Advertisement

ಕರ್ನಾಟಕ ಕತಾರ್‌ ಸಂಘ; ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ

01:41 PM Nov 11, 2023 | Team Udayavani |

ದೋಹಾ:ಇಲ್ಲಿನ ಕರ್ನಾಟಕ ಕತಾರ್‌ ಸಂಘದ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವವನ್ನು ನ.3 ರಂದು ಅದ್ದೂರಿಯಾಗಿ ಆಚರಿಸಲಾಯಿತು. ದೋಹಾದ ಡಿಪಿಎಸ್‌ ಶಾಲೆಯ ಸಭಾಂಗಣದಲ್ಲಿ 1500ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಕನ್ನಡದ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಅವರ ಜೋಗದ ಸಿರಿ ಗೀತೆಯನ್ನು ಹಾಡಿ, ಸಂಘದ ಆಡಳಿತ ಮಂಡಳಿಯಿಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

Advertisement

ಸಂಘದ ಅಧ್ಯಕ್ಷರಾದ ಮಹೇಶ್‌ ಗೌಡ ಅವರು ಸ್ವಾಗತಿಸಿ, ಮಾತನಾಡಿ ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಜತೆಗೆ ಮುಂದಿನ ವರ್ಷ ಕರ್ನಾಟಕ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ, ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಸಭೆಗೆ ತಿಳಿಸಿದರು. ಈ ವೇಳೆ ಕತಾರ್‌ನಲ್ಲಿನ ಭಾರತೀಯ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿರುವ ಶಿಕ್ಷಕ-ಶಿಕ್ಷಕಿಯರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡದ ಬರಹಗಾರರಾದ ಜೋಗಿ, ಸ್ಯಾಂಡಲ್‌ವುಡ್‌ನ‌ ಕ್ರೇಜಿಸ್ಟಾರ್‌ ವಿ. ರವಿಚಂದ್ರನ್‌ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಕತಾರ್‌ ಈ ಪ್ರವಾಸ ನೆನಪಿನಲ್ಲಿ ಉಳಿಯುವಂತದ್ದು ಎಂದು ತಿಳಿಸಿದರು. ಜತೆಗೆ ತಮ್ಮ ತಂದೆಯ ಜೀವನ ಶೈಲಿಯನ್ನು ನೆನಪಿಸಿಕೊಂಡ ಅವರು, ಮುಂಬರುವ ದಿನಗಳಲ್ಲಿ ಪ್ರೇಮಲೋಕ ಚಿತ್ರದ ಭಾಗ-2 ಅನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.

ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್‌, ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು, ಐಸಿಬಿಫ್‌ನ ಅಧ್ಯಕ್ಷ ಶಾನವಸ್‌ ಬವ, ಕರ್ನಾಟಕ ಸಂಘದ ಸಲಹಾ ಮಂಡಳಿ ಸದಸ್ಯರು, ಸೋದರ ಸಂಸ್ಥೆಗಳ ಅಧ್ಯಕ್ಷರು ರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡರು.

Advertisement

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ದೀಪಕ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಆಡಳಿತ ಮಂಡಳಿ ಸದಸ್ಯರಾದ ಸಂಜನಾ ಜೀವನ್‌ ಅವರು ಸಂಯೋಜಿಸಿದ ರವಿಚಂದ್ರನ್‌ ಅವರ ಹದಿನಾರು ಪ್ರಖ್ಯಾತ ಹಾಡುಗಳ ನೃತ್ಯ ಮಾಲೆಯು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಹಾಗೂ ರವಿಚಂದ್ರನ್‌ ಅವರಿಂದ ಮೆಚ್ಚುಗೆ ಪಡೆಯಿತು.

ಉದಯೋನ್ಮುಖ ಗಾಯಕರಾದ ಭೂಮಿಕಾ ಮಧುಸೂದನ್‌ ಹಾಗೂ ಶ್ರೀನಿಧಿ ಶಾಸ್ತ್ರೀ ಅವರು ಸಂಗೀತ ಸಂಜೆ ನೆಡೆಸಿಕೊಟ್ಟರು. ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ಬಂಟ್ಸ್‌ ಕತಾರ್‌, ಮಂಗಳೂರ ಕಲ್ಚರಲ್‌ ಅಸೋಸಿಯೇಶನ್‌ ಮಂಗಳೂರು ಕ್ರಿಕೆಟ್‌ ಕ್ಲಬ್‌ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸವಿಪ್ರಕಾಶ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸುಶೀಲ ಸುನಿಲ್‌ ಅವರು ಧನ್ಯವಾದ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next