ನವದೆಹಲಿ: ಹಿಜಾಬ್ ಕುರಿತ ಅರ್ಜಿಯ ವಿಚಾರಣೆಯನ್ನು ಶೀಘ್ರ ನಡೆಸಲಾಗುವುದೆಂದು ಬುಧವಾರ (ಫೆ.22 ರಂದು) ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿ, ತುರ್ತು ವಿಚಾರಣೆಯನ್ನು ನಡೆಸಿ ಎಂದು ಸುಪ್ರೀಂ ಕೋರ್ಟಿಗೆ ವಿದ್ಯಾರ್ಥಿನಿಯರ ಗುಂಪೊಂದು ಬುಧವಾರ ಅರ್ಜಿ ಸಲ್ಲಿಸಿದೆ.
ವಿದ್ಯಾರ್ಥಿನಿಯರ ಪರ ವಕೀಲರಾಗಿರುವ ಶಾದನ್ ಫರಾಸತ್ ʼಮಾರ್ಚ್ 9 ರಿಂದ ಮುಂಬರುವ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದೆ. ಹಿಜಾಬ್ ಧರಿಸಿ ಪರೀಕ್ಷೆಗೆ ಕೂತುಕೊಳ್ಳಲು ಅವಕಾಶ ನೀಡದಿದ್ದರೆ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗುತ್ತದೆ ಎಂದು ಪ್ರಸ್ತಾಪಿಸಿದಾಗ ಸಿಜೆಐ “ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಯಾರು ತಡೆಯುತ್ತಿದ್ದಾರೆ? . ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಶಾದನ್, ಹಿಜಾಬ್ ನಿಷೇಧದಿಂದ ಅನೇಕ ವಿದ್ಯಾರ್ಥಿನಿಯರು ಖಾಸಗಿ ಶಿಕ್ಷಣ ಸಂಸ್ಥೆಗೆ ದಾಖಲಾಗಿದ್ದಾರೆ. ಆದರೆ ಪರೀಕ್ಷೆಗಳು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದ್ದು, ಅಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಪರೀಕ್ಷೆ ಬರೆಯಲು ಸಿದ್ದರಿಲ್ಲ. ಆದಷ್ಟು ಬೇಗ ಈ ಬಗ್ಗೆ ತುರ್ತು ವಿಚಾರಣೆ ನಡೆಸಿ ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಶೀಘ್ರ ಪೀಠ ರಚಿಸಿ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಹೇಳಿದೆ.
2022 ರ ಅಕ್ಟೋಬರ್ ನಲ್ಲಿ ಹಿಜಾಬ್ ನಿಷೇಧ ಬಗ್ಗೆ ನ್ಯಾಯಮೂರ್ತಿ ಹೇಮಂತ್ ಗುಪ್ತಾ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಒಳಗೊಂಡ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿತ್ತು.