Advertisement

Karnataka Rajyotsava; ಬಾಬು ಪಿಲಾರ್‌ ಬದಲು ಬಾಬು ಕಿಲಾರ್‌ಗೆ ಪ್ರಶಸ್ತಿ!!

10:05 AM Nov 02, 2024 | Team Udayavani |

ಉಳ್ಳಾಲ: ಉಳ್ಳಾಲ ತಾಲೂಕು ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಬಾಬು ಪಿಲಾರ್‌ ಅವರನ್ನು ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಸ್ವೀಕರಿಸಲು ಸರಕಾರದ ವತಿಯಿಂದ ಅಹ್ವಾನಿಸಿ ಕೊನೆಯ ಕ್ಷಣದಲ್ಲಿ ಖಾಲಿ ಕೈಯಲ್ಲಿ ಕಳುಹಿಸಿರುವುದಕ್ಕೆ ಅಧಿಕಾರಿಗಳ ಎಡವಟ್ಟು ಕಾರಣ ಎಂದು ಹೇಳಲಾಗಿದೆ. ಇವರನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತಾದ್ದರೂ, ಅವರು ಬೆಂಗಳೂರಿಗೆ ತೆರಳಿದ್ದರಿಂದ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತಾಗಿದೆ.

Advertisement

ಸುಮಾರು 4,500 ಕ್ಕೂ ಹೆಚ್ಚು ಶವಸಂಸ್ಕಾರ ಸಹಿತ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಬಾಬು ಪಿಲಾರ್‌ ತೊಡಗಿದ್ದರು. ಅವರನ್ನು ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿತ್ತು. ಈ ಮಧ್ಯೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರಿನ ಅಧಿಕಾರಿಯೊಬ್ಬರು ಗುರುವಾರ ಸಂಜೆ ದೂರವಾಣಿ ಕರೆ ಮಾಡಿ, ಸುವರ್ಣ ಮಹೋತ್ಸವ ಪ್ರಶಸ್ತಿಗೆ ತಾವು ಆಯ್ಕೆಯಾಗಿದ್ದೀರಿ. ಪ್ರಶಸ್ತಿ ಸ್ವಿಕರಿಸಲು ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಬಾಬು ಅವರು, ತಾನು ಯಾವುದೇ ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ಖಚಿತಪಡಿಸಿಕೊಳ್ಳಿ ಎಂದು ಅಧಿಕಾರಿಯಲ್ಲಿ ಕೇಳಿಕೊಂಡಿದ್ದರೂ, ನಿಮ್ಮನ್ನೇ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದರು. ಹಾಗಾಗಿ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದರು. ಅವರಿಗೆ ಅಲ್ಲಿನ ಕುಮಾರ ಕೃಪಾ ಸರಕಾರಿ ಅತಿಥಿ ಗೃಹದಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಕಿಲಾರ್‌ ತಪ್ಪಿ ಬದಲಿಗೆ ಕರೆ!
ಪ್ರಶಸ್ತಿ ಪಟ್ಟಿಯಲ್ಲಿ ಬಾಬು ಕಿಲಾರ್‌ ಎಂಬವರ ಹೆಸರಿತ್ತು. ಆದರೆ ಜಿಲ್ಲೆ ಉಲ್ಲೇಖೀಸಿರಲಿಲ್ಲ. ಶುಕ್ರವಾರ ಪ್ರಶಸ್ತಿ ಸ್ವೀಕರಿಸಲು ಬಾಬು ಕಿಲಾರ್‌ ಆಗಮಿಸುತ್ತಿದ್ದಂತೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಬಾಬು ಪಿಲಾರ್‌ಗೆ ಕರೆ ಹೋಗಿರುವುದು ಅರಿವಿಗೆ ಬಂದಿತು. ಆಗ ಬಾಬು ಪಿಲಾರ್‌ಗೆ ಕರೆ ಮಾಡಿ ತಾಂತ್ರಿಕ ಕಾರಣದಿಂದ ಪ್ರಶಸ್ತಿಯನ್ನು ಈ ಬಾರಿಯ ಬದಲು ಮುಂದಿನ ಬಾರಿ ಪ್ರಶಸ್ತಿ ನೀಡುತ್ತೇವೆ ಎಂದರು. ಒಟ್ಟು ಅಧಿಕಾರಿಗಳ ಎಡವಟ್ಟಿನಿಂದ ಬಾಬು ಪಿಲಾರ್‌ ಅವರು ಮುಜುಗರ ಅನುಭವಿಸುವಂತಾಗಿದೆ.

ನಾನಾಗಿಯೇ ಹೋಗಿರಲಿಲ್ಲ
ಪ್ರಶಸ್ತಿಗೆ ಯಾವುದೇ ಅರ್ಜಿ ಸಲ್ಲಿಸದೆ ಇರುವಾಗ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಕಂಡು ಅಚ್ಚರಿ ಪಟ್ಟಿದ್ದೆ. ಈ ಕುರಿತು ನನ್ನ ಪರಿಚಯದವರು ಯಾರಾದರೂ ಅರ್ಜಿ ಸಲ್ಲಿಸಿದ್ದರಾ ಎಂದೂ ವಿಚಾರಿಸಿದ್ದೆ. ಅಧಿಕಾರಿಗೂ ಈ ಕುರಿತು ಪರಿಶೀಲಿಸಲು ಕೋರಿದ್ದೆ. ಅವರಿಂದ ಪ್ರಶಸ್ತಿಗೆ ಆಯ್ಕೆಯಾದುದು ಖಚಿತವಾದ ಮೇಲೆಯೇ ಬೆಂಗಳೂರಿಗೆ ತೆರಳಿದ್ದೆ. ನಾನಾಗಿಯೇ ಹೋಗಿರಲಿಲ್ಲ.
ಬಾಬು ಪಿಲಾರ್‌, ಪ್ರಶಸ್ತಿ ವಂಚಿತರಾಗಿರುವ ಸಮಾಜ ಸೇವಕ

Advertisement

Udayavani is now on Telegram. Click here to join our channel and stay updated with the latest news.

Next