ಬೆಂಗಳೂರು: ಉದ್ಯಮದ ಬೇಡಿಕೆಗೆ ಅನುಗುಣವಾಗಿ ರಾಜ್ಯದ ಯುವಕರಿಗೆ ಸುಮಾರು 50ಕ್ಕೂ ಹೆಚ್ಚು ಅಲ್ಪಾವ ಧಿಯ ಕೋರ್ಸ್‌ಗಳೊಂದಿಗೆ ಏಳು ಕೌಶಲ ವಲಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಒದಗಿಸಲು ಅತ್ಯಾಧುನಿಕ ಸೌಲಭ್ಯವನ್ನು ರೂಪಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್ ಆರ್.ಪಾಟೀಲ್ ತಿಳಿಸಿದರು.
ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕಿಮುರಾ ಫೌಂಡ್ರಿ, ಜಪಾನ್ ಸಹಯೋಗದೊಂದಿಗೆ ಕಾಸ್ಟಿಂಗ್ ಟೆಕ್ನಾಲಜಿ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎಸೆಸೆಲ್ಸಿಯಿಂದ ಪದವಿ ಶಿಕ್ಷಣ ಪಡೆದವರೆಲ್ಲರಿಗೂ ಆಯಾಯ ವಿಭಾಗಗಳಲ್ಲಿ ಕೌಶಲ ತರಬೇತಿ ನೀಡಲಾಗುತ್ತಿದೆ. ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಅನ್ನು ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ಇದರ ವಿಸ್ತರಣ ಕೇಂದ್ರಗಳು ಗೌರಿಬಿದನೂರು ಮತ್ತು ಕಾರ್ಕಳದಲ್ಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ವಿವಿಧೆಡೆ ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ಉದ್ಯೋಗ ಆಧಾರಿತ ಕೋರ್ಸ್‌ಗಳಿಗೆ ಕೌಶಲ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉದ್ಯೋಗ ಪಡೆಯುತ್ತಿದ್ದಾರೆ. ಅನೇಕರು ಸ್ವಯಂ ಉದ್ಯಮಿಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂದರು.
ಕಿಮುರಾ ಫೌಂಡ್ರಿಯ ಅಧ್ಯಕ್ಷ ಕಾಜುಟೋಶಿ ಕಿಮುರಾ ಮಾತನಾಡಿ, ಭಾರತದೊಂದಿಗೆ ಸಹಭಾಗಿತ್ವ ಹೊಂದಿರುವುದು ನಮಗೆ ಹೆಮ್ಮೆಯ ವಿಷಯ. ಇಲ್ಲಿ ತರಬೇತಿ ಪಡೆದವರಿಗೆ ಜಪಾನ್ ನಲ್ಲಿ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿದರು.