Advertisement

6 ಸಾವಿರ ರೂ.ಗೆ ಪಟ್ಟು;ನಡುರಸ್ತೆಯಲ್ಲೇ ಇರುಳು ಕಳೆದ “ಆಶಾ”ವಾದಿಗಳು

06:00 AM Sep 08, 2017 | |

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವಧನವನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ 5 ಸಾವಿರ ರೂಪಾಯಿಗೆ ಹೆಚ್ಚಿಸಿದರೂ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಆಶಾ ಕಾರ್ಯಕರ್ತೆಯರು ಅದರಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. 

Advertisement

ಕನಿಷ್ಠ 6 ಸಾವಿರ ರೂ. ಗೌರವಧನ ನೀಡಬೇಕು ಮತ್ತು ಆಶಾ ಸಾಫ್ಟ್ವೇರ್‌ ರದ್ದುಪಡಿಸಬೇಕೆಂದು ಪಟ್ಟುಹಿಡಿದಿರುವ ಅವರು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ಮತ್ತು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾವಣೆಗೊಂಡ ಕಾರ್ಯಕರ್ತೆಯರು, ರಾಜ್ಯ ಸರ್ಕಾರವೊಂದೇ 6 ಸಾವಿರ ರೂ. ಗೌರವಧನ ನೀಡಬೇಕು. ಅಲ್ಲಿಯವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡ ಬೆನ್ನಲ್ಲೇ ಸರ್ಕಾರದ ಪರವಾಗಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸ್ಥಳಕ್ಕೆ ಭೇಟಿ ನೀಡಿ, “ಆಶಾ ಕಾರ್ಯಕರ್ತೆಯರಿಗೆ ವಿವಿಧ ಪ್ರಕಾರದ 32 ಚಟುವಟಿಕೆ ನೀಡಲಾಗಿದೆ. ಅವುಗಳಿಗೆ ಅನುಗುಣವಾಗಿ ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ. ಆದರೆ, ಈಗ ಒಟ್ಟಾರೆ ಇಡಿಗಂಟಾಗಿ 5 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು.ಜತೆಗೆ ಪ್ರತಿ ತಾಲೂಕಿಗೆ ಒಬ್ಬ ಆಶಾ ಸಾಫ್ rವೇರ್‌ನ ಡೇಟಾ ಎಂಟ್ರಿ ಆಪರೇಟರ್‌ ಅನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು. ಇದರ ಬೆನ್ನಲ್ಲೇ ಸರ್ಕಾರ ಗೌರವಧನ ಹೆಚ್ಚಿಸಿ ಆದೇಶವನ್ನೂ ಹೊರಡಿಸಿತು.

ಚೌಕಾಸಿ ಬೇಡ: ಆದರೆ, ಇದಕ್ಕೆ ಒಪ್ಪದ ಕಾರ್ಯಕರ್ತೆಯರು, “ಜನಪ್ರತಿನಿಧಿಗಳ ಭತ್ಯೆ-ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ. ನಿತ್ಯ ಬೀದಿ-ಬೀದಿ ಅಲೆದು ಜನರಿಗೆ ಆರೋಗ್ಯ ಸೇವೆ ನೀಡುವ ನಮಗೆ 6 ಸಾವಿರ ರೂ. ಗೌರವಧನ ನೀಡಲು ಚೌಕಾಸಿ ಮಾಡುತ್ತಿದೆ. ಅಷ್ಟಕ್ಕೂ ಈಗಾಗಲೇ ತೆಲಂಗಾಣ, ಕೇರಳದಲ್ಲಿ 6 ರಿಂದ 7 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ತಮಗೂ ನೀಡಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್‌ ಯಾದಗಿರಿ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ನೀಡುವ ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿದೆ. ನಾವು ಮಾಡುವ ಕೆಲಸಗಳಿಗೆ ಅನುಗುಣವಾಗಿ ಕೇಂದ್ರ ಅನುದಾನ ನೀಡಿದರೆ, ಅಷ್ಟೇ ಪ್ರಮಾಣದ ಅನುದಾನವನ್ನು ರಾಜ್ಯ ಸರ್ಕಾರ ಮ್ಯಾಚಿಂಗ್‌ ಗ್ರ್ಯಾಂಟ್‌ ರೂಪದಲ್ಲಿ ನೀಡಬೇಕು. ಆದರೆ, ರಾಜ್ಯ ಸರ್ಕಾರ ಎಲ್ಲವೂ ಸೇರಿ 5 ಸಾವಿರ ರೂ. ನೀಡುವುದಾಗಿ ಹೇಳುತ್ತಿದೆ. ಹಾಗಾಗಿ, ಇದು ಒಪ್ಪಿತವಲ್ಲ. ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದುವರಿಯಲಿದೆ ಎಂದು ಹೇಳಿದರು. 
ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, “ಸರ್ಕಾರ 5 ಸಾವಿರ ರೂ. ನೀಡಲು ಮುಂದಾಗಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದೇನೇ ಇರಲಿ, ಈ ಬಗ್ಗೆ ಕಾರ್ಯಕರ್ತೆಯರೊಂದಿಗೆ ಚರ್ಚಿಸಿ, ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

Advertisement

67 ಕಾರ್ಯಕರ್ತೆಯರಿಗೆ 10 ಸಾವಿರ ರೂ.!: ಮುಷ್ಕರದಲ್ಲಿ ಲೇಖಕಿ ರೂಪಾ ಹಾಸನ್‌ ಮಾತನಾಡಿ, ಸುಮಾರು 37
ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಈ ಪೈಕಿ 67 ಜನ ಮಾತ್ರ ಮಾಸಿಕ 10 ಸಾವಿರ ಪ್ರೋತ್ಸಾಹಧನ ಪಡೆದಿದ್ದಾರೆ. ಇದು ಆಶಾ ಸಾಫ್ಟ್ವೇರ್‌ನ ಕೊಡುಗೆ. ಉಳಿದವರಿಗೆ ಗರಿಷ್ಠ ಕೇವಲ 2 ಸಾವಿರ ರೂ. ಬಂದಿದೆ. ಅನೇಕರಿಗೆ ಇದು ಕೂಡ ಬಂದಿಲ್ಲ. ಇನ್ನು ಮ್ಯಾಚಿಂಗ್‌ ಗ್ರ್ಯಾಂಟ್‌ ಅಂತೂ ದೂರದ ಮಾತಾಗಿದೆ. ಹೀಗಿರುವಾಗ, ಬದುಕು ಸಾಗಿಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರದಲ್ಲಿ ವಕೀಲರಾದ ಹೇಮಲತಾ ಮಹಿಷಿ, ಎಐಯುಟಿಯುಸಿ ಉಪಾಧ್ಯಕ್ಷ ಕೆ. ರಾಧಾಕೃಷ್ಣ, ಆರೋಗ್ಯ ಇಲಾಖೆ ನಿರ್ದೇಶಕ ನಟರಾಜ್‌ ಮತ್ತಿತರರು ಭಾಗವಹಿಸಿದ್ದರು. ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನದ ಪ್ರಮಾಣವನ್ನು 6 ಸಾವಿರ ರೂ.ಗೆ ಏರಿಕೆ ಮಾಡಬೇಕೆಂಬ ಬೇಡಿಕೆ ಇತ್ತು. ಅದನ್ನು ಈಗ 5 ಸಾವಿರಕ್ಕೆ ಏರಿಸಲಾಗಿದೆ. ಗೌರವಧನ ಸೇರಿ ಮತ್ತಿತರ ಭತ್ಯೆಗಳ ಮೂಲಕ ಅವರು ಇನ್ನು ಮುಂದೆ ಪ್ರತಿ ತಿಂಗಳು ಕನಿಷ್ಠವೆಂದರೂ 10 ಸಾವಿರ ರೂ. ಪಡೆಯಲಿದ್ದಾರೆ. 
– ಕೆ.ಆರ್‌.ರಮೇಶ್‌ಕುಮಾರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next