Advertisement

ಸಿದ್ಧವಾದರೂ ಬಿಡುಗಡೆ ಇಲ್ಲ; ಮುಗಿಯದ ಕೈ ಟಿಕೆಟ್‌ ಬಿಕಟ್ಟು

06:00 AM Apr 15, 2018 | Team Udayavani |

ಬೆಂಗಳೂರು: ನಾಯಕರ ಹಗ್ಗ ಜಗ್ಗಾಟದ ನಡುವೆ ಕಡೆಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಸಿದ್ದವಾದರೂ ಬಿಡುಗಡೆಯಾಗಿಲ್ಲ.
ಸತತ ಎರಡನೇ ದಿನವಾದ ಶನಿವಾರ ಸಹ ಇಡೀ ದಿನ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಲಾಯಿತಾದರೂ ಒಮ್ಮತಕ್ಕೆ ಬಾರಲು ಸಾಧ್ಯವಾಗಲಿಲ್ಲ. ಭಾನುವಾರ ಮತ್ತೂಮ್ಮೆ ಸಭೆ ಸೇರಿ ಅಂತಿಮಗೊಳಿಸಲಾಗುವುದು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ 223 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಭಾನುವಾರ ಮಧ್ಯಾಹ್ನ ಅಧಿಕೃತವಾಗಿ ಪ್ರಕಟಗೊಳ್ಳಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Advertisement

ಸಾಕಷ್ಟು ಅಳೆದು ತೂಗಿ “ಟಾರ್ಗೆಟ್‌ 125′ ಗುರಿಯೊಂದಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗಿದೆ. ಕೆಲವು ಆಕಾಂಕ್ಷಿಗಳಿಗೆ ಕ್ಷೇತ್ರ-ಅದಲು-ಬದಲು ಆಗುವ ಸಾಧ್ಯತೆಯೂ ಇದೆ. ಕ್ಷೇತ್ರ ನಿಗದಿ ಪಡಿಸುವ ಕುರಿತಂತೆ ಭಾನುವಾರ ಬೆಳಗ್ಗೆ ಸಭೆ ನಡೆಸಿ ಮಧ್ಯಾಹ್ನ ಅಧಿಕೃತ ಪತ್ರಿಕಾಗೋಷ್ಠಿ ನಡೆಸಿ ಪಟ್ಟಿ ಬಿಡುಗಡೆ ಮಾಡಲು ಕೈ ನಾಯಕರು ತೀರ್ಮಾನಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ಮ್ಯಾರಾಥಾನ್‌ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಭಾರಿ ಪೈಪೋಟಿ ನಡೆದಿತ್ತು.

ಪಕ್ಷದ ಹಾಲಿ ಶಾಸಕರಲ್ಲಿ ಏಳು ಸಚಿವರೂ ಸೇರಿ 27 ಜನರಿಗೆ ಟಿಕೆಟ್‌ ನೀಡದಿರಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನಿರ್ಧರಿಸಿದ್ದರು. ಆದರೆ, ಅಷ್ಟೊಂದು ಜನ ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪಿದರೆ, ಬಂಡಾಯ ಹಾಗೂ ಪಕ್ಷಾಂತರ ಪರ್ವಕ್ಕೆ ನಾಂದಿಯಾಗುತ್ತದೆ ಎಂದು ರಾಜ್ಯ ನಾಯಕರು ರಾಹುಲ್‌ ಗಾಂಧಿ ಮನವೊಲಿಸಿ ವಯೋಮಿತಿ ಹಾಗೂ ಆರೋಪ ಎದುರಿಸುತ್ತಿರುವ ಏಳು ಜನ ಹಾಲಿ ಶಾಸಕರಿಗೆ ಟಿಕೆಟ್‌ ನೀಡದಿರಲು ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಟಿಕೆಟ್‌ ಕೈ ತಪ್ಪುವ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಬಂಡಾಯ ಏಳದಂತೆ ನೋಡಿಕೊಳ್ಳಲು ಅವರೊಂದಿಗೆ ಮಾತುಕತೆ ನಡೆಸಿ ಅಧಿಕೃತ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ತರಿಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ್‌, ಕಲಬುರ್ಗಿ ದಕ್ಷಿಣ ಕ್ಷೇತ್ರದ ಜಿ. ರಾಮಕೃಷ್ಣ, ಕಿತ್ತೂರು ಕ್ಷೇತ್ರದ ಡಿ.ಬಿ. ಇನಾಂದಾರ್‌, ಹಾನಗಲ್‌ ಕ್ಷೇತ್ರದ ಮನೋಹರ್‌ ತಹಸೀಲ್ದಾರ್‌, ಬಾಗಲಕೋಟೆಯ ಎಚ್‌.ವೈ. ಮೇಟಿ, ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಟಿಕೆಟ್‌ ತಪ್ಪಿದೆ ಎಂದು ತಿಳಿದು ಬಂದಿದೆ.

Advertisement

ಖರ್ಗೆ ಪಟ್ಟು
ವಲಸೆ ಬಂದಿರುವ ಅಶೋಕ್‌ ಖೇಣಿ, ಭೀಮಾನಾಯ್ಕ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್‌ ನೀಡದಂತೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಾವು ಕರೆತಂದಿರುವ ವಲಸಿಗರಿಗೆ ಟಿಕೆಟ್‌ ನೀಡಲೇಬೇಕೆಂದು ಪಟ್ಟು ಹಿಡಿದಿದ್ದರಿಂದ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ ಎಂದು ಹೇಳಲಾಗಿದೆ. ಪುಲಕೇಶಿನಗರ, ಹಗರಿಬೊಮ್ಮನಹಳ್ಳಿ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಇಬ್ಬರೂ ನಾಯಕರ ಬೆಂಬಲಿತ ಆಕಾಂಕ್ಷಿಗಳಿಗೆ ಪರ್ಯಾಯ ಕ್ಷೇತ್ರಗಳನ್ನು ಗುರುತಿಸಿ ಸಮಾಧಾನ ಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸಂಸದ ಬಿ. ಶ್ರೀರಾಮುಲು ಅವರು ಸ್ಪರ್ಧಿಸುವ ಕ್ಷೇತ್ರದ ಲೆಕ್ಕಾಚಾರದ ಮೇಲೆ ಅಭ್ಯರ್ಥಿಗಳನ್ನು ಅದಲು ಬದಲು ಮಾಡುವ ಕುರಿತು ಸಿಇಸಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾಗಿದ್ದರೂ, ಕೊನೆ ಗಳಿಗೆಯಲ್ಲಿ ಕ್ಷೇತ್ರ ಬದಲಾಯಿಸುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರದಲ್ಲಿ ಬಳ್ಳಾರಿ ಗ್ರಾಮೀಣ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಕಾಂಗ್ರೆಸ್‌ ಲೆಕ್ಕಾಚಾರ ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ.

ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡಿದರೆ, ಮೊಳಕಾಲ್ಮೂರು ಕ್ಷೇತ್ರದ ಹಾಲಿ ಶಾಸಕ ತಿಪ್ಪೆಸ್ವಾಮಿಯನ್ನು ಪಕ್ಷಕ್ಕೆ ಕರೆತಂದು ರಾಮುಲು ವಿರುದ್ಧ ಸ್ಪರ್ಧಿಸಲು ಟಿಕೆಟ್‌ ನೀಡುವುದು. ಒಂದು ವೇಳೆ ತಿಪ್ಪೇಸ್ವಾಮಿ ಪಕ್ಷ ಸೇರದಿದ್ದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಎನ್‌.ವೈ ಗೋಪಾಲಕೃಷ್ಣ ಅವರನ್ನು ರಾಮುಲು ವಿರುದ್ಧ ಸ್ಪರ್ಧಿಸಲು ಅವಕಾಶ ಕಲ್ಪಿಸಿ, ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ವಿ.ಎಸ್‌. ಉಗ್ರಪ್ಪ ಅವರನ್ನು ಕಣಕ್ಕಿಳಿಸುವ ಕುರಿತು ಕಾರ್ಯತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಹ್ಯಾರಿಸ್‌ಗೂ ಡೌಟು
ಪುತ್ರ ನಲಪಾಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ಗೂ ಟಿಕೆಟ್‌ ನೀಡಬಾರದು ಎಂದು ಚರ್ಚೆಯಾಗಿದ್ದು, ಆದರೂ ಹ್ಯಾರಿಸ್‌ ಕೊನೆಯ ಪ್ರಯತ್ನ ಮುಂದುವರೆಸಿದ್ದಾರೆ .ಹ್ಯಾರಿಸ್‌ ಬದಲು ಜಯನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂ.ಸಿ. ವೇಣುಗೋಪಾಲ್‌ಗೆ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಜಯನಗರ ಕ್ಷೇತ್ರದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್‌ ದೊರೆಯುವುದು ಖಾತ್ರಿಯಾಗಿರುವುದರಿಂದ ವೇಣುಗೋಪಾಲ್‌ಗೆ ಪರ್ಯಾಯ ಕ್ಷೇತ್ರ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ. ಶ್ರೀನಿವಾಸ್‌ಗೆ ಟಿಕೆಟ್‌ ನೀಡಬೇಕೆಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಆದರೆ, ಬಗರ್‌ ಹುಕುಂ ಹಕ್ಕುಪತ್ರ ನೀಡುವ ಆರೋಪದಲ್ಲಿ ಅಶೋಕ್‌ ಜೊತೆಗೆ ಎಂ. ಶ್ರೀನಿವಾಸ್‌ ಹೆಸರೂ ಇದೆ  ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಯಿತು ಎನ್ನಲಾಗಿದೆ. ಅವರ ಬದಲಿಗೆ ಗುರಪ್ಪ ನಾಯ್ಡು ಹಾಗೂ ಎಂ.ಜಿ. ಬಾಲಾಜಿ ನಡುವೆ ಟಿಕೆಟ್‌ಗೆ ಪೈಪೋಟಿ ನಡೆದಿದೆ ಎಂದು ಹೇಳಲಾಗಿದೆ.

ರಾಹುಲ್‌ ವಿದೇಶಕ್ಕೆ:
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದರಿಂದ 223 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಏಕಕಾಲಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪಟ್ಟಿ ಪ್ರಕಟಿಸುವ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ನಾಯಕರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಟಿಕೆಟ್‌ ಮಿಸ್‌?
– ತರೀಕೆರೆ – ಶ್ರೀನಿವಾಸ್‌,
– ಕಲಬುರ್ಗಿ ದಕ್ಷಿಣ – ಜಿ. ರಾಮಕೃಷ್ಣ
-ಕಿತ್ತೂರು – ಡಿ.ಬಿ. ಇನಾಂದಾರ್‌
-ಹಾನಗಲ್‌- ಮನೋಹರ್‌ ತಹಸೀಲ್ದಾರ್‌
– ಬಾಗಲಕೋಟೆ- ಎಚ್‌.ವೈ. ಮೇಟಿ
– ಬಾದಾಮಿ – ಬಿ.ಬಿ. ಚಿಮ್ಮನಕಟ್ಟಿ
ಕಗ್ಗಂಟು
-ಬೀದರ್‌ ದಕ್ಷಿಣ- ಅಶೋಕ್‌ ಖೇಣಿ
-ಹಗರಿಬೊಮ್ಮನಹಳ್ಳಿ-ಭೀಮಾನಾಯ್ಕ
– ಪುಲಕೇಶಿನಗರ- ಅಖಂಡ ಶ್ರೀನಿವಾಸಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next