Advertisement

karnataka polls 2023; ನಾಯಕರ ಮತಬೇಟೆ ಆಡಬಲ್ಲರೇ ಸುದೀಪ್‌?

11:58 PM Apr 09, 2023 | Team Udayavani |

ರಾಯಚೂರು: ಚುನಾವಣೆಯಲ್ಲಿ ಜಾತಿಗಳ ಪ್ರಾಬಲ್ಯ ಅಲ್ಲಗಳೆಯುವಂತಿಲ್ಲ. ಈ ಬಾರಿ ಬಿಜೆಪಿ ನಾಯಕ ಸಮುದಾಯದ ಮತಗಳ ಮೇಲೆ ತುಸು ಹೆಚ್ಚೇ ನಿಗಾ ವಹಿಸಿದ್ದು, ಈಚೆಗೆ ನಟ ಸುದೀಪ್‌ ಕೂಡ ಸಿಎಂ ಪರ ಬ್ಯಾಟಿಂಗ್‌ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯ ಸಾಕಷ್ಟು ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದ್ದರೆ, 12 ಕ್ಷೇತ್ರ ಗಳು ಎಸ್‌ಟಿಗೆ ಮೀಸಲಾಗಿವೆ. ಪರಿಶಿಷ್ಟ ಪಂಗಡ ಸಮುದಾಯದ ಮೀಸಲಾತಿಯನ್ನು ಶೇ.3ರಿಂದ ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಸುದೀರ್ಘ‌ ಹೋರಾಟ ನಡೆಸಲಾಗಿತ್ತು. ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಬಿಜೆಪಿ ಸರ್ಕಾರ ಶೇ.7ರಷ್ಟು ಮೀಸಲಾತಿ ಹೆಚ್ಚಿಸುವ ಮೂಲಕ ಆ ಸಮುದಾಯದ ವಿಶ್ವಾಸ ಪಡೆಯಲೆತ್ನಿಸಿತು.

ಈಗ ನಟ ಕಿಚ್ಚ ಸುದೀಪ್‌ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲಿನ ಪ್ರೀತಿಗಾಗಿ ಪ್ರಚಾರ ಮಾಡುವುದಾಗಿ ಹೇಳಿರುವುದು ಕೂಡ ನಾಯಕ ಸಮುದಾಯದ ಮತ ಬೇಟೆಗಾಗಿಯೇ ಎನ್ನಲಾಗುತ್ತಿದೆ. ಆದರೆ, ಈ ಸಮುದಾಯ ಕೇವಲ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿಯೂ ಪ್ರಭಾವಿ ಕಾರ್ಯಕರ್ತರು, ಮುಖಂಡರಿದ್ದಾರೆ.

ರಾಜ್ಯದಲ್ಲಿ ನಾಯಕ ಸಮುದಾಯದ ಜನಸಂಖ್ಯೆ 60 ಲಕ್ಷಕ್ಕೂ ಅಧಿ ಕ ಎಂದು ಅಂದಾಜಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲೇ ಏಳರಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರಗಳು ಎಸ್‌ಟಿ ಮೀಸಲಾಗಿದ್ದು, ಜಿಲ್ಲೆಯಲ್ಲಿಯೂ 1.5 ಲಕ್ಷ ಜನಸಂಖ್ಯೆಯಿದೆ. ಸಿನಿಮಾ ನಟರನ್ನು ಆರಾ ಧಿಸುವ ಜನ ಈ ಭಾಗದಲ್ಲಿದ್ದಾರೆ. ಸಿರವಾರ ಸಮೀಪದ ಕುರಕುಂದ ಗ್ರಾಮದಲ್ಲಿ ಕಳೆದ ವರ್ಷ ನಟ ಸುದೀಪ್‌ ಪ್ರತಿಮೆ ನಿರ್ಮಿಸಿ ದೇವಸ್ಥಾನವನ್ನೇ ಕಟ್ಟಲು ಅಭಿಮಾನಿಗಳು ಮುಂದಾಗಿದ್ದರು. ಕೊನೆಗೆ ಸುದೀಪ್‌ ಅವರೇ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಇಂಥ ಅಭಿಮಾನ ಮತವಾಗಿ ಮಾರ್ಪಡಲಿದೆಯೇ ಎಂಬ ಲೆಕ್ಕಾಚಾರ ಶುರುವಾಗಿದೆ.

ವಾಸ್ತವ ಚಿತ್ರಣವೇ ಬೇರೆ
ನೆಚ್ಚಿನ ನಾಯಕ ಎಂಬ ವಿಷಯ ಬಂದಾಗ ಇರುವ ಅಭಿಮಾನ ರಾಜಕೀಯ ವಿಚಾರಕ್ಕೆ ಬಂದಾಗ ಗೌಣವಾಗುತ್ತದೆ. ಹಿಂದೆ ತೆಲುಗಿನ ಖ್ಯಾತ ನಟ ಪವನ್‌ ಕಲ್ಯಾಣ ಕೂಡ ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಆದರೆ, ಆಗ ಬಿಜೆಪಿಗೆ ಸೋಲಾಗಿತ್ತು. ಅಷ್ಟೇ ಯಾಕೆ ಮಳೆ ಹುಡುಗಿ ಪೂಜಾ ಗಾಂಧಿ  ಬಿಎಸ್ಸಾರ್‌ ಪಕ್ಷದಿಂದ ರಾಯಚೂರು ನಗರ ಕ್ಷೇತ್ರದಿಂದ ಸ್ಪಧಿ ìಸಿ ಠೇವಣಿ ಕಳೆದುಕೊಂಡಿದ್ದರು. ಈಚೆಗೆ ನಡೆದ ಮಸ್ಕಿ ಉಪಚುನಾವಣೆಯಲ್ಲಿ ಲಂಬಾಣಿ ಸಮಾಜದ ಗಾಯಕಿ ಮಂಗ್ಲಿ ಬಂದು ಪ್ರಚಾರ ಮಾಡಿದ್ದರೂ ಬಿಜೆಪಿಗೆ ಸೋಲಾಗಿತ್ತು. ಚುನಾವಣೆಗಳು ಸ್ಥಳೀಯ ವಿಷಯ, ವ್ಯಕ್ತಿಯಾಧಾರಿತವಾಗಿಯೇ ಇರುವುದರಿಂದ ಸುಲಭಕ್ಕೆ ಮತದಾರ ಬದಲಾಗುವುದು ಕಷ್ಟದ ವಿಚಾರ. ಹಾಗಂತ ನೆಚ್ಚಿನ ನಾಯಕರು ಬಂದು ಪ್ರಚಾರ ಮಾಡಿದಾಗ ಅಲ್ಪಸ್ವಲ್ಪವಾದರೂ ಬದಲಾವಣೆ ಆದರೂ ಆಗಬಹುದು. ಈಗ ಸುದೀಪ್‌ ಕೂಡ ಪ್ರಚಾರಕ್ಕೆ ಬರುವ ಮಾತನ್ನಾಡಿದ್ದಾರೆ. ಅವರು ಯಾವ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ; ಫಲಿತಾಂಶ ಏನಾಗಲಿದೆ ಕಾದು ನೋಡಬೇಕಿದೆ.

Advertisement

ನಾಯಕ ಸಮುದಾಯದ ಮತದಾರರು ಬಹಳ ಪ್ರಜ್ಞಾವಂತರಿದ್ದಾರೆ. ಕಿಚ್ಚ ಸುದೀಪ್‌ರನ್ನು ಒಬ್ಬ ನಟನಾಗಿ ಎಲ್ಲರೂ ಪ್ರೀತಿಸಿ ಗೌರವಿಸುವಂತೆ ನಾಯಕ ಸಮಾಜವು ಗೌರವಿಸುತ್ತದೆ. ಹಾಗಂತ ಚುನಾವಣೆಯಲ್ಲಿ ಇಡೀ ಸಮುದಾಯ ಅವರ ಕರೆಗೆ ಓಗೊಡಲಿದೆ ಎಂಬುದೆಲ್ಲ ಅಸಂಭವ. ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ, ಪಕ್ಷಗಳ ಕೊಡುಗೆ, ಅಭಿವೃದ್ಧಿಗಳೇ ಮುಖ್ಯವಾಗುತ್ತದೆ.
-ರಘುವೀರ ನಾಯಕ, ವಾಲ್ಮೀಕಿ ಸಮಾಜದ ಮುಖಂಡ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next