Advertisement

ಕರ್ನಾಟಕ –ಉತ್ತರ ಪ್ರದೇಶದ ನಡುವೆ ಸಾವಿರಾರು ವರ್ಷಗಳ ಸಾಂಸ್ಕೃತಿಕ ಸಂಬಂಧ: ಸಿಎಂ ಯೋಗಿ

08:26 PM Dec 15, 2022 | |

ರಾಮನಗರ : ಕರ್ನಾಟಕದ ರಾಮನಗರ ಜಿಲ್ಲೆಯಿಂದ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ‌ ನೇತೃತ್ವದಲ್ಲಿ ಇಲ್ಲಿಗೆ ಆಗಮಿಸಿರುವ 150 ಯಾತ್ರಾರ್ಥಿಗಳ ತಂಡವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿದರು.

Advertisement

ಒಂದು ಗಂಟೆಗೂ ಹೆಚ್ಚು ಕಾಲ ನಿಯೋಗದ ಜತೆಗಿದ್ದ ಅವರು, ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಂಡು, ಹಲವು ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಯೋಗಿ ಅವರಿಗೆ ರಾಮನಗರದಲ್ಲಿ ತಯಾರಿಸಿದ ರೇಷ್ಮೆ ಶಾಲು, ಹಾರ ಮತ್ತು ಪೇಟಾಗಳನ್ನು ಹಾಕಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಆದಿಚುಂಚನಗಿರಿ ಮಠ, ಕಾಲಬೈರವ ಮತ್ತು ಮಂಜುನಾಥ ಸ್ವಾಮಿ ಹಾಗೂ ಉತ್ತರ ಪ್ರದೇಶದ ನಡುವೆ ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ಸಂಬಂಧವಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಗಟ್ಟಿ ಆಗುತ್ತಿದೆ’ ಎಂದರು.

‘ಎರಡೂ ರಾಜ್ಯಗಳಲ್ಲಿ ನಾಥ ಸಂಪ್ರದಾಯದ ಪ್ರಭಾವ ಇದೆ. ನಮ್ಮ ನಡುವೆ ಕೊಡುಕೊಳ್ಳುವಿಕೆ ಮತ್ತಷ್ಟು ಹೆಚ್ಚಾಗಬೇಕು’ ಎಂದು ಅವರು ಅಭಿಪ್ರಾಯ ಪಟ್ಟರು.

ಅಶ್ವತ್ಥನಾರಾಯಣ ಅವರು ಮಾತನಾಡಿ, ‘ರಾಮನಗರದ ಪುರಾತನ ರಾಮದೇವರ ಬೆಟ್ಟವನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಚಾಲನೆ ನೀಡಲು ರಾಜ್ಯಕ್ಕೆ ಆಗಮಿಸಬೇಕು ಮತ್ತು ಮಾರ್ಗದರ್ಶನ ಮಾಡಬೇಕು. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಂಗಿತವೂ ಆಗಿದೆ’ ಎಂದು ಯೋಗಿ ಆದಿತ್ಯನಾಥ್ ಅವರನ್ನು ಕೋರಿದರು. ಈ ಸಂದರ್ಭದಲ್ಲಿ ಸಚಿವರು ರಾಮನಗರ ಮತ್ತು ರಾಮನ ನಡುವಿನ ಬಾಂಧವ್ಯವನ್ನು ವಿವರಿಸಿದರು. ರಾಮನಗರದ ಭಕ್ತರು ಜಯಘೋಷಗಳನ್ನು ಮೊಳಗಿಸಿದರು.

Advertisement

ಕಾರ್ಯಕ್ರಮದಲ್ಲಿ ಆದಿತ್ಯನಾಥ್ ಅವರ ಕಚೇರಿಯಿಂದ ಪ್ರತಿಯೊಬ್ಬರಿಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next