ಕಾರವಾರ: ಭ್ರಷ್ಟಾಚಾರ ದೇಶದೊಳಗಿನ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮೂಲಕ ರಾಷ್ಟ್ರದ ಪ್ರಗತಿಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಾಣ್ಣ ಬಿ.ಎಲ್. ಹೇಳಿದರು.
ಅವರು ರವಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮತ್ತು ಕರ್ನಾಟಕ ಲೋಕಾಯುಕ್ತ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ -2023” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಕೆಲಸಗಳಿಗೆ ಪ್ರತಿಫಲ ಬಯಸದೇ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು, ಸಾರ್ವಜನಿಕರ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ದೇಶದ ಪ್ರಗತಿಗೆ ಪಣತೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.