಸಂದೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಮಂಗಳವಾರ ಕೆಪಿಎಸ್‌ಸಿ ಪರ ವಕೀಲರು ಈ ಸ್ಪಷ್ಟನೆ ಕೋರಿದರು.
ವಿಚಾರಣೆ ವೇಳೆ ಕೆಪಿಎಸ್‌ಸಿ ಪರ ವಕೀಲರು, 1998, 1999 ಹಾಗೂ 2004ನೇ ಸಾಲಿನ ಕೆಎಎಸ್ ಅಕ್ರಮ ನೇಮಕ ಪ್ರಕರಣ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ 2016ರ ಜೂ.21ರಂದು ನೀಡಿರುವ ತೀರ್ಪಿನ 2 ಹಾಗೂ 3ನೇ ಅಂಶಗಳ ಜಾರಿಗೆ ಒಂದಿಷ್ಟು ತೊಡಕು ಆಗುತ್ತಿದೆ.
ಮೂರನೇ ಅಂಶ ಜಾರಿಗೊಳಿಸಿದರೆ ಎರಡನೇ ಅಂಶದ ಪ್ರಕಾರ ಪರಿಷ್ಕರಿಸುವ ಆಯ್ಕೆ ಪಟ್ಟಿಯ ಮರು ಪರಿಷ್ಕರಣೆ ಮಾಡಬೇಕಾಗುತ್ತದೆ. ಎರಡನೇ ಅಂಶ ಜಾರಿಗೊಳಿಸಿದರೆ ಮೂರನೇ ಅಂಶವನ್ನು ಜಾರಿಗೊಳಿಸಲು ಕಷ್ಟವಾಗಲಿದೆ. ಆದ್ದರಿಂದ ಸ್ಪಷ್ಟನೆ ಕೋರಿ ಆಯೋಗ ಅರ್ಜಿ ಸಲ್ಲಿಸಿದ್ದು, ಅದು ಇನ್ನೂ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ ಎಂದು ತಿಳಿಸಿದರು.
ಹೀಗಾಗಿ, ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಾಲ್ಕು ವಾರ ಮಂದೂಡಿತು. ಇದಕ್ಕೂ ಮೊದಲು ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್, ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವರಿಗೆ ಆಯಾ ಇಲಾಖೆಗಳಿಂದ ನೇಮಕಾತಿ ಆದೇಶಗಳನ್ನು ಹೊರಡಿಸಿ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.