Advertisement

Karnataka: ಆರಂಭದ ದಿನಗಳಲ್ಲೇ “ಪರ್ಸೆಂಟೇಜ್‌” ಸುಳಿಗೆ ಸಿಲುಕಿದ ಸರಕಾರ

12:50 AM Aug 13, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ನೂರು ದಿನಗಳನ್ನು ಪೂರೈಸುವ ಮುನ್ನವೇ ಹಿಂದಿನ ಬಿಜೆಪಿ ಸರಕಾರದಂತೆ “ಪರ್ಸೆಂಟೇಜ್‌’ ಮಸಿ ಮೆತ್ತಿಸಿಕೊಂಡಿದೆ. ರಾಜ್ಯದ ಜನತೆಗೆ ಭ್ರಷ್ಟಾಚಾರರಹಿತ ಆಡಳಿತದ ವಾಗ್ಧಾನ ನೀಡಿ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲೇ ಆರೋಪದ ಸುಳಿಗೆ ಸಿಲುಕಿದ್ದು, ಅದರಿಂದ ಹೊರಬರಲು ಸರಕಾರ ಒದ್ದಾಡುತ್ತಿದೆ.

Advertisement

ಕಾಂಗ್ರೆಸ್‌ ಸರಕಾರದ ವಿರುದ್ಧ ಭ್ರಷ್ಟಾಚಾರ, ವರ್ಗಾವಣೆ ದಂಧೆ ಹಾಗೂ ಗುತ್ತಿಗೆದಾರರಿಂದ ಕಮಿಷನ್‌ಗೆ ಬೇಡಿಕೆ ಎಂದು ಬಿಜೆಪಿ, ಜೆಡಿಎಸ್‌ ಪಕ್ಷಗಳು ಮಾಡಿರುವ ಗುರುತರ ಆರೋಪಗಳು ಈಗ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿವೆ. ಅಷ್ಟೇ ಅಲ್ಲ, ಆಡಳಿತ ಪಕ್ಷದೊಳಗೆ ತಲ್ಲಣ ಸೃಷ್ಟಿಸಿವೆ. ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಇಡೀ ದೇಶ ಕರ್ನಾಟಕದ ಕಡೆ ನೋಡುತ್ತಿರುವಾಗಲೇ ಭ್ರಷ್ಟಾಚಾರದ ವಾಸನೆಯೂ ದಿಲ್ಲಿ ತನಕ ಹರಡಿದೆ. ಈ ಬೆಳವಣಿಗೆ ದಿಲ್ಲಿಯ ಕಾಂಗ್ರೆಸ್‌ ನಾಯಕರನ್ನು ಚಿಂತೆಗೀಡು ಮಾಡಿದೆ.

ಕಾಂಗ್ರೆಸ್‌ಗೆ ತಿರುಗುಬಾಣ
ಚುನಾವಣೆಗೆ ಮುನ್ನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್‌ ಬಳಸಿದ “40 ಪರ್ಸೆಂಟ್‌ ಸರಕಾರ’, “ಪೇಸಿಎಂ’ ಮತ್ತಿತರ ಅಸ್ತ್ರಗಳನ್ನೇ ಈಗ ಬಿಜೆಪಿ ಕಾಂಗ್ರೆಸ್‌ಗೆ ತಿರುಗುಬಾಣವಾಗಿ ಬಳಸಲು ಮುಂದಾಗಿದೆ.

ಸರಕಾರ ಉತ್ತಮ ಆರಂಭವನ್ನಂತೂ ಮಾಡಿದೆ. ಚುನಾವಣ ಪೂರ್ವದಲ್ಲಿ ರಾಜ್ಯದ ಜನತೆಗೆ ವಾಗ್ಧಾನ ನೀಡಿದಂತೆ 5 ಗ್ಯಾರಂಟಿಗಳ ಪೈಕಿ ಈಗಾಗಲೇ ಮೂರನ್ನು ಜಾರಿಗೊಳಿಸಿದೆ. “ಗೃಹಲಕ್ಷ್ಮಿ’ಗೆ ಆ. 27ರಂದು ಬೆಳಗಾವಿಯಲ್ಲಿ ಚಾಲನೆ ಕೊಡಲಾಗುತ್ತಿದೆ. ಯುವನಿಧಿ ಡಿಸೆಂಬರ್‌ನಿಂದ ಚಾಲನೆಗೆ ಬರಲಿದೆ. ಸಿಎಂ ಸಿದ್ದರಾಮಯ್ಯ ಸಂಪನ್ಮೂಲ ಸಂಗ್ರಹಿಸಿಕೊಂಡು ಒಂದೊಂದೇ ಗ್ಯಾರಂಟಿಗಳನ್ನು ಜನರಿಗೆ ನೀಡುತ್ತಿದ್ದಾರೆ. ಇದರಿಂದ ಸರಕಾರ, ಪಕ್ಷ ಹಾಗೂ ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚುತ್ತಿದೆ.
ಬಿಜೆಪಿ ಸರಕಾರದ ವಿರುದ್ಧ ಸಾಲು ಸಾಲು ಹೋರಾಟ ನಡೆಸಿದ ಕಾಂಗ್ರೆಸ್‌ಗೆ ಗುತ್ತಿಗೆದಾರರ ಆರೋಪವೇ ವರ ವಾಗಿತ್ತು. “40 ಪರ್ಸೆಂಟ್‌ ಕಮಿಷನ್‌’ ಎಂಬ ಗುತ್ತಿಗೆದಾರರ ಆರೋಪವನ್ನು ಆಗ ದೊಡ್ಡ ಅಸ್ತ್ರವಾಗಿ ಬಳಸಿಕೊಂಡಿತ್ತು. ಜತೆಗೆ ಬೆಲೆ ಏರಿಕೆ ಸೇರಿದಂತೆ ಬಿಜೆಪಿಯ ಇತರ ಲೋಪಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಯಿತು.

ಈಗ ಕಾಲ ಬದಲಾಗಿದೆ. ಅದೇ ಗುತ್ತಿಗೆದಾರರು ಕಾಂಗ್ರೆಸ್‌ ಸರಕಾರದ ವಿರುದ್ಧ ಕಮಿಷನ್‌ ಬೇಡಿಕೆ ಆರೋಪ ಮಾಡಿದ್ದಾರೆ. ರಾಜ್ಯಪಾಲರು, ವಿಪಕ್ಷದವರನ್ನು ಭೇಟಿಯಾಗಿ ಬಾಕಿ ಬಿಲ್‌ ಬಿಡುಗಡೆಗೆ ಸಹಾಯ ಕೋರಿದ್ದಾರೆ. ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ನಾಯಕರು ಒಕ್ಕೊರಲಿನಿಂದ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೂ ಆಗ್ರಹಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರದ ವಿರುದ್ಧ ಬಿಜೆಪಿ ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next