ಚಿತ್ರದುರ್ಗ: ನಿವೃತ್ತ ಪ್ರಾಚಾರ್ಯ, ಸಾಹಿತ್ಯ ರತ್ನ ಹೊರಕೆರೆದೇವರಪುರದ ಪ್ರೊ.ಡಿ.ಟಿ. ರಂಗಸ್ವಾಮಿ ಅವರು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ಕುಮಾರ್, ಭಾನುವಾರ ಮಧ್ಯಾಹ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಸಾಹಿತ್ಯ ವಲಯದಲ್ಲಿ ಪ್ರೊ.ಡಿ.ಟಿ.ರಂಗಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಬಿ.ಎ ಆನರ್ಸ್, ಎಂ.ಎ ಪದವಿ ಪಡೆದಿರುವ ಡಿ.ಟಿ.ರಂಗಸ್ವಾಮಿ ಸದ್ಯ 92 ರ ಇಳಿವಯಸ್ಸಿನಲ್ಲಿದ್ದಾರೆ. 1955 ರಿಂದ 1988 ರವರೆಗೆ ಸತತ 33 ವರ್ಷಗಳ ಕಾಲ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ರತ್ನ, ವ್ಯಾಕರಣರತ್ನ, ಸಮಾಜಸೇವಾ ರತ್ನ, ದೇವರ ದಾಸಿಮಯ್ಯ ರತ್ನ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರೊ.ಡಿ.ಟಿ. ರಂಗಸ್ವಾಮಿ ಸುಮಾರು 50 ಕೃತಿಗಳನ್ನು ರಚಿಸಿದ್ದಾರೆ.