Advertisement

22ರಿಂದ ಕರ್ನಾಟಕ-ರೈಲ್ವೆ ರಣಜಿ

04:21 PM Dec 17, 2018 | |

ಶಿವಮೊಗ್ಗ: ನಗರದ ಕೆಎಸ್‌ಸಿಎ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಡಿ.22 ರಿಂದ ಡಿ.25 ರವರೆಗೆ ಕರ್ನಾಟಕ ತಂಡ ಮತ್ತು ರೈಲ್ವೆ ತಂಡಗಳ ನಡುವೆ ರಣಜಿ ಪಂದ್ಯ ನಡೆಯಲಿದೆ.

Advertisement

 ಕೆ.ಎಸ್‌.ಸಿ.ಎ. ಶಿವಮೊಗ್ಗ ವಲಯ ಸಂಚಾಲಕ ಡಿ.ಆರ್‌.ನಾಗರಾಜ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಬಿಸಿಸಿಐ ವತಿಯಿಂದ ಆಯೋಜನೆಗೊಂಡಿರುವ ಕರ್ನಾಟಕ ಹಾಗೂ ರೈಲ್ವೇಸ್‌ ನಡುವಿನ ಪಂದ್ಯ ನಗರದ ನವುಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯವಾಗಿದೆ. 2017ರ ಅಕ್ಟೋಬರ್‌ನಲ್ಲಿ ನಡೆದಿದ್ದ ಕರ್ನಾಟಕ ಮತ್ತು ಹೈದರಾಬಾದ್‌ ನಡುವಿನ ಪಂದ್ಯಕ್ಕೆ ಈ ಕ್ರೀಡಾಂಗಣ ಸಾಕ್ಷಿಯಾಗಿತ್ತು ಎಂದರು.

ಪಂದ್ಯದ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಸಿಐನ ಕ್ಯುರೇಟರ್‌ ಮೋಹನ್‌ ನಗರಕ್ಕೆ ಆಗಮಿಸಿ ಮೈದಾನದ ಪಿಚ್‌ ಅನ್ನು ಹದಗೊಳಿಸುತ್ತಿದ್ದಾರೆ. ಎರಡು- ಮೂರು ದಿನಗಳಲ್ಲಿ ಎರಡೂ ತಂಡದ ಆಟಗಾರರು ಶಿವಮೊಗ್ಗಕ್ಕೆ ಆಗಮಿಸಿ ಅಭ್ಯಾಸ ನಡೆಸಲಿದ್ದಾರೆ. ಈ ಋತುವಿನಲ್ಲಿ ಕರ್ನಾಟಕ ತಂಡಕ್ಕೆ ರಣಜಿ ಟೂರ್ನಿಯ 6ನೇ ಪಂದ್ಯ ಇದಾಗಿದೆ ಎಂದರು.

 ಈ ಬಾರಿ ರಣಜಿ ಪಂದ್ಯಾವಳಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ತಲಾ ಒಂದು ಗೆಲುವು, ಸೋಲು ಹಾಗೂ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಕರ್ನಾಟಕಕ್ಕೆ ಮುಂದಿನ ಪಂದ್ಯಗಳು ಮಹತ್ವದ್ದಾಗಿದೆ. ಆದರೆ ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ತಂಡದ ಬ್ಯಾಟ್ಸ್‌ಮನ್‌ ವಿಭಾಗದ ಆಧಾರಸ್ತಂಭ ಎಂದೇ ಗುರುತಿಸಿಕೊಂಡಿರುವ ಕರುಣ್‌ ನಾಯರ್‌ ಈ ಪಂದ್ಯ ಆಡುವುದು ಅನುಮಾನವಾಗಿದೆ.

ಗಾಯದ ಸಮಸ್ಯೆ ಎದುರಿಸುತ್ತಿರುವ ಕರುಣ್‌ ನಾಯರ್‌ ರೈಲ್ವೇಸ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾದರೆ ಅವರ ಸ್ಥಾನಕ್ಕೆ ಮನೀಶ್‌ ಪಾಂಡೆ ಆಯ್ಕೆಯಾಗಲಿದ್ದಾರೆ. ಇನ್ನು ತಂಡದಲ್ಲಿ ಟಾಪ್‌ ಆಟಗಾರರಾಗಿ ಮಯಾಂಕ್‌ ಅಗರ್‌ವಾಲ್‌,
ವಿನಯ್‌ ಕುಮಾರ್‌, ಅಭಿನವ್‌ ಮಿಥುನ್‌, ಸ್ಟುವರ್ಟ್‌ ಬಿನ್ನಿಯಂತ ಅನುಭವಿ ಆಟಗಾರರ ದಂಡೇ ಇದೆ. ಕರುಣ್‌ ನಾಯರ್‌ ಅಲಭ್ಯದ ನಡುವೆಯೂ ರೈಲ್ವೇಸ್‌ ವಿರುದ್ಧ ನಾಯಕ ವಿನಯ್‌ ಕುಮಾರ್‌ ನೇತೃತ್ವದಲ್ಲಿ ಸಮರ್ಥ ಆಟಗಾರರ ತಂಡ ಕಣಕ್ಕಿಳಿಯಲಿದೆ ಎಂದರು.
 
ರೈಲ್ವೇಸ್‌ ತಂಡ ಐಪಿಎಲ್‌ನಲ್ಲಿ ಆಡಿದ ಪ್ರಮುಖ ಆಟಗಾರರನ್ನು ಒಳಗೊಂಡಿದ್ದು ನಿತಿನ್‌ ಬಿಲ್ಲೆ, ಪ್ರಥಮ್‌ ಸಿಂಗ್‌, ಮಹೇಶ್‌ ರಾವತ್‌, ಫಯಾಜ್‌ ಅಹ್ಮದ್‌, ಮನಿಷ್‌ ರಾವ್‌, ಸೌರಬ್‌ ವಕಾಸ್ಕರ್‌, ಅಭಿನವ್‌ ದೀಕ್ಷಿತ್‌, ಪ್ರಶಾಂತ್‌ ಗುಪ್ತ, ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

Advertisement

 ಅನುರೀತ್‌ ಸಿಂಗ್‌, ಮಧುರ್‌ ಖತ್ರಿ, ಕರನ್‌ ಠಾಕೂರ್‌, ಅವಿನಾಶ್‌ ಯಾದವ್‌, ಮಂಜೀತ್‌ ಸಿಂಗ್‌, ಶಿವಕಾಂತ್‌ ಶುಕ್ಲಾ, ಎಸಿಪಿ ಮಿಶ್ರಾ, ಪ್ರಮುಖ ಬೌಲರ್‌ಗಳಾಗಿದ್ದಾರೆ. ಅರಿಂದಮ್‌ ಗೋಷ್‌, ಹರ್ಷ ತ್ಯಾಗಿ ಅವರು ತಂಡದ ಅಲ್‌ರೌಂಡ್‌
ಆಟಗಾರರಾಗಿದ್ದಾರೆ ಎಂದರು.

 ಪಂದ್ಯ ವೀಕ್ಷಣೆಗೆ ಪ್ರವೇಶ ಶುಲ್ಕ ಇಲ್ಲ. ಹೀಗಾಗಿ ಹೆಚ್ಚಿನ ಜನರನ್ನು ನಿರೀಕ್ಷಿಸಲಾಗಿದ್ದು, ವೀಕ್ಷಕರಿಗೆ ಕ್ರೀಡಾಂಗಣದ ಸುತ್ತಲೂ ಹುಲ್ಲುಹಾಸಿನ ಮೇಲೆ ಕೂರುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 2 ದ್ವಾರಗಳ ಮೂಲಕ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಮೊದಲ ದ್ವಾರದಲ್ಲಿ ಸಾರ್ವಜನಿಕರಿಗೆ ಹಾಗೂ ಇನ್ನೊಂದರಲ್ಲಿ ಆಹ್ವಾನಿತರಿಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next