Advertisement

ಎರಡು ಪರಿವಾರದಿಂದ ರಾಜ್ಯ ಲೂಟಿ;ಕರ್ನಾಟಕದಲ್ಲಿ ಬಿಜೆಪಿಗಿದೆ ದೋಷ: ಶಾ

12:49 AM Feb 15, 2019 | |

ಸಿಂಧನೂರು/ಹೊಸಪೇಟೆ: ಗಾಂಧಿ ಪರಿವಾರ ಹಾಗೂ ದೇವೇ ಗೌಡರ ಕುಟುಂಬಗಳು ಸೇರಿ ಕರ್ನಾಟಕವನ್ನು ಲೂಟಿ ಮಾಡುತ್ತಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಆರೋಪಿಸಿದರು. ಅವರು ಗುರುವಾರ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಸಮಾವೇಶ ಮತ್ತು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಜಿಲ್ಲಾ ಘಟಕ ಏರ್ಪಡಿಸಿದ್ದ ಪ್ರಬುದ್ಧರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

Advertisement

ಕರ್ನಾಟಕದಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ದೋಷವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬೇಕಾಗುವ ಮ್ಯಾಜಿಕ್‌ ನಂಬರ್‌ಗಿಂತ ಕಡಿಮೆ ಸೀಟ್‌ಗಳು ಬಂದಿದ್ದು ಪಕ್ಷದ ದುರ್ದೈವ. ಆದರೆ, ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ ವಿರೋಧ ಪಕ್ಷದಲ್ಲಿದೆ. ಅತಿ ಕಡಿಮೆ ಸ್ಥಾನ ಪಡೆದ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. “ನಾನು ರಾಜ್ಯದ ಜನರಿಗಲ್ಲ, ಸೋನಿಯಾಗಾಂಧಿಗೆ ಉತ್ತರದಾಯಿ’ ಎಂದು ಹೇಳುತ್ತಾರೆ. ಅವರು ಕಾಂಗ್ರೆಸ್‌
ಮುಲಾಜಿನಲ್ಲಿದ್ದಾರಂತೆ ಎಂದರು.

ಕುಮಾರಸ್ವಾಮಿ ನಾನು ವಿಷಕಂಠನಾಗಿದ್ದೇನೆ ಎನ್ನುತ್ತಾರೆ. ಆದರೆ, ಅವರು ಜನರಿಗಾಗಿ ವಿಷಕಂಠನಾಗಿಲ್ಲ. ಕುಟುಂಬಕ್ಕಾಗಿ ವಿಷ ಕುಡಿದಿ ದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಭ್ರಷ್ಟಾಚಾರದ ವಿಷವನ್ನು ಗಂಟಲಲ್ಲಿಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಐದು ವರ್ಷದಲ್ಲಿ ಬಿಜೆಪಿ ಏನು ಮಾಡಿದೆ ಎಂದು ಕುಮಾರಸ್ವಾಮಿ ನಮ್ಮನ್ನು ಪ್ರಶ್ನಿಸುತ್ತಾರೆ. ಆದರೆ, ನಾನು ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ರಾಜ್ಯದ ಜನರಿಗೆ ಉತ್ತರ ನೀಡಲು ಬಂದಿದ್ದೇನೆ ಎಂದರು.

ಯುಪಿಎ ಸರ್ಕಾರದ ಅವ ಧಿಯಲ್ಲಿ ರಾಜ್ಯಕ್ಕೆ ಐದು ವರ್ಷದಲ್ಲಿ 88,583 ಕೋಟಿ ಬಂದಿದ್ದರೆ; ನಮ್ಮ ಸರ್ಕಾರ 2.19 ಲಕ್ಷ ಕೋಟಿ ನೀಡಿದೆ. 134 ಯೋಜನೆಗಳನ್ನು ಜಾರಿಗೊಳಿಸಿದೆ. ದೇಶದ 13 ಕೋಟಿಜನರಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಲಾಗಿದೆ. 8 ಕೋಟಿ ಜನರಿಗೆ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. 50 ಕೋಟಿ ಜನರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಹಳ್ಳಿ ಹಳ್ಳಿಗಳಿಗೂ ವಿದ್ಯುತ್‌  ಸೌಲಭ್ಯ ಹಾಗೂ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ರೈತರ 41 ಸಾವಿರ ಕೋಟಿ ರೂ.ಸಾಲ ಸಂಪೂರ್ಣ ಮನ್ನಾ ಮಾಡಿದ್ದೇವೆ ಎಂದು ರಾಹುಲ್‌ ಗಾಂ ಧಿ ಹೇಳಿದ್ದರು. ಆದರೆ, ಈವರೆಗೆ 1,100 ಕೋಟಿ ರೂ. ಮಾತ್ರ ಮನ್ನಾ ಆಗಿದೆ. ಆದರೆ, ನಾವು 15 ಕೋಟಿ ರೈತರಿಗೆ ಪ್ರತಿ ವರ್ಷ ಆರು 6 ಸಾವಿರ ಕೋಟಿ ಹಾಕುವ ಮೂಲಕ ಶಾಶ್ವತ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿ ಮಾಡಿದ್ದೇವೆ. ಇದರಿಂದ ರೈತರ ಬಾಳು ಬೆಳಗಲಿದೆ. ಬಡ-ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. 40 ಲಕ್ಷದವರೆಗೆ ವ್ಯಾಪಾರ ಮಾಡುವವರಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಶಾಸಕರು ನಮ್ಮ ಸಿಎಂ ಸಿದ್ದರಾಮಯ್ಯ ಎನ್ನುತ್ತಾರೆ. ಸಿಎಂ ಕುಮಾರಸ್ವಾಮಿ ನಾನು ಕ್ಲರ್ಕ್‌ನಂತೆ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ. ಅವರು ರಾಹುಲ್‌ ಬಾಬಾ ಹೇಳಿದಂಗೆ ಕೆಲಸ ಮಾಡಬೇಕಿದೆ. ಅಷ್ಟು ಕಷ್ಟವಿದ್ದರೆ ಆ ಸ್ಥಾನದಲ್ಲಿ ಯಾಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದರು.

Advertisement

ದಿನಕ್ಕೊಬ್ಬ ಪ್ರಧಾನಿ: ದೇಶದಲ್ಲಿ ಎರಡು ರೀತಿಯ ಚುನಾವಣೆ ನಡೆದಿದೆ. ಒಂದು ಎನ್‌ಡಿಎ ಪಕ್ಷಗಳದ್ದು, ಮತ್ತೂಂದು ಮಹಾಘಟಬಂಧನ್‌. ಆದರೆ, ಘಟಬಂಧನ್‌ಗೆ ನಾಯಕ ಯಾರು, ಪ್ರಧಾನಿ ಯಾರಾಗುತ್ತಾರೆ ಎಂಬುದಕ್ಕೆ ಉತ್ತರವೇ ಇಲ್ಲ. ಒಂದು ವೇಳೆ ಘಟಬಂಧನ್‌ ಅ ಧಿಕಾರಕ್ಕೆ ಬಂದಲ್ಲಿ ದೇಶಕ್ಕೆ ದಿನಕ್ಕೊಬ್ಬರು ಪ್ರಧಾನಿ ಆಗಲಿದ್ದಾರೆ. ಸೋಮವಾರ ಮಾಯಾವತಿ, ಮಂಗಳವಾರ ಮಮತಾ, ಬುಧವಾರ ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಶುಕ್ರವಾರ ಅಖೀಲೇಶ್‌..ಭಾನುವಾರ ದೇಶಕ್ಕೆ ರಜೆ ಎಂದು ವ್ಯಂಗ್ಯವಾಡಿದರು. ಈ ಬಾರಿಯೂ ಪಕ್ಷದ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲ ದಾಖಲೆ ಧೂಳಿಪಟ ಆಗುವಂತೆ ಬಿಜೆಪಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ರಾಮಮಂದಿರ ನಿಶ್ಚಿತ: ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಅಮಿತ್‌ ಶಾ, ಅಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣ ಮಾಡಲಾಗುವುದು. ಕಾಂಗ್ರೆಸ್‌ ಸುಪ್ರೀಂಕೋರ್ಟ್‌ ತೀರ್ಪು ಚುನಾವಣೆ ಬಳಿಕ ಬರಲಿ ಎಂದಿತ್ತು. ಆದರೆ, ಅದೇ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ನಾವು ಕಟಿಬದ್ಧರಾಗಿದ್ದೇವೆ. ಈಗಾಗಲೇ ಬಿಜೆಪಿ ಸರ್ಕಾರ ದೇವಸ್ಥಾನಕ್ಕಾಗಿ 42 ಎಕರೆ ಭೂಮಿ ಹಿಂದಕ್ಕೆ ನೀಡಲು ಸಿದ್ಧವಾಗಿದೆ. ಶೀಘ್ರದಲ್ಲೇ ಭವ್ಯವಾದ ಮಂದಿರ ನಿರ್ಮಾಣಗೊಳ್ಳಲಿದೆ. ಇದೇ ಮಾತನ್ನು ಬೇರೆ ಪಕ್ಷಗಳು ಚುನಾವಣೆ ಮುನ್ನವೇ ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.

ರಾಹುಲ್‌ ಬಾಬಾ ಪಠಣ
ಅಮಿತ್‌ ಶಾ ಭಾಷಣದುದ್ದಕ್ಕೂ ರಾಹುಲ್‌ ಗಾಂಧಿ  ಅವರನ್ನು ರಾಹುಲ್‌ ಬಾಬಾ ಎಂದೇ ಸಂಬೋಧಿ ಸಿದರು. ಅವರು ಹಾಗೆಕರೆದಾಗಲೆಲ್ಲ ಕಾರ್ಯಕರ್ತರಲ್ಲಿ ನಗು ಮೂಡುತ್ತಿತ್ತು. ರಾಹುಲ್‌ ಬಾಬಾ ಪ್ರಶ್ನಿಸುತ್ತಾರೆ, ರಾಹುಲ್‌ ಬಾಬಾ ಹೇಳಿದ್ದರು ಎಂದು ಹೇಳುತ್ತಿದ್ದರು. ಆದರೆ, ಮಹಾಘಟಬಂಧನ್‌ ಪ್ರಧಾನಿ ಹೆಸರು ಗಳನ್ನು ಉಲ್ಲೇಖೀಸುವಾಗ ರಾಹುಲ್‌ ಗಾಂಧಿ  ಹೆಸರು ಹೇಳಲಿಲ್ಲ. ಆಡಿಯೋ ಬಗೆ ಚಕಾರ ಎತ್ತಲಿಲ್ಲ ಎರಡೂ ಕಡೆಯೂ ಎರಡು ತಾಸು ವಿಳಂಬವಾಗಿ ಅಮಿತ್‌ ಶಾ ಕಾರ್ಯಕ್ರಮಕ್ಕೆ ಆಗಮಿಸಿದರು. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ “ಆಪರೇಷನ್‌ ಆಡಿಯೋ’ ಬಗ್ಗೆ ಅವರು ಚಕಾರ ಎತ್ತಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೆಸರಾಗಲಿ, ಆಡಿಯೋ ಪ್ರಕರಣವಾಗಲಿ, ಹಾಸನ ಶಾಸಕರ ಮನೆ ಮೇಲೆ ನಡೆದ ದಾಳಿ ವಿಚಾರವಾಗಲಿ ಮಾತನಾಡಲಿಲ್ಲ. ಭಾಷಣದುದ್ದಕ್ಕೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೆ ವಿನಃ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಎರಡೂ ಸಭೆಗಳಿಗೆ ಹಾಗೂ ಶಾಸಕ ಕೆ.ಶಿವನಗೌಡ ನಾಯಕ ಸಿಂಧನೂರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

ಕಾಂಗ್ರೆಸ್‌ನಿಂದ ಪ್ರತಿಭಟನೆ
ಸಿಂಧನೂರು: ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರು, ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗಮಿಸಿದ್ದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ “ಅಮಿತ್‌ ಶಾ ಗೋ ಬ್ಯಾಕ್‌’ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ರಾಜ್ಯದಲ್ಲಿ ಬಿಜೆಪಿ ಕುದುರೆ ವ್ಯಾಪಾರಕ್ಕೆ ನಿಂತಿದೆ. ಪ್ರಧಾನಿ ಮೋದಿ ಬರೀ ಸುಳ್ಳು ಭರವಸೆ ನೀಡಿ ದೇಶದ ಜನರಿಗೆ ಮೋಸ ಮಾಡುತ್ತಿದ್ದಾರೆ. ಹೈಜಾಕ್‌ ತಂತ್ರಗಾರಿಕೆಯ ಕುತಂತ್ರ ನೀತಿಯನ್ನು ಮೋದಿ ಅನುಸರಿಸುತ್ತಿದ್ದಾರೆ. ಇಂತಹ ಪಕ್ಷಗಳ ರಾಷ್ಟ್ರ ನಾಯಕರಿಗೆ ರಾಜ್ಯಕ್ಕೆ ಬರುವ ಯಾವುದೇ ನೈತಿಕತೆ ಇಲ್ಲ. ಇವರ ದುರಾಡಳಿತ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಹಾಗೂ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ
ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next