Advertisement

ವ್ಯಕ್ತಿಯಲ್ಲ, ಪಕ್ಷ ನಿಷ್ಠೆ ಮುಖ್ಯ: ಭೀಮಪ್ಪ 

04:48 PM May 02, 2018 | |

ಹರಪನಹಳ್ಳಿ: ಕಳೆದ ಮೂರು ದಶಕಗಳಿಂದ ಕಮ್ಯುನಿಸ್ಟ್‌ ಹೋರಾಟ ನಡೆಸುತ್ತಾ ಬಂದಿದ್ದ, ಕೆಪಿಸಿಸಿ ಸದಸ್ಯರಾಗಿದ್ದ ಕೋಡಿಹಳ್ಳಿ ಭೀಮಪ್ಪ ಈಚೆಗೆ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಮಂಗಳವಾರ ಮಾಜಿ ಸಚಿವ
ಜಿ.ಕರುಣಾಕರರ ರೆಡ್ಡಿ ಅವರು ಕೋಡಿಹಳ್ಳಿ ಭೀಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿರುವುದು ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

Advertisement

ಕಳೆದ ಒಂದು ದಶಕ ಕಾಲ ಕ್ಷೇತ್ರದಲ್ಲಿ ಎಂ.ಪಿ. ರವೀಂದ್ರ ಅವರ ಜೊತೆಗೂಡಿ ಕರುಣಾಕರ ರೆಡ್ಡಿ ವಿರುದ್ಧ ಸಂಘಟನೆ ಮಾಡಿದ್ದ ಕೋಡಿಹಳ್ಳಿ ಭೀಮಪ್ಪ ಅವರ ನಿವಾಸಕ್ಕೆ ಕರುಣಾಕರ ರೆಡ್ಡಿ ಭೇಟಿ ನೀಡಿರುವುದು ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷದ ಕಾರ್ಯಕರ್ತರ ಕುತೂಹಲಕ್ಕೆ ಕಾರಣವಾಗಿದೆ.

ಇದಕ್ಕೂ ಮೊದಲು ಪಟ್ಟಣದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಭೀಮಪ್ಪ ಅವರು, ಕ್ಷೇತ್ರದಲ್ಲಿ ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ನಿಷ್ಠೆ ಹೊಂದಿದ್ದೇನೆ. ಹಾಗಾಗಿ ನಾನು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ನಾನು ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಪಕ್ಷ ಸಂಘಟನೆ ಮಾಡಿದ್ದ ನನ್ನನ್ನು ನಿರ್ಲಕ್ಷ್ಯ ಮಾಡಿದರು. ಗಣಿ ಲೂಟಿಕೊರರ ವಿರುದ್ಧ ಹೋರಾಟ ಮಾಡಿದ ಕಾಂಗ್ರೆಸ್‌ ಪಕ್ಷದ ಮುಖಂಡರು ಆನಂದಸಿಂಗ್‌, ನಾಗೇಂದ್ರರನ್ನು ಪಕ್ಷಕ್ಕೆ ಸೇರಿಸಿಕೊಂಡು ನೈತಿಕತೆ ಕಳೆದುಕೊಂಡರು. ಹಾಗಾಗಿ ಕಾಂಗ್ರೆಸ್‌ ತೊರೆದು ಸಂಸದ ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ತಿಳಿಸಿದರು.

ಸಚಿವ ಸಂತೋಷ ಲಾಡ್‌, ಅನಿಲ್‌ ಲಾಡ್‌ ಅವರು ಕೂಡ ಅಕ್ರಮ ಗಣಿಗಾರಿಕೆ ಪಾಲುದಾರರು. ಅಂತಹವರ ಜೊತೆಗೆ ಪಕ್ಷದಲ್ಲಿರಲು ಮುಜುಗರಗೊಂಡು ಪಕ್ಷ ತೊರೆಯಬೇಕಾಯಿತು. ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೂ ಯಾರೂ ಸಂಪರ್ಕಿಸದೇ ಸಂಘಟನೆ ಹಿನ್ನೆಲೆಯ ನನ್ನಂತಹ ಹೋರಾಟಗಾರನನ್ನು ಕಾಂಗ್ರೆಸ್‌ ಪಕ್ಷ ಕಳೆದುಕೊಂಡಿದೆ. ಶ್ರೀರಾಮುಲು ಸ್ಥಾನಮಾನ, ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಹರಪನಹಳ್ಳಿ ಕ್ಷೇತ್ರದಲ್ಲಿ ನನ್ನ ಬೆಂಬಗಲಿಗರು ಸಹ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.

ಕೂಡ್ಲಿಗಿ, ಬಾದಾಮಿ, ಮೊಳಕಾಲ್ಮೂರು, ಹಗರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದೇನೆ. ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಲೂಕಿನ 7 ಗ್ರಾಪಂ ವ್ಯಾಪ್ತಿಯ ಉಸ್ತುವಾರಿ ನನಗೆ ಕೊಟ್ಟಿದ್ದು, ಅಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ. ಕ್ಷೇತ್ರದಲ್ಲಿ ಹಿಂದೆ ಕಾಂಗ್ರೆಸ್‌ನದಲ್ಲಿದಾಗ ಬಹಳ ಜನರು ಸಹಾಯ ಮಾಡಿದ್ದಾರೆ, ಅವರ ಪ್ರೀತಿಗೆ ಅಭಾರಿಯಾಗಿದ್ದೇನೆ. ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಅಧಿಕೃತವಾಗಿ ಆಹ್ವಾನಿಸಿದರೆ ಪ್ರಚಾರಕ್ಕೆ ತೆರಳುವುದಾಗಿ ತಿಳಿಸಿದರು. 

Advertisement

ಕೋಡಿಹಳ್ಳಿ ಭೀಮಪ್ಪ ಅವರ ನಿವಾಸಕ್ಕೆ ಮಾಜಿ ಸಚಿವ ಜಿ. ಕರುಣಾಕರರರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಮುಖಂಡರಾದ ಎಂ.ಪಿ. ನಾಯ್ಕ, ಸಣ್ಣಹಾಲಪ್ಪ, ಲೋಕೇಶ್‌, ಅಲ್ಮರಸೀಕೆರೆ ರಾಜಪ್ಪ, ಕಣವಿಹಳ್ಳಿ ಚಂದ್ರಶೇಖರ್‌, ಇಮ್ರಾನ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next