ಬೆಂಗಳೂರು/ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ. ಅವರೆಲ್ಲ ದೊಡ್ಡ ಕಲಾವಿದರು ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರಿಗೆ ಹಲವು ಪತ್ರ ಬರೆದಿದ್ದರು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡಿರಿಲಿಲ್ಲ. ಈಗ ಬಿಎಸ್ ಯಡಿಯೂರಪ್ಪ ಪತ್ರಕ್ಕೆ ಪ್ರತಿಕ್ರಿಯೆ ನೀಡುತ್ತಲೇ ಇದ್ದಾರೆ ಎಂದು ತಿರುಗೇಟು ನೀಡಿದರು.
ಸಮಸ್ಯೆಯನ್ನು ಮೊದಲೇ ಪರಿಹರಿಸಲು ಮುಂದಾಗಬಹುದಿತ್ತು, ಆದರೆ ರಾಜಕೀಯ ಲಾಭಕ್ಕಾಗಿ ಈ ನಾಟಕವಾಡುತ್ತಿದ್ದಾರೆ ಎಂದು ದೂರಿದರು.
ನಿಮ್ಮಿಂದ ಆಗದ ಕೆಲಸ ನಾವು ಮಾಡಿದ್ದೇವೆ: ಬಿಎಸ್ ವೈ
ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, 2012ರಿಂದ 2015ರವರೆಗೆ ಕೇಂದ್ರ ಮತ್ತು ಗೋವಾದಲ್ಲಿ ನೀವೇ(ಕಾಂಗ್ರೆಸ್) ಅಧಿಕಾರದಲ್ಲಿ ಇದ್ದಿದ್ದೀರಿ.ಆಗ ಯಾಕೆ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲಿಲ್ಲ. ಕಳೆದ 15 ವರ್ಷಗಳಿಂದ ನಿಮ್ಮಿಂದ ಆಗದ ಕೆಲಸವನ್ನು ನಾವು(ಬಿಜೆಪಿ) ಮಾಡುತ್ತಿದ್ದೇವೆ, ಅದಕ್ಕೆ ಬೆಂಬಲ ಕೊಡೋದು ಬಿಟ್ಟು, ಈ ರೀತಿ ಅಡ್ಡಿಪಡಿಸುತ್ತಿರುವುದೇಕೆ ಎಂದು ತಿರುಗೇಟು ನೀಡಿದ್ದಾರೆ.