ಬೆಂಗಳೂರು: ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ರಾಜ್ಯ ಸರಕಾರ ಜಾರಿಗೆ ತಂದಿದ್ದ ಅಧ್ಯಾದೇಶಕ್ಕೆ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ.
ಮೀಸಲಾತಿ ಪ್ರಮಾಣ ಹೆಚ್ಚಿಸುವ “ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯದ ಆಧೀನ ಉದ್ಯೋಗಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಆಧ್ಯಾದೇಶ-2022’ಕ್ಕೆ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರು ಅ.23ರಂದು ಅಂಕಿತ ಹಾಕಿದ್ದಾರೆ. ಈ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಏರಿಕೆ ಅಧಿಕೃತಗೊಂಡಂತಾಗಿದೆ.
ನ್ಯಾ| ನಾಗಮೋಹನದಾಸ್ ಸಮಿತಿಯ ಶಿಫಾರಸಿನಂತೆ ಎಸ್ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಮತ್ತು ಎಸ್ಟಿ ಮೀಸಲಾತಿಯನ್ನು ಶೇ.3ರಿಂದ7ಕ್ಕೆ ಹೆಚ್ಚಿಸಲು ಅ.7ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅ.8ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾ| ನಾಗಮೋಹನದಾಸ್ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳುವ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಅ.20ರಂದು ಸಚಿವ ಸಂಪುಟ ಸಭೆಯಲ್ಲಿ ಅಧ್ಯಾದೇಶ ಹೊರಡಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.
ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ, ಉಳಿದ ವರ್ಗಗಳ ಮೀಸಲಾತಿಯಲ್ಲಿ ಯಾವುದೇ ಬಾಧಕ ಆಗುವುದಿಲ್ಲ ಎಂಬುದು ಸಹಿತ ಮೀಸಲಾತಿ ಹೆಚ್ಚಳದ ಎಲ್ಲ ಪ್ರಕ್ರಿಯೆಗಳನ್ನು ಆಧ್ಯಾದೇಶದಲ್ಲಿ ವಿವರಿಸಲಾಗಿದೆ. ಆಧ್ಯಾದೇಶವನ್ನು ಅ.23ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಸಿಎಂ ಸಂತಸ: ರಾಜ್ಯ ಸರಕಾರ ಜಾರಿಗೆ ತಂದಿದ್ದ ಅಧ್ಯಾ ದೇಶಕ್ಕೆ ರಾಜ್ಯಪಾಲರು ಅನು ಮೋದನೆ ನೀಡಿರುವುದಕ್ಕೆ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.