Advertisement

ರೈತರಿಂದ ವಿಧಾನ ಸೌಧ ಮುತ್ತಿಗೆ ಯತ್ನ

07:52 PM Feb 14, 2022 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಅಧ್ಯಾದೇಶ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರಾಜ್ಯ ಸರಕಾರ ಈ ಅಧಿವೇಶನದಲ್ಲೆ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ನೂರಾರು ರೈತರನ್ನು ಪೊಲೀಸರು ಮಾರ್ಗ ಮಧ್ಯೆ ತಡೆಹಿಡಿದರು.

Advertisement

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಸೋಮವಾರ ನಗರದ ಸಿಟಿ ರೈಲು ನಿಲ್ದಾಣದಿಂದ ವಿಧಾನ ಸೌಧದತ್ತ ಮೆರವಣಿಗೆ ಹೊರಟರು. ಇವರನ್ನು ಫ್ರೀಡಂ ಪಾರ್ಕ್‌ ಬಳಿಯ ಶೇಷಾದ್ರಿ ರಸ್ತೆಯ ಮಾರ್ಗ ಮಧ್ಯೆ ಪೊಲೀಸರು ತಡೆಹಿದರು. ಹೀಗಾಗಿ ರಸ್ತೆಯ ಮಧ್ಯೆಯೇ ರೈತರು ಧರಣಿ ಕುಳಿತರು.

ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ಕೇಂದ್ರ ಸರಕಾರ ಅಧ್ಯಾದೇಶಗಳ ಮೂಲಕ ತಂದಿದ್ದ ಕೃಷಿ ಮಸೂದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯ ಸರಕಾರ ವಿಳಂಬಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ಆಡಳಿತವಿರುವ ಯಾವ ರಾಜ್ಯವೂ ಜಾರಿಗೊಳಿಸದ ರೈತ ವಿರೋಧಿ ಕಾಯ್ದೆಗಳನ್ನು ತರಾತುರಿಯಲ್ಲಿ ಜಾರಿಗೆ ತಂದರು ಎಂದು ದೂರಿದರು.

ಬೆಳಗಾವಿ ಅಧಿವೇಶನದಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿದ್ದರು. ಆದರೆ ಈಗ ಬೆಳಗಾವಿ ಅಧಿವೇಶನ ಮುಗಿದು ಬೆಂಗಳೂರಿನಲ್ಲಿ ಮತ್ತೂಂದು ಅಧಿವೇಶನ ಆರಂಭವಾದರೂ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಚಿಂತಿಸಿಲ್ಲ ಎಂದರು.

ಸ್ಥಳಕ್ಕೆ ಸಚಿವ ಗೋಪಾಲಯ್ಯ ಭೇಟಿ
ರೈತರ ಧರಣಿ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಗೋಪಾಲಯ್ಯ ಅವರನ್ನು ಸ್ಥಳಕ್ಕೆ ಕಳುಹಿಸಿ ಕೊಟ್ಟರು. ಮಧ್ಯಾಹ್ನದ ಬಳಿಕ ಸ್ಥಳಕ್ಕೆ ಆಗಮಿಸಿದ ಗೋಪಾಲಯ್ಯ ಅವರು ರೈತರ ಮನವಿಯ ಸ್ವೀಕರಿಸಿದರು. ಈ ವೇಳೆ ರೈತರು ರಾಗಿ ಖರೀದಿ ಕೇಂದ್ರ ಮುಚ್ಚಿರುವುದು ಸಹಿತ ಹಲವು ಸಮಸ್ಯೆಗಳನ್ನು ಸಚಿವರ ಮುಂದಿರಿಸಿದರು.

Advertisement

ಕೃಷಿ ಕಾಯ್ದೆ ಸಹಿತ ರೈತರ ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರೈತ ಮುಖಂಡರ ಸಭೆ ನಡೆಸುವ ಭರವಸೆಯನ್ನು ಸಚಿವರು ನೀಡಿದರು. ಬಳಿಕ ಪ್ರತಿಭಟನೆಯನ್ನು ವಾಪಸ್‌ ಪಡೆದುಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next