ಹೊಸದಿಲ್ಲಿ : ‘ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಜನಾದೇಶ ಕಾಂಗ್ರೆಸ್ ವಿರುದ್ಧವಾಗಿತ್ತು; ಆದರೂ ಆ ಪಕ್ಷ ತನ್ನ ಸೋಲನ್ನೇ ಗೆಲುವಾಗಿ ಸಂಭ್ರಮಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
‘ತನ್ನ ಪಕ್ಷದ ಅನೇಕ ಸಚಿವರು ಚುನಾವಣೆಯಲ್ಲಿ ಸೋತಿರುವ ಹೊರತಾಗಿಯೂ ತಾನೇಕೆ ಈ ಸೋಲಿನಲ್ಲೂ ವಿಜಯದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದೇನೆ ಎಂಬುದನ್ನು ಕಾಂಗ್ರೆಸ್ ಕರ್ನಾಟಕದ ಜನತೆಗೆ ತಿಳಿಸಬೇಕು’ ಎಂದು ಶಾ ಆಗ್ರಹಿಸಿದರು.
“ನಿಜಕ್ಕಾದರೆ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ಮಾತ್ರವೇ ಸಂಭ್ರಮಿಸುತ್ತಿವೆ; ಹೊರತು ಕರ್ನಾಟಕದ ಜನರಲ್ಲ; ಏಕೆಂದರೆ ತಾವು ಕಾಂಗ್ರೆಸ್ ವಿರುದ್ಧ ಜನಾದೇಶ ಕೊಟ್ಟಿದ್ದೇವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಶಾ ಸುದ್ದಿಗಾರರಿಗೆ ಹೇಳಿದರು.
‘ಸೋಲನ್ನು ವಿಜಯವನ್ನಾಗಿ ಆಚರಿಸುವ ಕಾಂಗ್ರೆಸ್‌ನ ಈ ಹೊಸ ಉಪಾಯ 2019ರ ಮಹಾ ಚುನಾವಣೆಯ ವರೆಗೂ ಜಾರಿಯಲ್ಲಿರುವುದು; ಆ ಬಳಿಕ ಅದರಿಂದ ಬಿಜೆಪಿಗೇ ಲಾಭವಾಗಲಿದೆ’ ಎಂದು ಶಾ ನುಡಿದರು.
“ಕಾಂಗ್ರೆಸ್‌ಗೆ ಈಗ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಇಲೆಕ್ಟ್ರಾನಿಕ್ ಓಟಿಂಗ್ ಮಶೀನ್‌ಗಳ ಬಗ್ಗೆ ನಂಬಿಕೆ ಬರತೊಡಗಿದೆ ಎಂದ ಅಮಿತಾ ಶಾ, ಕಾಂಗ್ರೆಸ್ ಸೋತಾಗೆಲ್ಲ ಅದಕ್ಕೆ ಈ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವಾಗಿ ಬಿಡುವುದು ಆಶ್ಚರ್ಯಕರ” ಎಂದು ಹೇಳಿದರು.
ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ತನಗೆ ಏಳು ದಿನಗಳ ಕಾಲಾವಕಾಶ ಬೇಕೆಂದು ಬಿ ಎಸ್ ಯಡಿಯೂರಪ್ಪ ಹೇಳಿರುವುದಾಗಿ ಸುಪ್ರೀಂ ಕೋರ್ಟಿನಲ್ಲಿ ಕಾಂಗ್ರೆಸ್ ವಕೀರಲು ಸುಳ್ಳು ಕೂಡ ಹೇಳಿದರು ಎಂದು ಶಾ ಆಕ್ರೋಶ ವ್ಯಕ್ತಪಡಿಸಿದರು.