Advertisement

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು

09:08 AM Jan 02, 2021 | Team Udayavani |

ಉಡುಪಿ/ ಪುತ್ತೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಕರಾವಳಿಯಿಂದ ಮಧೂರು ಬಾಲಸುಬ್ರಹ್ಮಣ್ಯಂ, ಟಿ. ರಂಗ ಪೈ ಮತ್ತು ನಯನಾ ರೈ ಆಯ್ಕೆಯಾಗಿದ್ದು, ಅವರ ಸ್ಥೂಲ ಪರಿಚಯ ಇಲ್ಲಿದೆ.

Advertisement

ಕರ್ನಾಟಕ ಸಂಗೀತಕ್ಕೆ ಮಹತ್ವದ ಕೊಡುಗೆ ಮಧೂರು ಬಾಲಸುಬ್ರಹ್ಮಣ್ಯಂ
ಹಿರಿಯ ಸಂಗೀತ ವಿದ್ವಾಂಸ ಉಡುಪಿಯ ಮಧೂರು ಬಾಲಸುಬ್ರಹ್ಮಣ್ಯಂ ಅವರು ಮೂಲತಃ ಕಾಸರಗೋಡು ಜಿಲ್ಲೆಯ ಮಧೂರಿನವರು. ವಿ| ಪಡುಬಿದ್ರಿ ಸುಬ್ರಾಯ ಮಾಣಿ ಭಾಗವತರ್‌, ವಿ| ಕಾಂಚನ ವೆಂಕಟಸುಬ್ರಹ್ಮಣ್ಯಂ ಅಯ್ಯರ್‌ ಅವರಲ್ಲಿ ಸಂಗೀತ ವಿದ್ಯಾಭ್ಯಾಸ ನಡೆಸಿದ್ದ ಮಧೂರು ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವತ್‌ನಲ್ಲಿ ರ್‍ಯಾಂಕ್‌ ಪಡೆದಿದ್ದರು. 25 ವರ್ಷಗಳಿಂದ ಮಂಗಳೂರು ಆಕಾಶವಾಣಿ ಕಲಾವಿದರಾಗಿರುವ ಅವರು ವಿವಿಧೆಡೆ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.  ವಿವಿಧೆಡೆ ಸಾವಿರಕ್ಕೂ ಅಧಿಕ ಸಂಗೀತ ಕಛೇರಿ, ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. “ತ್ಯಾಗರಾಜ ಘನರಾಗಪಂಚರತ್ನ ಕೃತಿಗಳು’, “ಸಂಗೀತ ಪ್ರಬೋಧಿನಿ ಮಾಲಿಕೆ-1′ ಕೃತಿಗಳನ್ನು ರಚಿಸಿದ್ದು, “ರಾಗಲಕ್ಷಣಿ’ ಪುಸ್ತಕ ಮುದ್ರಣದಲ್ಲಿದೆ. ಧ್ವನಿಸುರುಳಿಗಳಿಗೆ ಸಂಗೀತ ನಿರ್ದೇಶನ, ನೃತ್ಯರೂಪಕಗಳಿಗೆ ರಾಗ ಸಂಯೋಜನೆ, ದಾಸರ ಹಾಡು, ವಚನಗಳಿಗೆ ಸಂಗೀತ ಸಂಯೋಜನೆ ಇವರ ಇನ್ನೊಂದು ಸಾಧನೆ.

ಕಲಾವಿದ- ಸಂಘಟಕ ಮಣಿಪಾಲದ ಟಿ. ರಂಗ ಪೈ
ಟಿ. ರಂಗ ಪೈಯವರು ಹೆಸರಾಂತ ಹಿಂದೂಸ್ಥಾನೀ ಸಂಗೀತ ಕಲಾವಿದರು, ಸಂಘಟಕರು, ತೋನ್ಸೆ ಪೈ ಕುಟುಂಬಕ್ಕೆ ಸೇರಿದವರು.
ಮಣಿಪಾಲ ಎಂಐಟಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರರಾದ ಪೈಯವರು, ಹಿಂದೂಸ್ಥಾನೀ ತಾಳವಾದ್ಯ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಎರಡನೆಯ ರ್‍ಯಾಂಕ್‌ ಪಡೆದಿದ್ದರು. ಮುಂಬಯಿ ಸಂಸ್ಥೆಯಿಂದ ಸಂಗೀತ ವಿಶಾರದ, ಸಂಗೀತ ಅಲಂಕಾರ ಪದವಿ ಗಳಿಸಿದ್ದಾರೆ. ಉಡುಪಿಯ ಅಕಾಡೆಮಿ ಸಂಗೀತ ಶಾಲೆಯಲ್ಲಿ ಹಿಂದೂಸ್ಥಾನಿ ತಬ್ಲಾ ಮತ್ತು ಕರ್ನಾಟಕ ಪಿಟೀಲು ವಾದನವನ್ನು ಕಲಿತರು. ಕರ್ನಾಟಕ ಮತ್ತು ಹಿಂದೂಸ್ಥಾನೀ ಎರಡೂ ಬಗೆಯ ಸಂಗೀತಾಭ್ಯಾಸಿಯಾಗಿದ್ದರೂ ತಬ್ಲಾದಲ್ಲಿ ಉನ್ನತ ಪರಿಣತಿ ಪಡೆದವರು.  ಉಡುಪಿಯ ಅಕಾಡೆಮಿ ಸಂಗೀತ ಶಾಲೆಯನ್ನು ನಡೆಸುತ್ತಿರುವ ಮಣಿಪಾಲದ ಮ್ಯೂಸಿಕ್‌ ಆ್ಯಂಡ್‌ ಫೈನ್‌ ಆರ್ಟ್ಸ್ ಎಜುಕೇಶನ್‌ ಟ್ರಸ್ಟ್‌ನ ಕಾರ್ಯದರ್ಶಿಯಾಗಿಯೂ ಅನುಭವವಿರುವ ಪೈಯವರು 1989ರಿಂದ ಅಕಾಡೆಮಿ ಸಂಗೀತ ಶಾಲೆಯ ಗೌರವ ಪ್ರಾಂಶುಪಾಲರಾಗಿದ್ದಾರೆ.

ನೃತ್ಯ ಕ್ಷೇತ್ರದ ಸಾಧಕಿ ನಯನಾ ವಿ ರೈ ಕುದಾRಡಿ
ಪಡುವನ್ನೂರು ಗ್ರಾಮದ ಕುದಾRಡಿಯಲ್ಲಿ ವಿಶ್ವ ಕಲಾನಿಕೇತನ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಟ್ಸ್ ಆ್ಯಂಡ್‌ ಕಲ್ಚರ್‌ ನೃತ್ಯ ಸಂಸ್ಥೆಯನ್ನು ಮುನ್ನಡೆಸುತ್ತಿರುವ ವಿ| ನಯನಾ ವಿ ರೈ ಕುದಾRಡಿ ಅವರು 45 ವರ್ಷಗಳಿಂದಲೂ ಅಧಿಕ ಕಾಲದಿಂದ ಭರತನಾಟ್ಯ ನೃತ್ಯ ಪ್ರಕಾರವನ್ನು ಪಸರಿಸುತ್ತಿದ್ದಾರೆ.

ಕರ್ನಾಟಕ ಕಲಾಶ್ರೀ, ಕಲಾ ಕ್ಷೇತ್ರದ ಸಾಧಕ ವಿದ್ವಾನ್‌ ಕುದಾRಡಿ ವಿಶ್ವನಾಥ ರೈ ಅವರೊಂದಿಗೆ 1973ರಲ್ಲಿ ವಿವಾಹವಾಗಿ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಸೀನಿಯರ್‌, ವಿದ್ವತ್‌ ಪರೀಕ್ಷೆ ಪೂರೈಸಿದರು. 1985ರಲ್ಲಿ ಇವರಿಬ್ಬರು ನೃತ್ಯ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಭರತನಾಟ್ಯ ಕಲಿಸಿದ್ದಾರೆ. ವಿಶ್ವನಾಥ ಮತ್ತು ನಯನಾ ರೈ ಅವರ ಶಿವ ಪಾರ್ವತಿ ನೃತ್ಯ ಪ್ರದರ್ಶನವು ನೃತ್ಯರಂಗದ ಅಪೂರ್ವ ಜೋಡಿ ಎಂಬ ಖ್ಯಾತಿ ತಂದಿತ್ತು. “ಮೂಟೆ ಕೆಳಗಿಳಿಸಿ’ ಎಂಬ ಬೀದಿ ನಾಟಕದ ನೃತ್ಯ ನಿರ್ದೇಶನ, ಪಾತ್ರ ನಿರ್ವಹಿಸಿ ಜನಮನ್ನಣೆ ಗಳಿಸಿತು.

Advertisement

ಸರಕಾರಿ ಶಾಲೆಯ ಶಿಕ್ಷಕಿಯಾಗಿ, ಪ್ರಭಾರ ಮುಖ್ಯಗುರುವಾಗಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಳಿಕ ನೃತ್ಯ ಸಂಸ್ಥೆಯಲ್ಲಿ ಸಂಫೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 2002ರಲ್ಲಿ ಜನಮೆಚ್ಚಿದ ಶಿಕ್ಷಕಿ, ಜಿಲ್ಲಾ ಮಟ್ಟದ ಉತ್ತಮ ದೈಹಿಕ ಶಿಕ್ಷಣ ಶಿಕ್ಷಣ ಶಿಕ್ಷಕಿ ಪ್ರಶಸ್ತಿಯು ಇವರಿಗೆ ಲಭಿಸಿದೆ. ಕಲಾ ಕ್ಷೇತ್ರದ ಸಾಧನೆಗೆ ಹಲವು ಪುರಸ್ಕಾರಗಳು ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next