Advertisement

ಕರ್ನಾಟಕ ಬೊಂಬಾಟ್‌ ಆಟ; 222 ರನ್‌ ಮುನ್ನಡೆ

11:18 AM Dec 09, 2017 | |

ನಾಗ್ಪುರ: ಮುಂಬಯಿ ಬೌಲಿಂಗ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ಬ್ಯಾಟಿಂಗಿನಲ್ಲೂ ಮಿಂಚು ಹರಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸುತ್ತ ಸಾಗಿದೆ. ಇನ್ನೂ 4 ವಿಕೆಟ್‌ಗಳನ್ನು ಕೈಲಿರಿಸಿಕೊಂಡು 222 ರನ್ನುಗಳ ಬೃಹತ್‌ ಮುನ್ನಡೆಯೊಂದಿಗೆ ದಾಪುಗಾಲಿಕ್ಕಿದೆ. 

Advertisement

ಮುಂಬಯಿಯ 173 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಒಂದಕ್ಕೆ 115 ರನ್‌ ಮಾಡಿದ್ದ ಕರ್ನಾಟಕ, ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 395 ರನ್‌ ಪೇರಿಸಿದೆ. ಈ ಮುನ್ನಡೆಯನ್ನು ಮುನ್ನೂರರ ತನಕ ವಿಸ್ತರಿಸಿದರೆ ವಿನಯ್‌ ಕುಮಾರ್‌ ಪಡೆ ಹೆಚ್ಚು ಸುರಕ್ಷಿತವಾಗಿ ಉಳಿಯಲಿದ್ದು, ಸೆಮಿಫೈನಲ್‌ ಟಿಕೆಟ್‌ ಖಾತ್ರಿ ಎನ್ನಲಡ್ಡಿಯಿಲ್ಲ.

ನಾಲ್ವರಿಂದ ಅರ್ಧ ಶತಕ
ಕರ್ನಾಟಕದ ಸರದಿಯಲ್ಲಿ ಒಟ್ಟು 4 ಅರ್ಧ ಶತಕಗಳು ದಾಖಲಾದವು. 62 ರನ್‌ ಮಾಡಿ ಆಡುತ್ತಿದ್ದ ಮಾಯಾಂಕ್‌ ಅಗರ್ವಾಲ್‌ 78 ರನ್ನಿಗೆ ನಿರ್ಗಮಿಸಿದರೆ, ಕೌನೈನ್‌ ಅಬ್ಟಾಸ್‌ 50, ಕೀಪರ್‌ ಸಿ.ಎಂ. ಗೌತಮ್‌ 79 ರನ್‌ ಕೊಡುಗೆ ಸಲ್ಲಿಸಿದರು. ಕರ್ನಾಟಕ ಸರದಿಯ ಟಾಪ್‌ ಸ್ಕೋರರ್‌ ಎಂಬ ಹೆಗ್ಗಳಿಕೆ ಶ್ರೇಯಸ್‌ ಗೋಪಾಲ್‌ ಪಾಲಾಗಿದ್ದು, ಅವರು 80 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ 31 ರನ್‌ ಮಾಡಿರುವ ವಿನಯ್‌ ಕುಮಾರ್‌ ಕ್ರೀಸಿನಲ್ಲಿದ್ದಾರೆ. ಆದರೆ ಕರುಣ್‌ ನಾಯರ್‌ (16) ಮತ್ತು ಪವನ್‌ ದೇಶಪಾಂಡೆ (8) ಬ್ಯಾಟಿಂಗ್‌ ವೈಫ‌ಲ್ಯ ಎದುರಿಸಿದರು.

ಗೌತಮ್‌-ಗೋಪಾಲ್‌ ರಕ್ಷಣೆ
ಕರ್ನಾಟಕದ ದ್ವಿತೀಯ ದಿನದ ಆರಂಭ ಚೇತೋಹಾರಿಯಾಗಿ ಇರಲಿಲ್ಲ. ಮುಂಬಯಿ ಸೀಮರ್‌ಗಳು ಮುಂಜಾನೆಯ ಅವಧಿಯಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಅಗರ್ವಾಲ್‌, ನಾಯರ್‌, ದೇಶ ಪಾಂಡೆ ಅವರನ್ನು ಬೇಗನೇ ಪೆವಿಲಿಯನ್ನಿಗೆ ರವಾ ನಿಸಿದರು. ಅಬ್ಟಾಸ್‌ ಒಂದೆಡೆ ಬಂಡೆಯಂತೆ ನಿಂತು ಮುಂಬಯಿ ದಾಳಿಗೆ ಸಡ್ಡು ಹೊಡೆಯುತ್ತ ಹೋದರು. ಸ್ಕೋರ್‌ 218ಕ್ಕೆ ತಲಪುತ್ತಲೇ ಅಬ್ಟಾಸ್‌ ಕೂಡ ನಿರ್ಗಮಿಸಿದರು. ಅಬ್ಟಾಸ್‌ ಕೊಡುಗೆ 137 ಎಸೆತಗಳಿಂದ ಭರ್ತಿ 50 ರನ್‌ (5 ಬೌಂಡರಿ). ಕರ್ನಾಟಕ ಆಗ ಕೇವಲ 45 ರನ್‌ ಮುನ್ನಡೆಯಲ್ಲಿತ್ತು.

ಈ ಹಂತದಲ್ಲಿ ಸಿ.ಎಂ. ಗೌತಮ್‌-ಶ್ರೇಯಸ್‌ ಗೋಪಾಲ್‌ ಕ್ರೀಸ್‌ ಆಕ್ರಮಿಸಿಕೊಂಡು ದೊಡ್ಡ ಜತೆಯಾಟ ನಡೆಸಿದ್ದರಿಂದ ಕರ್ನಾಟಕ ಹೊಸ ಚೈತನ್ಯ ಪಡೆಯಿತು, ಮುನ್ನಡೆಯೂ ಏರುತ್ತ ಹೋಯಿತು. ಇವರಿಬ್ಬರಿಂದ 6ನೇ ವಿಕೆಟಿಗೆ 103 ರನ್‌ ಒಟ್ಟುಗೂಡಿತು. ಗೌತಮ್‌ 12 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿ 79 ರನ್‌ ಬಾರಿಸಿ ದರು. ಎದುರಿಸಿದ್ದು 111 ಎಸೆತ. ಲೀಗ್‌ನಲ್ಲಿ ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿದ್ದ ಗೌತಮ್‌ ಸರಿಯಾದ ಹೊತ್ತಿನಲ್ಲಿ ತಂಡದ ರಕ್ಷಣೆಗೆ ನಿಂತರು.

Advertisement

ಶ್ರೇಯಸ್‌ ಗೋಪಾಲ್‌ – ವಿನಯ್‌ ಕುಮಾರ್‌ ಮತ್ತೂಂದು ದೊಡ್ಡ ಜತೆಯಾಟದ ಮೂಲಕ ಮುಂಬಯಿ ಬೌಲರ್‌ಗಳಿಗೆ ತಲೆ ನೋವಾಗಿದ್ದಾರೆ. ಇವರಿಂದ ಮುರಿಯದ 7ನೇ ವಿಕೆಟಿಗೆ 74 ರನ್‌ ಸಂಗ್ರಹಗೊಂಡಿದೆ. ಶ್ರೇಯಸ್‌ 80 ರನ್‌ (151 ಎಸೆತ, 7 ಬೌಂಡರಿ), ವಿನಯ್‌ 31 ರನ್‌ (100 ಎಸೆತ, 3 ಬೌಂಡರಿ) ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 

ಪ್ರಸಕ್ತ ಋತುವಿನಲ್ಲಿ ರನ್‌ ಪ್ರವಾಹ ಹರಿಸುತ್ತಲೇ ಬಂದ ಮಾಯಾಂಕ್‌ ಅಗರ್ವಾಲ್‌ ಇನ್ನೊಂದು ದೊಡ್ಡ ಇನ್ನಿಂಗ್ಸ್‌ ಕಟ್ಟುವ ನಿರೀಕ್ಷೆ ಇತ್ತು. ಆದರೆ ಇದು ಸಾಕಾರಗೊಳ್ಳಲಿಲ್ಲ. ಅವರು ಮೊದಲ ದಿನದ ಮೊತ್ತಕ್ಕೆ ಕೇವಲ 16 ರನ್‌ ಸೇರಿಸಿ ನಿರ್ಗಮಿಸಿದರು. ಬ್ಯಾಟಿಗೆ ಸವರಿದ ಮಲ್ಹೋತ್ರಾ ಎಸೆತ ಕೀಪರ್‌ ತಾರೆ ಬೊಗಸೆ ಸೇರಿತ್ತು. ಮುಂದಿನ ವಿಕೆಟ್‌ಗಳೆಲ್ಲ ದುಬೆ ಪಾಲಾದವು.

ಐದು ವಿಕೆಟ್‌ ಕಿತ್ತ ದುಬೆ
ಮುಂಬಯಿ ಪರ ಮಧ್ಯಮ ವೇಗಿ ಶಿವಂ ದುಬೆ 79 ರನ್ನಿಗೆ 5 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಶುಕ್ರವಾರ ಉರುಳಿದ 5 ವಿಕೆಟ್‌ಗಳಲ್ಲಿ 4 ದುಬೆ ಪಾಲಾಯಿತು. ಅಗರ್ವಾಲ್‌ ಅವರ ಬಹುಮೂಲ್ಯ ವಿಕೆಟ್‌ ಶಿವಂ ಮಲ್ಹೋತ್ರಾ ಪಾಲಾಯಿತು. ಮುಂಬಯಿಯ ಈ ಇಬ್ಬರೂ ಬಲಗೈ ಮಧ್ಯಮ ವೇಗಿಗಳಿಗೆ ಇದು ಚೊಚ್ಚಲ “ಪ್ರಥಮ ದರ್ಜೆ’ ಪಂದ್ಯ ಎಂಬುದನ್ನು ಮರೆಯುವಂತಿಲ್ಲ. ಅನುಭವಿ ಧವಳ್‌ ಕುಲಕರ್ಣಿ ವಿಕೆಟ್‌ ಕೀಳುವಲ್ಲಿ ವಿಫ‌ಲರಾದರು. ಪಾರ್ಕರ್‌, ಕೊಠಾರಿ, ಬಿಸ್ತಾ ಬೌಲಿಂಗ್‌ ಯಾವುದೇ ಪರಿಣಾಮ ಬೀರಲಿಲ್ಲ.

ಸ್ಕೋರ್‌ಪಟ್ಟಿ
ಮುಂಬಯಿ ಪ್ರಥಮ ಇನ್ನಿಂಗ್ಸ್‌    173
ಕರ್ನಾಟಕ ಪ್ರಥಮ ಇನ್ನಿಂಗ್ಸ್‌
ಆರ್‌. ಸಮರ್ಥ್    ಬಿ ದುಬೆ    40

ಮಾಯಾಂಕ್‌ ಅಗರ್ವಾಲ್‌    ಸಿ ತಾರೆ ಬಿ ಮಲ್ಹೋತ್ರಾ    78
ಕೌನೈನ್‌ ಅಬ್ಟಾಸ್‌    ಎಲ್‌ಬಿಡಬ್ಲ್ಯು ದುಬೆ    50
ಕರುಣ್‌ ನಾಯರ್‌    ಎಲ್‌ಬಿಡಬ್ಲ್ಯು ದುಬೆ    16
ಪವನ್‌ ದೇಶಪಾಂಡೆ    ಸಿ ಹೆರ್ವಾಡ್ಕರ್‌ ಬಿ ದುಬೆ    8
ಸಿ.ಎಂ. ಗೌತಮ್‌    ಎಲ್‌ಬಿಡಬ್ಲ್ಯು ದುಬೆ    79
ಶ್ರೇಯಸ್‌ ಗೋಪಾಲ್‌    ಬ್ಯಾಟಿಂಗ್‌    80
ವಿನಯ್‌ ಕುಮಾರ್‌    ಬ್ಯಾಟಿಂಗ್‌    31

ಇತರ        13
ಒಟ್ಟು  (6 ವಿಕೆಟಿಗೆ)        395
ವಿಕೆಟ್‌ ಪತನ: 1-83, 2-135, 3-161, 4-183, 5-218, 6-321.
ಬೌಲಿಂಗ್‌:
ಧವಳ್‌ ಕುಲಕರ್ಣಿ    26-7-66-0
ಶಿವಂ ಮಲ್ಹೋತ್ರಾ        21-1-81-1
ಆಕಾಶ್‌ ಪಾರ್ಕರ್‌        19-1-84-0
ಕರ್ಶ್‌ ಕೊಠಾರಿ        21-5-58-0
ಶಿವಂ ದುಬೆ        30-5-79-5
ಜಾಯ್‌ ಬಿಸ್ತಾ        5-1-17-0

Advertisement

Udayavani is now on Telegram. Click here to join our channel and stay updated with the latest news.

Next