Advertisement

ಕರೋಪಾಡಿ ಗ್ರಾ.ಪಂ. ಉಪಚುನಾವಣೆ: ಶೇ. 81.51 ಮತದಾನ

03:30 AM Jul 03, 2017 | Team Udayavani |

ವಿಟ್ಲ: ಕರೋಪಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಎ. ಅಬ್ದುಲ್‌ ಜಲೀಲ್‌ ಕರೋಪಾಡಿ ಅವರ ಹತ್ಯೆಯಿಂದ ತೆರವಾದ ಸ್ಥಾನಕ್ಕೆ ರವಿವಾರ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಮರುಚುನಾವಣೆ ನಡೆಯಿತು.  970 ಮತದಾರರಲ್ಲಿ 798 ಮಂದಿ ಮತದಾನ ಮಾಡಿದ್ದು ಶೇ.81.51 ಮತದಾನ ದಾಖಲಾಗಿದೆ. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಜಲೀಲ್‌ ಅವರ ಸಹೋದರ ಮಹಮ್ಮದ್‌ ಅನ್ವರ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್‌ ಕೋಡ್ಲ ಅವರು ಕಣದಲ್ಲಿದ್ದು, ಉಪಚುನಾವಣೆ ಕುತೂಹಲ ಕೆರಳಿಸಿದೆ.

Advertisement

ಜಲೀಲ್‌ ಅವರು ಸ್ಪರ್ಧಿಸಿದ್ದ ಕರೋಪಾಡಿ ಗ್ರಾಮದ 4ನೇ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಜು. 2ರಂದು ನಿಗದಿಪಡಿಸಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಾತಂಕವಾಗಿ ಮತದಾನ ನಡೆಯಿತು. ಬಿರುಸಿನಿಂದ ಮತದಾನ ನಡೆದಿದ್ದು, ಹಲವು ಮಂದಿ ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಚುನಾವಣಾ ಕೇಂದ್ರ ಸುತ್ತಮುತ್ತಲಿನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಎರಡೂ ಪಕ್ಷಗಳಿಗೆ ಈ ಉಪಚುನಾವಣೆ ಮಹತ್ವದ್ದಾಗಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆ ಎರಡು ವಾಹನ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ, 150ಕ್ಕಿಂತಲೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕರೋಪಾಡಿ ಗ್ರಾಮ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ ಅನೆಯಾಲಗುತ್ತು ಅವರು ಪತ್ರಕರ್ತರ ಜತೆ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಹರೀಶ್‌ ಕೋಡ್ಲ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಗೆಲುವಿನ ಭರವಸೆ ಕೂಡ ಇದೆ. ಶಾಂತ ರೀತಿಯಲ್ಲಿ ಮತದಾನ ನಡೆಯುತ್ತಿದೆ. ಪ್ರಬುದ್ಧ ಮತದಾರರು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿಸಿದರು.

ಜಿ.ಪಂ. ಸದಸ್ಯ ಎಂ.ಎಸ್‌.ಮಹಮ್ಮದ್‌ ಅವರು ಪತ್ರಕರ್ತರ ಜತೆ ಮಾತನಾಡಿ ಕರೋಪಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾಗಿದ್ದ ಜಲೀಲ್‌ ಅವರು ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಜನಮೆಚ್ಚುಗೆ ಗಳಿಸಿದ್ದರು. ಇವರ ಸೇವಾ ಮನೋಭಾವನೆಯನ್ನು ಈ ವಾರ್ಡ್‌ನ ಮತದಾರರು ಮರೆತಿಲ್ಲ. ಜಲೀಲ್‌ ಹತ್ಯೆಗೆ ಈ ಚುನಾವಣೆ ಮೂಲಕವೇ ಉತ್ತರ ನೀಡಬೇಕಾಗುತ್ತದೆ ಎಂಬ ಅಭಿಪ್ರಾಯ ಮತದಾರರಲ್ಲಿದೆ. ಆದುದರಿಂದ ಅನ್ವರ್‌ ಅವರು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು. ಎ. 20ರಂದು ಜಲೀಲ್‌ ಅವರು ಗ್ರಾ.ಪಂ. ಕಚೇರಿಯಲ್ಲಿದ್ದ ವೇಳೆ ಹಾಡಹಗಲೆ ನುಗ್ಗಿದ ತಂಡ ಜಲೀಲ್‌ ಅವರನ್ನು ಬರ್ಬರವಾಗಿ ಹತ್ಯೆಗೈದಿತ್ತು. ಬಳಿಕ  ಆರೋಪಿಗಳ ಶೋಧ ನಡೆಸಿ. 11 ಆರೋಪಿಗಳನ್ನು ಬಂಧಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next