Advertisement

ಕಣ್ತೆರೆದು ನೋಡದೇಕೆ ಸರ್ಕಾರ?

01:31 PM Oct 31, 2019 | |

ನಾಡಾಭಿಮಾನಿಗಳಿಗೆ ನವೆಂಬರ್‌ ಎಂದರೆ ಕನ್ನಡ ಮಾಸ. ಕನ್ನಡಾಭಿಮಾನ ಬಹಿರಂಗವಾಗಿ ಪ್ರಕಟವಾಗುವ ತಿಂಗಳದು. ಎಲ್ಲೆಲ್ಲೂ ಕನ್ನಡ ಬಾವುಟಗಳು ಹಾರಾಡುತ್ತವೆ. ಕನ್ನಡ ಕಾಣುತ್ತದೆ (ಈ ವರ್ಷ ಫ್ಲೆಕ್ಸ್‌ಗಳಿಗೆ ನಿಷೇಧ ಇರುವುದರಿಂದ ಏನಾಗುತ್ತದೆ ನೋಡಬೇಕು). ಕನ್ನಡ ಗೀತೆಗಳು ಧ್ವನಿವರ್ಧಕದ ಮೂಲಕ ಕೇಳುತ್ತವೆ. ದುರ್ದೈವವೆಂದರೆ ರಾಜ್ಯೋತ್ಸವ ಘೋಷಣೆ-ಭಾಷಣಕ್ಕೇ ಸೀಮಿತವಾಗಿ ಕನ್ನಡ ಜಾಗೃತಿಗೆ ವೇದಿಕೆ ಆಗದೆ “ಇದು ಉತ್ಸವ ತಾಯಿ ಇದು ಉತ್ಸವ’ ಅನ್ನುವಂತಾಗಿದೆ. ರಾಜ್ಯೋತ್ಸವಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕನ್ನಡನಾಡಿನ ಭವ್ಯ ಪರಂಪರೆಯವನ್ನು ನೆನಪಿಸಿಕೊಳ್ಳುವ ಭಾಷಣಗಳು, ಜೊತೆಗೆ ಕನ್ನಡಗರ ನಿರ್ಲಿಪ್ತತೆ ಬಗ್ಗೆಯೂ ಅತಿಥಿಗಳು ಮಾತನಾಡುತ್ತಾರೆ.

Advertisement

ರಾಜ್ಯೋತ್ಸವದಂದು ಪ್ರತಿ ವರ್ಷ ಸರ್ಕಾರವು ಕನ್ನಡಕ್ಕೆ ಸಂಬಂಧಿಸಿದಂತೆ ಹೊಸ ಕಾರ್ಯಕ್ರಮ ಘೋಷಣೆ ಮಾಡುವುದು ವಾರ್ಷಿಕ ವಿಧಿಯಾಗಿದೆ. ಸರ್ಕಾರ ಘೋಷಿಸಿದ ಕನ್ನಡ ಕಾರ್ಯಕ್ರಮ ಇನ್ನೊಂದು ರಾಜ್ಯೋತ್ಸವದ ಹೊತ್ತಿಗೆ ಮರೆತು ಹೋಗಿರುತ್ತದೆ. ಜನರ ನೆನಪಿನಲ್ಲಿಯೂ ಉಳಿದಿರುವುದಿಲ್ಲ. ಆದರೆ,

ನಾಡು- ನುಡಿಯ ಬಗ್ಗೆ ಕೇಳಿಬರುವ ಆತಂಕದ ಮಾತುಗಳು ಮುಂದುವರೆದಿರುತ್ತವೆ. ಹಲವು ಹೋರಾಟಗಳ ನಂತರವೂ “ಮಹಿಷಿ ವರದಿ ಜಾರಿಗೆ ಬರಲಿ’, “ಕನ್ನಡ ಶಿಕ್ಷಣ ಮಾಧ್ಯಮವಾಗಲಿ’, “ನಾಮಫ‌ಲಕಗಳಲ್ಲಿ ಕನ್ನಡ ಕಡ್ಡಾಯವಾಗಲಿ’ ಹೀಗೆ ಕನ್ನಡಪರ ಘೋಷಣೆಗಳು ಘೋಷಣೆಯಾಗಿಯೇ ಉಳಿದುಕೊಂಡಿವೆ. ಕರ್ನಾಟಕ ಏಕೀಕರಣವಾಗಿ 62 ವರ್ಷಗಳಾಗಿ ನಿರಂತರ ಕನ್ನಡ ಹೋರಾಟಗಳು ನಡೆದ ನಂತರವೂ ಕನ್ನಡ ಸಮಸ್ಯೆಗಳೆಲ್ಲ ಪರಿಹಾರವಾಗಿಲ್ಲ.

ಕನ್ನಡ ಅನಾಥ, ಕನ್ನಡಿಗ ನಿರಾಶ್ರಿತ ಎನ್ನುವ ಸ್ಥಿತಿ ಮುಂದುವರೆದಿದೆ. ಕನ್ನಡಪರ ಹೋರಾಟ ನಡೆಯದಿದ್ದರೆ ಸ್ಥಿತಿ ಇನ್ನಷ್ಟು ಹೀನಾಯವಾಗಿರುತ್ತಿತ್ತು. ನಾಡಿನ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರೇ  “ಕರ್ನಾಟಕ ಸರ್ಕಾರ ಮಾಡಿರುವ ಕನ್ನಡ ಕೆಲಸಗಳು ಕನ್ನಡ ಹೋರಾಟಗಾರರ ಒತ್ತಡದಿಂದ ಅದದ್ದೇ ಹೊರತು, ಸ್ವಯಂ ಪ್ರೇರಣೆಯಿಂದಲ್ಲ’ ಎಂದು ಹೇಳಿದ್ದರು. ಒತ್ತಡಕ್ಕೆ ಮಣಿದು ಸರ್ಕಾರ ರಚಿಸಿದ ಆಯೋಗಗಳ ಕನ್ನಡಪರ ವರದಿಗಳು/ಆದೇಶಗಳು ಕಡತಗಳಲ್ಲಿ ಧೂಳಿನ ನಡುವೆ ಭದ್ರವಾಗಿವೆ.

ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಪ್ರಕಟಿಸಿ 10 ವರ್ಷಗಳಾಯಿತು (31-10-2008). ಆದರೆ, ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಏಕೆ ಹೀಗೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕೆಂದು ಹೋರಾಟ ನಡೆಸಿದವರು, ತಮಿಳಿಗೆ ಸಿಕ್ಕಿರುವ ಸವಲತ್ತುಗಳು ಕನ್ನಡಕ್ಕೆ  ಸಿಕ್ಕದೆಯೇ? ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗಲೇ ಇಲ್ಲ. ಇನ್ನು ನಮ್ಮ ರಾಜಕಾರಣಿಗಳಿಗೆ ಶಾಸ್ತ್ರೀಯ ಭಾಷೆಯ ವಿಚಾರದಲ್ಲಿ ಏನಾಗಿದೆ ಎಂಬುದು ಮಹತ್ವದ ವಿಚಾರವಲ್ಲ (ಕನ್ನಡಿಗರು ಮತ ನೀಡುವಾಗ ಇವರು ಕನ್ನಡಪರ ಇದ್ದಾರೆಯೇ? ಇಲ್ಲವೇ ಅನ್ನುವುದನ್ನು ಹೇಗೂ ಪರಿಗಣಿಸುವುದಿಲ್ಲವಲ್ಲ!).

Advertisement

ಶಾಸ್ತ್ರೀಯ ತಮಿಳು ಕೇಂದ್ರದಲ್ಲಿ ಆಗಿರುವ ಕೆಲಸವನ್ನು ನೋಡಿ ಕನ್ನಡದಲ್ಲಿ ಈ ಕೆಲಸಗಳು ಆಗುವುದು ಯಾವಾಗ ಎಂದು ಕಾದು ಕೂರುವುದಷ್ಟೇ ಕನ್ನಡಾಭಿಮಾನಿಗಳಿಗೆ ಉಳಿದಿರುವುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ದೂಷಿಸುವಂತಿಲ್ಲ. 2016ರಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯವರು “ಕನ್ನಡ ಅಭಿವೃದ್ಧಿ ಪ್ರಾಧಿಕಾರದ‌ ನಿಯೋಗಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ಕಟ್ಟಡ ನೀಡಿದರೆ ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಪೀಠವನ್ನು ಭಾರತೀಯ ಭಾಷಾ ಕೇಂದ್ರದಿಂದ ಸ್ಥಳಾಂತರಿಸಿ ಅದಕ್ಕೆ ಸ್ವಾಯತ್ತತೆಯನ್ನು 15 ದಿನದಲ್ಲಿ ನೀಡುವುದಾಗಿ’ ಸ್ಪಷ್ಟವಾಗಿ ಹೇಳಿದ್ದರು. ಆಗ ಬೆಂಗಳೂರೋ,  ಮೈಸೂರೋ ಎಂಬ ವಿವಾದ ಸೃಷ್ಟಿ ಆಯಿತು. ಅದಕ್ಕೆ ರಾಜ್ಯ ಸರ್ಕಾರ ಮೌನವೇ ಆಭರಣ ಅನ್ನುವ ಧೋರಣೆ ತಳೆಯಿತು. ಇದರ ಪರಿಣಾಮವಾಗಿ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವು ಇಐಐಔನ ಹಿಡಿತದಲ್ಲಿ ಉಪ ವಿಭಾಗವಾಗಿ 2 ಸಣ್ಣ ಕೊಠಡಿಗಳಲ್ಲಿ ಹೆಸರಿಗಷ್ಟೇ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವಾಗಿದೆ. ಶಾಸ್ತ್ರೀಯ ಭಾಷೆಗೆ ಕೇಂದ್ರ ಸರ್ಕಾರವು ನೀಡುವ ಸವಲತ್ತುಗಳನ್ನು ಉಪಯೋಗಿಸಿ ಕೊಂಡು ಅರ್ಥಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಲೇ ಇಲ್ಲ. ಇದಕ್ಕೆ ಯಾರನ್ನು ದೂಷಿಸುವುದು?

ಕನ್ನಡ ಹೋರಾಟದ ಫ‌ಲವಾಗಿ ಬಂದ ಡಾ. ಸರೋಜಿನಿ ಮಹಿಷಿ ವರದಿ ಮೂರು ದಶಕಗಳು ಕಳೆದ ನಂತರವೂ ಅನುಷ್ಠಾನಕ್ಕೆ ಬರಲೇ ಇಲ್ಲ. ಜಾಗತೀಕರಣದ ಪರಿಣಾಮ ಈ ವರದಿ ಅನುಷ್ಠಾನ ಸಾಧ್ಯವಿಲ್ಲ ಅನ್ನುವ ಸ್ಥಿತಿ ನಿರ್ಮಾಣವಾದಾಗ 2016ರಲ್ಲಿ ರಾಜ್ಯ ಸರ್ಕಾರ ಇಂದಿನ ಕಾಲಮಾನಕ್ಕೆ ಹೊಂದುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಆ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿ ಇನ್ನೇನು 2 ವರ್ಷವಾಗುತ್ತಿದೆ. ಪರಿಷ್ಕೃತ ಮಹಿಷಿ ವರದಿಯನ್ನು ಜಾರಿಗೆ ತರುವ ಮತ್ತು ಅದಕ್ಕೆ ಕಾನೂನು ಬಲತಂದು ಕೊಡುವ ಪ್ರಯತ್ನವೇ ಆಗಿಲ್ಲ. ಸರೋಜಿನಿ ಮಹಿಷಿ ವರದಿಗೆ ಕಾನೂನು ಬಲ ಇಲ್ಲದಿರುವುದರಿಂದ ಅದನ್ನು ಅನುಷ್ಠಾನ ಮಾಡದಿದ್ದರೆ ಅದು ಕಾನೂನು ಉಲ್ಲಂಘನೆ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿರುವುದು ಗಮನೀಯ.

ಶಿಕ್ಷಣದಲ್ಲಿ ಭಾಷೆ ಬಳಕೆಯಾಗದಿದ್ದರೆ, ಆ ಭಾಷೆಗೆ ಭವಿಷ್ಯವಿಲ್ಲ ಎನ್ನುತ್ತಾರೆ ಭಾಷಾ ವಿಜ್ಞಾನಿಗಳು. ಕನ್ನಡದ ಬಳಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯನ್ನು ರಾಜ್ಯ ಸರ್ಕಾರವೇ ರಚಿಸಿತ್ತು. ಸಮಿತಿ ವರದಿಯನ್ನು ನೀಡಿ ವರ್ಷವಾಯಿತು. ಅದನ್ನು ಸರ್ಕಾರ ಜಾರಿಗೆ ತರಲೇ ಇಲ್ಲ.  ಶೆಡ್ನೂಲ್‌-8ರಲ್ಲಿರುವ ಎಲ್ಲ ಭಾಷೆಗಳನ್ನು ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಕಲಿಕಾ ಮಾಧ್ಯಮವಾಗಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಮತ್ತು ನಿಜ ಅರ್ಥದಲ್ಲಿ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಣ ಹಕ್ಕು ಕಾಯಿದೆಗೆ ಸೂಕ್ತ ತಿದ್ದುಪಡಿ ತರಬೇಕು ಎಂಬುದನ್ನು ಹಿಂದಿನ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ, ಈ ವಿಚಾರವಾಗಿ ರಾಜ್ಯ ಸರ್ಕಾರ ಏನೂ ಮಾಡಿಲ್ಲ.

ಇದೆಲ್ಲವನ್ನು ಬಿಡಿ, ರಾಷ್ಟ್ರಕವಿ ಕುವೆಂಪು ರಚಿತ “ಜಯಭಾರತ ಜನನಿಯ ತನುಜಾತೆ’ ನಾಡಗೀತೆ ಒಪ್ಪಿರುವ ಸರ್ಕಾರ ಹಾಡುವ ಕ್ರಮ, ನಿರ್ದಿಷ್ಟ ಕಾಲಾವಧಿ ಮತ್ತು ಧಾಟಿಯನ್ನು ನಿಗದಿಪಡಿಸದಿರುವುದರಿಂದ ಒಬ್ಬೊಬ್ಬರು ಒಂದೊಂದು ರೀತಿ ಹಾಡುತ್ತಾರೆ. ನಾಡಗೀತೆಗೆ ಆಗುತ್ತಿರುವ ಅಪಚಾರವನ್ನು ತಡೆಯಬೇಕು ಎಂದು ಸರ್ಕಾರಕ್ಕೆ ಅನ್ನಿಸುವುದೇ ಇಲ್ಲ. ಸಾರ್ವಜನಿಕವಾಗಿ ಕನ್ನಡ ಕಾಣಬೇಕಾದರೆ ನಾಮಫ‌ಲಕ, ಜಾಹೀರಾತುಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು. ನಾಮಫ‌ಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿದ್ದ ಸರ್ಕಾರ ಆದೇಶವನ್ನು ಉಚ್ಚ ನ್ಯಾಯಾಲಯ ತಾಂತ್ರಿಕ ಕಾರಣಗಳನ್ನು ನೀಡಿ ರದ್ದು ಪಡಿಸಿದೆ. ಸರ್ಕಾರ ಇತ್ತ ಗಮನವನ್ನೇ ನೀಡಿಲ್ಲ. ಕನ್ನಡವನ್ನು ಕಡ್ಡಾಯಗೊಳಿಸುವ ಆದೇಶವನ್ನು ಕಾರ್ಮಿಕ ಸೇವಾ ನಿಯಮದಡಿ ರೂಪಿಸಿದ್ದು, ವಿವೇಚನೆಯಿಲ್ಲದೆ ನಾಮಫ‌ಲಕದಲ್ಲಿ ಕನ್ನಡ ಬಳಸದವರಿಗೆ ಹತ್ತು ಸಾವಿರ ದಂಡ ವಿಧಿಸಬಹುದು ಅಂದಿದ್ದು, ನ್ಯಾಯಾಲಯ ನಾಮಫ‌ಲಕ ಆದೇಶವನ್ನು ರದ್ದು ಪಡಿಸಲು ಕಾರಣ. “ಹನುಮನುದಿಸಿದ’ ಈ ನಾಡಿನಲ್ಲಿ ಕನ್ನಡ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಆ ಸಾಹಸ ಮಾಡದೆ ಕನ್ನಡದ ಸಮಸ್ಯೆಗಳನ್ನು ಪರಿಹರಿಸಲು ವಿಳಂಬ ನೀತಿಯನ್ನು ಸರ್ಕಾರ ಅನುಸರಿಸುತ್ತಿದ್ದು, ಇವುಗಳಲ್ಲಿ ಮೂರನ್ನಷ್ಟೇ ಪ್ರಸ್ತಾಪಿಸಿದ್ದೇನೆ. ಕೇರಳದಲ್ಲಿ ಮಲೆಯಾಳಂಗೆ ಸಂಬಂಧಿಸಿದ ಎಲ್ಲ ಅಂಶ‌ಗಳನ್ನು ಅಡಕವಾಗಿಸಿ (Dissemination and Enrichment)  ತರಲಾಗಿದೆ. ಕರ್ನಾಟಕದಲ್ಲೂ ಅಂತಹುದೇ ಒಂದು ಮಸೂದೆ ರೂಪಿತವಾದರೆ ನ್ಯಾಯಾಲಯದ ಮಧ್ಯ ಪ್ರವೇಶ ತಪ್ಪಬಹುದು.

ಕೇಂದ್ರದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಹಿಂದಿ ಹೇರಿಕೆ, ಹೀಗೆ ಹೇಳಬೇಕಾದ ವಿಚಾರ ಸಾಕಷ್ಟಿದೆ. ಆದರೆ, ಹೇಳಹೊರಟರೆ ಅದು ಸಂಪುಟವಾಗಿ ಬಿಡುತ್ತದೆ. ಕನ್ನಡ-ಕನ್ನಡಿಗ-ಕರ್ನಾಟಕಗಳ‌ ಏಳು-ಬೀಳುಗಳ ಬಗ್ಗೆ ಗಂಭೀರವಾಗಿ ಅವಲೋಕನ ನಡೆಸಲು ನಾಡಾಭಿ ಮಾನಿಗಳಿಗೆ ರಾಜ್ಯೋತ್ಸವ ಸೂಕ್ತ ಸಂದರ್ಭ. ಕೊನೆಯ ಮಾತು, ಎಲ್ಲ ಕನ್ನಡಾಭಿಮಾನಿಗಳು ಗಮನಿಸಬೇಕಾದ ಮಾತು- ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಬಹುದು, ಅದನ್ನು ಬಳಸದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬಹುದು; ಆದರೆ, ಕನ್ನಡಿಗರು ಕನ್ನಡದಲ್ಲೇ ಮಾತನಾಡಬೇಕು ಎಂದು ಕಾನೂನು ಮಾಡಲು ಸಾಧ್ಯವೇ?

ರಾ. ನಂ. ಚಂದ್ರಶೇಖರ

Advertisement

Udayavani is now on Telegram. Click here to join our channel and stay updated with the latest news.

Next